ನಿಗಮ-ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ವಿರುದ್ಧ ಪಿಐಎಲ್
ಹೊಸ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿ ಅತೃಪ್ತ ಶಾಸಕರನ್ನು ಸಮಾಧಾನ ಪಡಿಸುವ ಸಲುವಾಗಿ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಸಂಪುಟ ದರ್ಜೆ ಸ್ಥಾನಮಾನ ನೀಡಲು ಮುಂದಾಗಿದೆ. ಇದನ್ನು ನಿಲ್ಲಿಸದಿದ್ದಲ್ಲಿ ಸರ್ಕಾರದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಪಿಐಎಲ್ ದಾಖಲಿಸಲಾಗುವುದು: ಮಾಹಿತಿ ಹಕ್ಕು ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ
ಬೆಳಗಾವಿ(ನ.29): ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸರ್ಕಾರದಲ್ಲಿ ನಿಯಮಾವಳಿಗಳಿಲ್ಲ. ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ನೀಡಿದರೆ ಸರ್ಕಾರದ ವಿರುದ್ಧ ಪಿಐಎಲ್ ದಾಖಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿ ಅತೃಪ್ತ ಶಾಸಕರನ್ನು ಸಮಾಧಾನ ಪಡಿಸುವ ಸಲುವಾಗಿ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಸಂಪುಟ ದರ್ಜೆ ಸ್ಥಾನಮಾನ ನೀಡಲು ಮುಂದಾಗಿದೆ. ಇದನ್ನು ನಿಲ್ಲಿಸದಿದ್ದಲ್ಲಿ ಸರ್ಕಾರದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಪಿಐಎಲ್ ದಾಖಲಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ದಾಖಲೆಗಳ ಸಮೇತವಾಗಿ ಪತ್ರ ಬರೆದಿರುವುದಾಗಿ ತಿಳಿಸಿದರು..
ರೈತರಿಗೆ ಬಡ್ಡಿ ರಹಿತ ಸಾಲ ಒದಗಿಸಿದ ಹೆಮ್ಮೆ ನನಗಿದೆ: ಲಕ್ಷ್ಮಣ ಸವದಿ
ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಕುರಿತು ಸರ್ಕಾರದಲ್ಲಿ ಯಾವುದೇ ನಿದಿಷ್ಟ ನಿಯಮಾವಳಿ ಇಲ್ಲ. ಆದರೆ ಮುಖ್ಯಮಂತ್ರಿ ವಿವೇಚಾನುಸಾರ ಅವರು ಸೂಚಿಸಿದವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುವುದು ಎಂದು ಶಿಷ್ಟಾಚಾರ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ವಿವೇಚಾನುಸಾರ ಚಲಾಯಿಸುವ ಆದೇಶ, ನಿರ್ಣಯಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳಾಗಲಿ, ಸುತ್ತೋಲೆಗಳಾಗಲಿ ಶಿಷ್ಟಾಚಾರ ಇಲಾಖೆಯಲ್ಲಿ ಲಭ್ಯವಿಲ್ಲವೆಂದು ಕಳೆದ ಜೂನ್ 19ರಂದು ತಿಳಿಸಿರುವ ಶಿಷ್ಟಾಚಾರ ಇಲಾಖೆ ಅಧಿಕಾರಿಗಳು ಮಾಹಿತಿ ಹಕ್ಕಿನ ಅರ್ಜಿಯನ್ನು ಸಂಸದೀ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ಹಾಗೂ ಡಿ.ಪಿ.ಎ.ಆರ್. ಅಧೀನದಲ್ಲಿಯೇ ಬರುವ (ಸೇವಾ ನಿಯಮಗಳು-ಸಿ) ಶಾಖೆಗೂ ವರ್ಗಾಯಿಸಿದ್ದಾರೆ.
ಇವರಿಂದಲೂ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಕುರಿತು ಮಾಹಿತಿ ಲಭ್ಯವಾಗಿಲ್ಲವೆಂಬ ದಾಖಲೆಗಳನ್ನು ಸಹ ಸರ್ಕಾರಕ್ಕೆ ಬರೆದ ಪತ್ರದೊಂದಿಗೆ ನೀಡಲಾಗಿದೆ ಎಂದ ಅವರು, ಮುಖ್ಯಮಂತ್ರಿ ಕಾರ್ಯಾಲಯದಲ್ಲಿಯೂ ಮುಖ್ಯಮಂತ್ರಿ ವಿವೇಚಾನುಸಾರ ಸಂಪುಟ ದರ್ಜೆ ಸ್ಥಾನಮಾನ ನೀಡುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಅಂದ ಮೇಲೆ ಯಾವ ನಿಯಮ ಆಧರಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಎಂಇಎಸ್ ಪುಂಡರ ಪ್ರತಿಭಟನೆಗೆ ಹೆದರಿತಾ ಪೊಲೀಸ್ ಇಲಾಖೆ? ಬೆಳಗಾವಿ ನಗರ ಸೇವಕ ಬಿಜೆಪಿ ಸದಸ್ಯ ಅಭಿಜಿತ್ ಜವಳಕರ
ಪ್ರತಿಯೊಂದು ನಿಗಮ-ಮಂಡಳಿಗಳಿಗೆ ಅದರದ್ದೇ ಆದ ಇಲಾಖೆ ಇದ್ದು, ಅದಕ್ಕೆ ಐ.ಎ.ಎಸ್. ಶ್ರೇಣಿಯ ಪ್ರಧಾನ ಕಾರ್ಯದರ್ಶಿ ಇರುತ್ತಾರೆ. ಅಲ್ಲದೆ, ಈ ಇಲಾಖೆಗೆ ಸಚಿವರು ಕೂಡ ಇರುತ್ತಾರೆ. ಹೀಗಿರುವಾಗ ಸಂವಿಧಾನದ ಆಶಯದ ವಿರೋಧವಾಗಿ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವುದು ಮತ್ತು ಇವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಸರ್ಕಾರದಿಂದ ಎಲ್ಲ ಸೌಲಭ್ಯ ನೀಡುವುದರ ಮೂಲಕ ಜನಸಾಮಾನ್ಯರ ತೆರಿಗೆ ಹಣ ಪೋಲು ಮಾಡುತ್ತಿರುವುದು ಸರಿಯಲ್ಲ ಎಂದರು.
ಸಂಸದೀಯ ಕಾರ್ಯದರ್ಶಿಗಳ ಹುದ್ದೆಗಳು ಸಾಂವಿಧಾನಿಕವಾಗಿಲ್ಲವೆಂದು ಅಸಿಂಧುಗೊಳಿಸಿ ರಾಜ್ಯ ಉಚ್ಚ ನ್ಯಾಯಾಲಯ 4.1.2020ರಂದು ಮಹತ್ವದ ತೀರ್ಪು ನೀಡಿರುವುದನ್ನು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖ ವಿಷಯವೆಂದರೆ ಶಾಸಕರ ಸಂಖ್ಯಾಬಲಕ್ಕೆ ಅನುಗುಣವಾಗಿ ಶೇ.15ರಷ್ಟು ಮಾತ್ರ ಸಚಿವರಾಗಲು ಸಂವಿಧಾನ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಂಪುಟ ದರ್ಜೆ ಸ್ಥಾನಮಾನ ನೀಡಲು ಅವಕಾಶವಿಲ್ಲ. ಹಾಗಾಗಿ, ಇನ್ನು ಮುಂದೆ ನೇಮಕ ಮಾಡಲಾಗುವ ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡದೇ ಇರಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.