ಸೆ.12ರಿಂದ 80 ವಿಶೇಷ ರೈಲು ಅಥವಾ 40 ಜೋಡಿ ರೈಲುಗಳ ಸಂಚಾರ ಆರಂಭ| ಸದ್ಯ ಸಂಚರಿಸುತ್ತಿರುವ ಎಲ್ಲಾ ರೈಲುಗಳ ಮೇಲೂ ರೈಲ್ವೆ ಮಂಡಳಿ ನಿಗಾ
ನವದೆಹಲಿ(ಸೆ.06):ಕೊರೋನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾಮಾನ್ಯ ರೈಲ್ವೆ ಸಂಚಾರ ನಿಲ್ಲಿಸಿ, 230 ವಿಶೇಷ ರೈಲುಗಳನ್ನು ಮಾತ್ರ ಓಡಿಸುತ್ತಿರುವ ರೈಲ್ವೆ ಮಂಡಳಿ ಇದೀಗ ಸೆ.12ರಿಂದ ಇನ್ನೂ 80 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
‘ಸೆ.12ರಿಂದ 80 ವಿಶೇಷ ರೈಲು ಅಥವಾ 40 ಜೋಡಿ ರೈಲುಗಳ ಸಂಚಾರ ಆರಂಭಿಸಲಾಗುವುದು. ಈಗಾಗಲೇ ಓಡುತ್ತಿರುವ 230 ರೈಲುಗಳಿಗೆ ಹೆಚ್ಚುವರಿಯಾಗಿ ಇವುಗಳನ್ನು ಓಡಿಸಲಾಗುವುದು. ಈ ರೈಲುಗಳಿಗೆ ಸೆ.10ರಿಂದ ರಿಸರ್ವೇಶನ್ ಆರಂಭವಾಗಲಿದೆ. ಸದ್ಯ ಸಂಚರಿಸುತ್ತಿರುವ ಎಲ್ಲಾ ರೈಲುಗಳ ಮೇಲೂ ರೈಲ್ವೆ ಮಂಡಳಿ ನಿಗಾ ವಹಿಸುತ್ತಿದೆ. ಯಾವ ರೈಲಿಗೆ ಹೆಚ್ಚು ವೇಟಿಂಗ್ ಲಿಸ್ಟ್ ಇರುತ್ತದೆಯೋ ಆ ಮಾರ್ಗದಲ್ಲಿ ಇನ್ನೊಂದು ರೈಲು ಓಡಿಸಲಾಗುವುದು’ ಎಂದು ರೈಲ್ವೆ ಮಂಡಳಿ ಚೇರ್ಮನ್ ವಿ.ಕೆ.ಯಾದವ್ ಶನಿವಾರ ತಿಳಿಸಿದ್ದಾರೆ.
ಪರೀಕ್ಷೆ ಹಾಗೂ ವಿಶೇಷ ಉದ್ದೇಶಗಳಿಗಾಗಿ ರೈಲು ಓಡಿಸಲು ರಾಜ್ಯಗಳಿಂದ ಬೇಡಿಕೆ ಬಂದರೆ ಅದಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ.
