ರೈತರಿಗೆ ಬಡ್ಡಿ ರಹಿತ ಸಾಲ ಒದಗಿಸಿದ ಹೆಮ್ಮೆ ನನಗಿದೆ: ಲಕ್ಷ್ಮಣ ಸವದಿ
ಇಷ್ಟು ದೊಡ್ಡ ಪ್ರಮಾಣದ ಬಡ್ಡಿರಹಿತ ಸಾಲ ಯೋಜನೆ ಜಾರಿಗೆ ತರಲು ಕಷ್ಟಕರವಾಗಿತ್ತು. ನಾನು ಯಾವುದಕ್ಕೂ ಯೋಚನೆ ಮಾಡದೆ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒಂದೇ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ: ಲಕ್ಷ್ಮಣ ಸವದಿ
ಕಾಗವಾಡ(ನ.28): ರಾಜ್ಯದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೋ ಅವರು ತಾವು ಪ್ರತಿನಿಧಿಸುವ ಜಿಲ್ಲೆಯಲ್ಲಿನ ರೈತರಿಗೆ ಅಷ್ಟೊಂದು ಬಡ್ಡಿ ರಹಿತ ಸಾಲ ಕೊಡಲು ಸಾಧ್ಯವಾಗಿಲ್ಲ. ಆದರೆ, ಸಹಕಾರ ಸಚಿವನಾಗಿದ್ದಾಗ ರೈತರಿಗೆ ಬಡ್ಡಿ ರಹಿತ ಸಾಲ ಮಂಜೂರು ಮಾಡಿದ ಹೆಮ್ಮೆ ನನಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ನೂತನವಾಗಿ ನಿರ್ಮಿಸಿದ ಗೋದಾಮ ಉದ್ಘಾಟಿಸಿ ಮಾತನಾಡಿದ ಅವರು, ಇಷ್ಟು ದೊಡ್ಡ ಪ್ರಮಾಣದ ಬಡ್ಡಿರಹಿತ ಸಾಲ ಯೋಜನೆ ಜಾರಿಗೆ ತರಲು ಕಷ್ಟಕರವಾಗಿತ್ತು. ನಾನು ಯಾವುದಕ್ಕೂ ಯೋಚನೆ ಮಾಡದೆ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒಂದೇ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ ಎಂದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಹತ್ವ ಬರಲು ನೆರವಿಗೆ ಬಂದಿದ್ದು ಬಡ್ಡಿರಹಿತ ಸಾಲ. ರಾಜ್ಯ ಸರ್ಕಾರದ ವತಿಯಿಂದ ಬಡ್ಡಿ ರಹಿತ ಸಾಲ ಕೊಟ್ಟಿರುವ ಪರಿಣಾಮ ಸಹಕಾರಿ ಸಂಘಗಳ ಇಂದು ಪ್ರಗತಿಯ ಹಾದಿಯಲ್ಲಿವೆ. ಯಾರೂ ಮಾಡದ ಕೆಲಸವನ್ನು ನಾಡಿನ ರೈತರಿಗೋಸ್ಕರ ಮಾಡಿದ್ದೆನೆ ಎಂದು ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಕಾಗಾಡ ಶಾಸಕ ರಾಜು ಕಾಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ದೇಶದಲ್ಲಿ ನನಗೆ ರಾಜಕಾರಣ ಮಾಡಲು ಬರಲಿಲ್ಲ ಎಂದು ಯಾವ ರಾಜಕಾರಣಿಯೂ ಆತ್ಮಹತ್ಯೆ ಮಾಡಿಕೊಂಡಿಲ್ಲ, ಒಬ್ಬ ಸಕ್ಕರೆ ಕಾರ್ಖಾನೆಯ ಮಾಲೀಕ ಹಾನಿಯಾಗಿದೆ ಎಂದು ಆತ್ಮಹ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಸರ್ಕಾರಿ ನೌಕರ ಸಂಬಳ ಸಾಲುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೆ ರೈತರು ಮಾತ್ರ ಪತ್ರಿನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಏಕೆಂದರೆ ರೈತ ತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಕಷ್ಟಪಟ್ಟು ಸಾಲಸೂಲ ಮಾಡಿ ಬೆಳೆ ಬೆಳೆದರೆ ಅದಕ್ಕೆ ಯೋಗ್ಯ ದರ ಸಿಗದೆ ಹಾನಿ ಅನುಭವಿಸುತ್ತಿದ್ದಾನೆ. ರೈತರಿಗೆ ದಿನದ 24 ಗಂಟೆ ಗುಣಮಟ್ಟದ ವಿದ್ಯುತ್, ಬೆಳೆಗೆ ಬೆಂಬಲ ಬೆಲೆ, ನೀರಾವರಿ ಸೌಲಭ್ಯಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಿ ಮಾಡಿಕೊಟ್ಟರೆ ರೈತರೇ ಸರ್ಕಾರಕ್ಕೆ ಸಾಲ ಕೊಡುತ್ತಾರೆ. ರೈತರು ಭಿಕ್ಷುಕರಲ್ಲ, ಅವರನ್ನು ವ್ಯವಸ್ಥೆಗಳು ಭಿಕ್ಷುಕರಾಗುವಂತೆ ಮಾಡಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಶ್ರೀಶೈಲ ಹಳ್ಳೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಜಿಲ್ಲಾ ನಿರ್ದೇಶಕ ಹಿಣದೂರಾವ್ ಕೊಳೇಕರ, ವಾಸುದೇವ ಕಾಂಬಳೆ, ಶ್ರೀಕಾಂತ ಅಡಹಳ್ಳಿ, ಮಯೂರ ಕೊಳೇಕರ, ಶಂಕರ ನಂದೇಶ್ವರ, ಮಹಾದೇವ ಉಳ್ಳಾಗಡ್ಡಿ, ರೂಪಾ ಕಾಂಬಳೆ, ಕೆ.ಕೆ. ಕುಲಕರ್ಣಿ, ಚನಬಸುಘಾಳಿ, ವಿಶ್ವನಾಥ ಪಾಟೀಲ, ಭರಮು ಬಡಿಗೇರ, ರಾಮದೇವ ಕಾಂಬಳೆ, ಶಿದ್ದಪ್ಪ ಕನಾಳೆ, ಮದಪ್ಪ ಸೊಂದಕರ, ಅಶೋಕ ಕಡಕೋಳ ರಾಜಕುಮಾರ ಹುದ್ದಾರ, ನಾಯ್ಕು ಮಲ್ಲುಖಾನ, ಶಿವಾಜಿ ರೂಪನವರ, ಶಶಿಕಾಂತ ಮುಂಜೆ, ಶ್ರೀನಿವಾಸ ಹುಂಡೇಕರ, ಶೀಲಾ ಮಂಗಸೂಳಿ, ಲತಾ ಕಟ್ಟಿಕರ ಉಪಸ್ಥಿತರಿದ್ದರು. ಎಲ್.ಟಿ. ಬಬಲಿ ಸ್ವಾಗತಿಸಿದರು ಮುಖ್ಯಕಾರ್ಯನಿರ್ವಾಹಕ ಸಿದ್ದಪ್ಪ ತೆಲಸಂಗ ವಂದಿಸಿದರು.
ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಕೆಲವು ತತ್ವಗಳನ್ನು ಪಾಲಿಸಲೇಬೇಕಾಗುತ್ತದೆ. ಮನೆ ಚೆನ್ನಾಗಿರಬೇಕಾದರೆ ಅಲ್ಲಿ ಒಗ್ಗಟ್ಟಿರಬೇಕು, ಒಂದು ಸಂಘ ಬೆಳೆಯಬೇಕಾದರೆ ಊರಲ್ಲಿ ಪತ್(ವಿಶ್ವಾಸ) ಇರಬೇಕು. ಹೊಲದಲ್ಲಿ ಹುಲುಸಾಗಿ ಬೆಳೆ ಬೆಳೆಯಬೇಕಾದರೆ ಅದಕ್ಕೆ (ಖತ್)ಗೊಬ್ಬರ ಬೇಕು ಅಂದಾಗ ಮಾತ್ರ ಬೆಳೆಯಲು ಸಾಧ್ಯ.ಒಂದು ಮನೆ,ಊರು, ಸಂಸ್ಥೆ, ಬೆಳೆಯಬೇಕಾದರೆ ಪ್ರತಿಯೊಬ್ಬರು ಈ ಮೂರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಮುರು ತತ್ವಗಳು ಇದ್ದಾಗ ಮಾತ್ರ ಮನುಷ್ಯ ಪ್ರಗತಿ ಹೊಂದಲು ಸಾಧ್ಯ: ಶಾಸಕ ಲಕ್ಷ್ಮಣ ಸವದಿ