ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನಲೆ, ಶಾಪಿಂಗ್ ಮಾಲ್‌ಗೆ ಬೀಗ, ಬಿಗಿ ಪೊಲೀಸ್ ಬಂದೋಬಸ್ತ್!
ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರಧಾನಿ ಮೋದಿ ತಂಗಲಿರುವ ಹೊಟೆಲ್ ಸುತ್ತ ಮುತ್ತ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿದೆ. ಇತ್ತ ಹತ್ತಿರದಲಿರುವ ಶಾಪಿಂಗ್ ಮಾಲ್‌ಗೆ ಬೀಗ ಹಾಕಲಾಗಿದೆ. ಹೊಟೆಲ್‌ನ ಎಲ್ಲಾ ರೂಂ ಬುಕ್ ಮಾಡಲಾಗಿದೆ.
ಮೈಸೂರು(ಏ.08): ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ, ತಮಿಳುನಾಡಿನ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ನಾಳೆ ಬೆಳಗ್ಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಮೋದಿ ಆಗಮನದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ. ಪ್ರಧಾನಿ ಮೋದಿ ತಂಗಲಿರುವ ಖಾಸಗಿ ಹೊಟೆಲ್ ಸುತ್ತ ಮುತ್ತ ಭಾರಿ ಬಂದೋಬಸ್ತ್ ಮಾಡಲಾಗಿದೆ. ಹೊಟೆಲ್ ಭದ್ರತೆಗಾಗಿ 261 ಅಧಿಕಾರಿಗಳು,ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ನಾಲ್ವರು ಎಸಿಪಿ, ಐವರು ಇನ್ಸ್‌ಪೆಕ್ಟರ್, 11 ಪಿಎಸ್ಐ, 167 ಹೆಡ್ ಕಾನ್ಸ್‌ಸ್ಟೇಬಲ್, 50 ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್ ನಿಯೋಜನೆ ಮಾಡಲಾಗಿದೆ.
ಖಾಸಗಿ ಹೊಟೆಲ್‌ನಲ್ಲಿರುವ ಎಲ್ಲಾ 140 ಕೊಠಡಿಗಳನ್ನು ಪ್ರಧಾನಿ ಕಾರ್ಯಾಲಯ ಬುಕ್ ಮಾಡಿದೆ. ಇನ್ನು ಸಮೀಪದಲ್ಲಿರುವ ಶಾಪಿಂಗ್ ಮಾಲ್‌ಗೆ ಬೀಗ ಹಾಕಿದ್ದಾರೆ. ಪ್ರಧಾನಿ ಮೋದಿ ಆಗಮಿಸುವ ಹಾಗೂ ನಾಳೆ ಬಂಡಿಪುರಕ್ಕೆ ತೆರಳುವ ಮಾರ್ಗದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಕಂಟ್ರೋಲ್ ರೂಂಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಅಲರ್ಟ್ ಆಗಿದ್ದಾರೆ.
8 ರಂದೇ ಮೈಸೂರಿಗೆ ಪ್ರಧಾನಿ ಭೇಟಿ : ಬಂಡೀಪುರದಲ್ಲಿ ಸಫಾರಿ, ಬೊಮ್ಮ ದಂಪತಿ ಭೇಟಿ
ಏಪ್ರಿಲ್ 9, 2023 ರಂದು, ಬೆಳಿಗ್ಗೆ 7:15 ರ ಸುಮಾರಿಗೆ ಪ್ರಧಾನಿಯವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಸಹಾಯ ಗುಂಪುಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಆನೆ ಶಿಬಿರದ ಮಾವುತರು ಮತ್ತು ಕಾವಾಡಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ 5 ನೇ ಸುತ್ತಿನ ಪರಿಣಾಮಕಾರಿ ನಿರ್ವಹಣಾ ಮೌಲ್ಯಮಾಪನದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹುಲಿ ಸಂರಕ್ಷಿತ ಪ್ರದೇಶಗಳ ಕ್ಷೇತ್ರ ನಿರ್ದೇಶಕರೊಂದಿಗೆ ಪ್ರಧಾನ ಮಂತ್ರಿಯವರು ಸಂವಾದ ನಡೆಸಲಿದ್ದಾರೆ.
ಪ್ರಧಾನ ಮಂತ್ರಿಯವರು ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಗೆ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿಯವರು ಜುಲೈ, 2019 ರಲ್ಲಿ, ವನ್ಯಜೀವಿಗಳ ಬೇಡಿಕೆಯನ್ನು ಅಳಿಸಿಹಾಕಲು ಮತ್ತು ಏಷ್ಯಾದಲ್ಲಿ ಬೇಟೆಯಾಡುವುದು ಮತ್ತು ಅಕ್ರಮ ವನ್ಯಜೀವಿ ವ್ಯಾಪಾರವನ್ನು ದೃಢವಾಗಿ ನಿಗ್ರಹಿಸಲು ಜಾಗತಿಕ ನಾಯಕರ ಒಕ್ಕೂಟಕ್ಕೆ ಕರೆ ನೀಡಿದ್ದರು. ಪ್ರಧಾನಿಯವರ ಸಂದೇಶದ ಅನುಸಾರವಾಗಿ ಒಕ್ಕೂಟ ಆರಂಭಿಸಲಾಗುತ್ತಿದೆ. ಐಬಿಸಿಎ ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳಾದ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚೀತಾಗಳ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಜಾತಿಯ ಪ್ರಾಣಿಗಳಿಗೆ ನೆಲೆಯಾಗಿರುವ ದೇಶಗಳ ಸದಸ್ಯತ್ವವನ್ನು ಇದು ಹೊಂದಿದೆ.
ಬಂಡೀಪುರ ಟೈಗರ್ ಸಫಾರಿ ಬಂದ್: ಹೋಮ್‌ಸ್ಟೇ, ರೆಸಾರ್ಟ್‌ಗಳಿಗೂ ಹೋಗುವಂತಿಲ್ಲ
ಪ್ರಧಾನಮಂತ್ರಿಯವರು ‘ಪ್ರಾಜೆಕ್ಟ್ ಟೈಗರ್ ಯೋಜನೆಯ 50 ವರ್ಷಗಳ ಸ್ಮರಣಾರ್ಥ’ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ‘ಹುಲಿ ಸಂರಕ್ಷಣೆಗಾಗಿ ಅಮೃತ ಕಾಲದ ದೃಷ್ಟಿಕೋನ’ಪ್ರಕಟಣೆಗಳನ್ನು ಬಿಡುಗಡೆ ಮಾಡುವರು, ಹುಲಿ ಸಂರಕ್ಷಿತ ಪ್ರದೇಶಗಳ ಪರಿಣಾಮಕಾರಿ ಮೌಲ್ಯಮಾಪನದ 5 ನೇ ಸುತ್ತಿನ ಸಾರಾಂಶ ವರದಿ, ಹುಲಿ ಸಂಖ್ಯೆಗಳ ಘೋಷಣೆ ಮತ್ತು ಅಖಿಲ ಭಾರತ ಹುಲಿ ಅಂದಾಜಿನ (5 ನೇ ಸುತ್ತು) ಸಾರಾಂಶ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಾಜೆಕ್ಟ್ ಟೈಗರ್ ಯೋಜನೆಯು 50 ವರ್ಷಗಳನ್ನು ಪೂರ್ಣಗೊಳಿಸಿದ ಅಂಗವಾಗಿ ನಾಣ್ಯವನ್ನು ಸಹ ಪ್ರಧಾನಿಯವರು ಬಿಡುಗಡೆ ಮಾಡಲಿದ್ದಾರೆ.