ಪತಿಯ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಪತ್ನಿಯ ಪ್ರಕರಣದಲ್ಲಿ, ಪತಿಯ ಮೇಲೆ ಆತ್ಮಹತ್ಯೆ ಪ್ರಚೋದನೆ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆಗೆ ಹೈಕೋರ್ಟ್ ಆದೇಶಿಸಿದೆ. ಪತಿಯ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.

 ಬೆಂಗಳೂರು (ಮೇ.30): ಪತಿಯ ಕಿರುಕುಳದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದರೂ ಪತಿ ಮೇಲೆ ಬಿಎನ್‌ಎಸ್‌ ಸೆಕ್ಷನ್ 108 ಅಡಿಯಲ್ಲಿ ಕೇಸ್‌ ದಾಖಲಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ಬಾಣಸವಾಡಿ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.

ಪ್ರಕರಣದ ಸಂಬಂಧ‌ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಆರ್.ಎಸ್.ಪಾಳ್ಯದ ನಿವಾಸಿ ನಿಕ್ಸೋನ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಏನಿದು ಪ್ರಕರಣ?

ಕಳೆದ 2025ರ ಅ.20ರಂದು ಅರ್ಜಿದಾರ ಹಾಗೂ ಆತನ ಪತ್ನಿ ನಡುವೆ ಜಗಳ ನಡೆದು ಪತ್ನಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮನೆಯ 2ನೇಯ ಮಹಡಿಯಿಂದ ಕೆಳಗೆ ಜಿಗಿದಿದ್ದರು. ಪರಿಣಾಮ ಬೆನ್ನುಮೂಳೆ ಮತ್ತು ಕೈ ಮುರಿದಿತ್ತು. ನಂತರ ಸಂಪೂರ್ಣ ಚೇತರಿಸಿಕೊಂಡಿದ್ದರು. ಆತ್ಮಹತ್ಯೆಗೆ ಪ್ರಯತ್ನಿಸಿದ ಅರ್ಜಿದಾರರ ಪತ್ನಿ ಬದುಕಿರುವಾಗ ತನಿಖಾಧಿಕಾರಿಗಳು ಬಿಎನ್‌ಎಸ್ ಸೆಕ್ಷನ್ 108ರ ಆಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧ ಮೇಲೆ‌ ಅರ್ಜಿದಾರನ ಮೇಲೆ‌ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಮೂರ್ಖತನ ಎಂದು ಪೀಠ ಕಟುವಾಗಿ ನುಡಿದಿದೆ.

ಅಜಾಗರೂಕತೆಯಿಂದ ಅಥವಾ ಕಾನೂನು ಕ್ರಮ ಕೈಗೊಳ್ಳುವ ಆತುರದಲ್ಲಿ ದೋಷಾರೋಪ‌ ಪಟ್ಟಿಯನ್ನು ತಪ್ಪಾಗಿ ಸಲ್ಲಿಸಲಾಗಿದೆ. ಇದರಿಂದ ಈವರೆಗೂ ಅರ್ಜಿದಾರರನ್ನು ಬಂಧಿಸಿ ಇಡಲಾಗಿದೆ‌.‌ ಇದು ತನಿಖೆಯ ಅವಿವೇಕ ಮತ್ತು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಅಸಡ್ಡೆ ಹೊಂದಿರುವುದನ್ನು ಪ್ರತಿಬಿಂಬಿಸುತ್ತದೆ. ತನಿಖಾಧಿಕಾರಿಯ (ಇನ್‌ಸ್ಪೆಕ್ಟರ್‌ ) ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ತೋರುವ ಈ ಪ್ರಕರಣ ನ್ಯಾಯಾಂಗದ ಮನಃಸ್ಸಾಕ್ಷಿಗೆ ಆಘಾತ ಉಂಟು ಮಾಡಿದೆ.‌‌ ಹಾಗಾಗಿ ಅರ್ಜಿದಾರರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು‌. ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಿ,‌ ಅದರ ಆಧಾರದಲ್ಲಿ ಕೈಗೊಂಡ ಕ್ರಮದ ಬಗ್ಗೆ 3 ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ರಾಜಿ ಸಂಧಾನ: ಪತಿ ವಿರುದ್ಧ ಕೇಸ್‌ ರದ್ದು

ಪತಿ ಹಾಗೂ ಪತ್ನಿ ಇನ್ನೂ ಜೊತೆಯಾಗಿ ಜೀವನ ಮಾಡಲಾಗುವುದು ಹಾಗೂ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವುದಾಗಿ‌ ತಿಳಿಸಿದ ಹಿನ್ನೆಲೆಯಲ್ಲಿ ಅರ್ಜಿದಾರನ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.