ಮೈಸೂರಿಗೆ ಆಗಮಿಸಿದ ಮೋದಿ, ರ್‍ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ವಾಸ್ತವ್ಯ, ಹೋಟೆಲ್ ಸುತ್ತ ಬೃಹತ್ ಪರದೆ ನಿರ್ಮಾಣ
ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿದ್ದಾರೆ. ಪ್ರತಿಷ್ಠಿತ ರ್‍ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಉಳಿದುಕೊಂಡಿದ್ದು, ಹೋಟೆಲ್ ಮುಂಭಾಗದ ಪ್ರಧಾನಿ ಚಲನವಲನ ತಿಳಿಯದಂತೆ ಬೃಹತ್ ಪರದೆ ನಿರ್ಮಾಣ ಮಾಡಲಾಗಿದೆ.
ಮೈಸೂರು (ಏ.8): ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಮೋದಿ ಬಂದಿಳಿದಿದ್ದು, ಮೋದಿಗೆ ಪ್ರಾದೇಶಿಕ ಆಯುಕ್ತ ಡಾ.ಪ್ರಕಾಶ್, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಅಧಿಕಾರಿಗಳು ಸ್ವಾಗತ ಕೋರಿದರು. ನೀತಿ ಸಂಹಿತೆ ಜಾರಿ ಹಿನ್ನಲೆ ಜನಪ್ರತಿನಿಧಿಗಳ ಸ್ವಾಗತಕ್ಕೆ ನಿರ್ಬಂಧ ಹೀಗಾಗಿ ಸರಕಾರದ ಅಧಿಕಾರಿಗಳು ಸ್ವಾಗತ ಕೋರಿದರು.
ಬಳಿಕ ಮೋದಿ ಅವರು ಮೈಸೂರಿನ ಎಂ.ಜಿ.ರಸ್ತೆಯಲ್ಲಿರುವ ಪ್ರತಿಷ್ಠಿತ ರ್‍ಯಾಡಿಸನ್ ಬ್ಲೂ ಹೋಟೆಲ್ ನತ್ತ ತೆರಳಿದರು. ಇಂದು ರಾತ್ರಿ ಹೋಟೆಲ್ ನಲ್ಲೇ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಮೋದಿ ಆಗಮನದ ಹಿನ್ನೆಲೆ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಹೋಟೆಲ್ ಮುಂಭಾಗದ ಪ್ರಧಾನಿ ಚಲನವಲನ ತಿಳಿಯದಂತೆ ಬೃಹತ್ ಪರದೆ ನಿರ್ಮಾಣ ಮಾಡಲಾಗಿದೆ. ಮೋದಿ ವೀಕ್ಷಣೆಗೆ ಅವಕಾಶ ಸಿಗದಂತೆ 200 ಮೀಟರ್ ದೂರದಲ್ಲಿ ಸಾರ್ವಜನಿಕರಿಗೆ ತಡೆ ಹಾಕಲಾಗಿದೆ. ರ್‍ಯಾಡಿಸನ್ ಬ್ಲೂ ಹೋಟೆಲ್ ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಒಂದು ಕಿ.ಮೀ ಹಿಂದೆಯೇ ಬಂದ್ ಮಾಡಲಾಗಿದೆ.
