ಬೆಂಗಳೂರು(ಸೆ.11): ಪ್ರಯಾಣಿಕರ ಹೊರತಾಗಿ ಸಾರ್ವಜನಿಕರಿಗೆ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ ಪ್ರವೇಶ ನಿರ್ಬಂಧಿಸಿದ್ದ ನೈಋುತ್ಯ ರೈಲ್ವೆ, ಸೆ.12ರಿಂದ ಬೆಂಗಳೂರು ರೈಲ್ವೆ ವಿಭಾಗದ ಪ್ರಮುಖ ಮೂರು ರೈಲು ನಿಲ್ದಾಣಗಳ ಫ್ಲಾಟ್‌ಫಾರ್ಮ್‌ ಪ್ರವೇಶಿಸಲು ಅವಕಾಶ ಕಲ್ಪಿಸಿದೆ. ಆದರೆ, ಫ್ಲಾಟ್‌ಫಾರ್ಮ್‌ ಟಿಕೆಟ್‌ ದರವನ್ನು 10 ರಿಂದ 50ಕ್ಕೆ ಏರಿಸಿದೆ.

ಈಗಾಗಲೇ ರಾಜ್ಯದಲ್ಲಿ ಕೆಲ ವಿಶೇಷ ರೈಲುಗಳ ಸಂಚಾರ ಆರಂಭವಾಗಿದೆ. ಸೆ.12ರಿಂದ ರಾಜ್ಯದಲ್ಲಿ ಇನ್ನೂ ಏಳು ವಿಶೇಷ ರೈಲುಗಳ ಸಂಚಾರ ಆರಂಭಿಸಲಿವೆ. ಈ ನಡುವೆ ಸಾರ್ವಜನಿಕರು ಫ್ಲಾಟ್‌ಫಾರ್ಮ್‌ ಪ್ರವೇಶಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಸೆ.12ರಿಂದ ಇನ್ನೂ 80 ವಿಶೇಷ ರೈಲು ಸಂಚಾರ!

ಅಂಗವಿಕಲರು, ಹಿರಿಯ ನಾಗರಿಕರನ್ನು ನಿಲ್ದಾಣಕ್ಕೆ ಕರೆತರುವ ಹಾಗೂ ಕರೆದೊಯ್ಯುವ ಸಲುವಾಗಿ ಅವಕಾಶ ನೀಡುವಂತೆ ಕೋರಿದ್ದರು. ಹೀಗಾಗಿ ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ ಹಾಗೂ ಕಂಟೋನ್ಮೆಂಟ್‌ ರೈಲು ನಿಲ್ದಾಣಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಕಲ್ಪಿಸಲಾಗಿದೆ. ಆದರೂ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಹೆಚ್ಚು ಜನ ದಟ್ಟಣೆ ಉಂಟಾಗದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಫ್ಲಾಟ್‌ಫಾರ್ಮ್‌ ಟಿಕೆಟ್‌ ದರವನ್ನು ತಾತ್ಕಾಲಿಕವಾಗಿ ಐದು ಪಟ್ಟು ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ದರವನ್ನು ಇಳಿಕೆ ಮಾಡುವುದಾಗಿ ನೈಋುತ್ಯ ರೈಲ್ವೆ ತಿಳಿಸಿದೆ.