ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪ ಮಾಡಿದ್ರೆ ಕ್ರಿಮಿನಲ್ ಕೇಸ್: ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶನನ್ನು ತಯಾರಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಬೆಂಗಳೂರು (ಸೆ.13) : ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶನನ್ನು ತಯಾರಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಚಿವರು, ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಪಿಒಪಿ ಮೂರ್ತಿಗಳ ತಯಾರಿಕೆ ಕಂಡು ಬಂದರೆ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪುಗಳನ್ನೆಲ್ಲಾ ಮಾಡ್ಬೇಡಿ!
ಜಲಮೂಲಕ್ಕೆ ಹಾನಿಯನ್ನುಂಟು ಮಾಡುವ ಭಾರ ಲೋಹ ಮತ್ತು ರಾಸಾಯನಿಕ ಬಣ್ಣ ಲೇಪಿತ ಪಿಒಪಿ ವಿಗ್ರಹಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ವಿಸರ್ಜನೆ ತಡೆಯಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2020 ಮೇ 12ರಂದು ಮಾರ್ಗಸೂಚಿ ಹೊರಡಿಸಿದೆ. ಅದರನ್ವಯ ಪಿಒಪಿ ಮೂರ್ತಿ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅದರ ಕಟ್ಟುನಿಟ್ಟಿನ ಪಾಲನೆ ಮಾಡಬೇಕಿದೆ ಎಂದು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಾದ್ಯಂತ ಪಿಒಪಿ ಗಣೇಶ ಮಾರಾಟ ನಿರ್ಬಂಧಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಸಚಿವರು ಆದೇಶಿಸಿದರು.
ಹೊಸ ದಾಖಲೆ ಬರೆದ ಮುಂಬೈ ಗಣೇಶ ಹಬ್ಬ, ಲಾಲ್‌ಬೌಗುಚಾ ರಾಜಾನಿಗೆ 26. 5 ಕೋಟಿ ವಿಮೆ!
ಪರಿಸರ ಸ್ನೇಹಿ ಗಣೇಶ ಬಳಕೆ ಬಗ್ಗೆ ಜಾಗೃತಿ
ಪಿಒಪಿ ಗಣೇಶ ಮೂರ್ತಿ ಬಳಕೆಯನ್ನು ತ್ಯಜಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಪಿಒಪಿ ಬಳಕೆಯಿಂದ ಜಲಮೂಲಗಳಿಗೆ ಹಾಗೂ ಜಲಚರಗಳಿಗಾಗುವ ಸಮಸ್ಯೆಗಳ ಬಗ್ಗೆಯೂ ತಿಳಿಸಬೇಕಿದೆ. ಹೀಗಾಗಿ ಪಿಒಪಿ ಮೂರ್ತಿಗಳ ಬದಲು ಮಣ್ಣಿನಿಂದ ಸಿದ್ಧಪಡಿಸಿ ಮೂರ್ತಿಗಳನ್ನಷ್ಟೇ ಬಳಕೆ ಮಾಡುವಂತೆ ಜನರಿಗೆ ತಿಳಿಸಬೇಕು. ಅದಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ಸೂಚಿಸಿದರು.