ಏಪ್ರಿಲ್ 9 ರಂದು ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಬಂಡೀಪುರದಲ್ಲಿ ಸಫಾರಿ ನಡೆಸಲಿದ್ದಾರೆ. ಬೆಳಗ್ಗೆ 7 ಕ್ಕೆ ಬಂಡೀಪುರದ ಮೇಲುಕಾಮನಹಳ್ಳಿ ಬಳಿಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದು, ಅಲ್ಲಿಂದ ಕಾರಿನಲ್ಲಿ ಬಂಡೀಪುರ ಕ್ಯಾಂಪ್ ಗೆ ಹೊರಡಲಿದ್ದಾರೆ. ಬಂಡೀಪುರ ಕ್ಯಾಂಪ್ ನ ಸಫಾರಿ ಕೇಂದ್ರದ ಬಳಿ ಸಫಾರಿಗೆ ಜೀಪ್ ನಲ್ಲಿ ತೆರಳಲಿದ್ದಾರೆ. ಸುಮಾರು 22 ಕಿಮೀ ಸಫಾರಿ ನಡೆಸಲಿದ್ದಾರೆ. ಬಂಡೀಪುರದ ಬೊಳು ಗುಡ್ಡ, ಮರಳ್ಳಾಲ ಕ್ಯಾಂಪ್, ಟೈಗರ್ ರೋಡ್, ಬಾರ್ಡರ್ ರೋಡ್ ನಲ್ಲಿ ಮೋದಿ ಸಫಾರಿ ನಡೆಸಲಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೆಳ್ಳಿ-ಬೊಮ್ಮನ್ನನ್ನು ಭೇಟಿ ಮಾಡಲಿರುವ ಪ್ರಧಾನಿ
ಮರಳ್ಳಾಲ ಕಳ್ಳಬೇಟೆ ಶಿಬಿರ ಬಳಿ ಟೀ ಕುಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲಿಂದ ಸಫಾರಿ ವಾಹನದ ಮೂಲಕ ಕೆಕ್ಕನಹಳ್ಳ ಚೆಕ್ ಪೋಸ್ಟ್ಗೆ ಆಗಮಿಸಲಿದ್ದಾರೆ. ನಂತರ ಸಫಾರಿ ವಾಹನದಿಂದ ಇಳಿದು ಕಾರಿನಲ್ಲಿ ಮಧುಮಲೈನತ್ತ ಪಯಣ ಮುಂದುವರೆಸಲಿದ್ದಾರೆ. ತಮಿಳುನಾಡಿನ ಮಧುಮಲೈ ನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಆನೆ ಶಿಬಿರದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್,ಬೆಳ್ಳಿ ದಂಪತಿ ಭೇಟಿ ಮಾಡಲಿದ್ದಾರೆ. ಬಳಿಕ ದಂಪತಿಯನ್ನು ಸನ್ಮಾನಿಸಲಿದ್ದಾರೆ. ನಂತರ ಅಧಿಕಾರಿಗಳೊಂದಿಗೆ 5 ರಿಂದ 10 ನಿಮಿಷ ಚರ್ಚೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನಲೆ, ಶಾಪಿಂಗ್ ಮಾಲ್‌ಗೆ ಬೀಗ, ಬಿಗಿ ಪೊಲೀಸ್ ಬಂದೋಬಸ್ತ್!
ಬಳಿಕ ಮಸನಿಗುಡಿ ಸಮೀಪದ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿನತ್ತ ಹೊರಡಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮೋದಿ ಕಾರ್ಯಕ್ರಮ ತೆಗೆಯಲು ಮಾಧ್ಯಮದವರಿಗೂ ಅವಕಾಶ ಕೊಟ್ಟಿಲ್ಲ. ಗುಂಡ್ಲುಪೇಟೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಯಾರೂ ಒಳಗೆ ಹೋಗದಂತೆ ಭದ್ರತೆ ಕೈಗೊಂಡಿರುವ ಪೊಲೀಸರು. ಮೇಲುಕಾಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಜನರಿಗೂ ಕೂಡ ಮೋದಿ ಬರುವ ವೇಳೆ ಹೊರಗೆ ಬಾರದಂತೆ ಮೌಖಿಕ ಸೂಚನೆ. ಹಳ್ಳಿಗಳಿಂದ ಮೇಲುಕಾಮನಹಳ್ಳಿ, ಊಟಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೂ ಸೆಕ್ಯೂರಿಟಿ. ಯಾರೂ ಕೂಡ ಮ.12 ರವರೆಗೂ ಹೊರಗೆ ಓಡಾಡದಂತೆ ಸೂಚನೆ. ಕರ್ನಾಟಕ, ತಮಿಳುನಾಡು, ಕೇರಳ ಗಡಿಯಲ್ಲೂ ಅಲರ್ಟ್! ಮೂರು ರಾಜ್ಯದಿಂದ ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ. ಬಿಗಿ ಭದ್ರತೆಯಲ್ಲಿ ಮೋದಿ ಸಫಾರಿ.