ಮಂಗಳೂರು [ಡಿ.27]:  ಗಲಭೆ ವೇಳೆ ಕೆಲವರ ಮೇಲೆ ಹಾಕಲಾಗಿದ್ದ ಕ್ರಿಮಿನಲ್‌ ಕೇಸ್‌ ರದ್ದುಮಾಡಿರುವ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಪುನರ್‌ ಪರಿಶೀಲಿಸುವ ಸುಳಿವನ್ನು ಬಿಜೆಪಿ ಸರ್ಕಾರ ನೀಡಿದೆ. ಕ್ರಿಮಿನಲ್‌ ಕೇಸ್‌ ವಿಚಾರವಾಗಿ ಹಿಂದಿನ ಸರ್ಕಾರದ ನಿರ್ಧಾರವನ್ನು ಸರ್ಕಾರ ಪರಿಶೀಲನೆ ನಡೆಸಲಿದೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೌರತ್ವ ಒಪ್ಪಂದವನ್ನು ಮುಂದಿಟ್ಟುಕೊಂಡು ಕೇಂದ್ರ ಹಾಗೂ ಬಿಜೆಪಿ ರಾಜ್ಯಗಳ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪಿಎಫ್‌ಐ ಮತ್ತು ಎಸ್‌ಡಿಪಿಐ ಜೊತೆ ಸೇರಿಕೊಂಡು ಕಾಂಗ್ರೆಸ್‌ ಒಳಸಂಚು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೆ ಗಲಭೆಗಳಲ್ಲಿ ಭಾಗಿಯಾದವರ ಮೇಲಿನ ಕ್ರಿಮಿನಲ್‌ ಕೇಸ್‌ ಹಿಂಪಡೆದಿರುವ ತೀರ್ಮಾನವನ್ನು ಸರ್ಕಾರ ಮರುಪರಿಶೀಲಿಸಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದ ಮಾಜಿ ಸಂಸದ.

ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟವರ ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ಅವರಿಗೆ ಘೋಷಿಸಿದ್ದ ಪರಿಹಾರವನ್ನು ತಡೆಹಿಡಿಯಲಾಗಿದೆ. ಪ್ರಕರಣದಲ್ಲಿ ಅವರು ನಿರಪರಾಧಿಗಳೆಂದು ಸಾಬೀತಾದರೆ ಸರ್ಕಾರ ಪರಿಹಾರ ಮೊತ್ತ ಪಾವತಿಸಲಿದೆ. ಆದರೆ ಸರ್ಕಾರದ ನಿಯಮಗಳನ್ನು ಸರಿಯಾಗಿ ಅರಿತುಕೊಳ್ಳದ ಪ್ರತಿಪಕ್ಷಗಳು ವಿನಾ ಕಾರಣ ನಮ್ಮ ಮೇಲೆ ಮಿಥ್ಯಾರೋಪ ಮಾಡುತ್ತಿವೆ. ನಾವು ತಕ್ಷಣ ಪರಿಹಾರ ಘೋಷಿಸಿದ್ದು ಯಾಕೆ ಎಂದು ಪ್ರಶ್ನಿಸುತ್ತಿವೆ.

ಹಾಗಿದ್ದರೆ ಈ ಹಿಂದೆ ಶೃಂಗೇರಿ ಬಳಿ ನಡೆದಿದ್ದ ಗೋ ಕಳ್ಳ ಸಾಗಣೆದಾರನ ಮೇಲಿನ ಶೂಟೌಟ್‌ ಪ್ರಕರಣದಲ್ಲಿ ತನಿಖೆಗೂ ಮುನ್ನವೇ ಆಗಿನ ರಾಜ್ಯ ಸರ್ಕಾರ ಹೇಗೆ ಪರಿಹಾರ ನೀಡಿದೆ? ಈ ಮೂಲಕ ಆಗಿನ ಸರ್ಕಾರ ಪೊಲೀಸರ ನೈತಿಕ ಸ್ಥೈರ್ಯ ಉಡುಗಿಸುವ ಕೆಲಸ ಮಾಡಿದೆ. ರೈತರ ಪರ, ಕನ್ನಡ ಪರ ಹಾಗೂ ಇತರ ಸಣ್ಣಪುಟ್ಟ ಹೋರಾಟಗಳ ಕೇಸುಗಳನ್ನು ವಾಪಸ್‌ ಪಡೆಯುವುದರಲ್ಲಿ ತೊಂದರೆ ಇಲ್ಲ. ಆದರೆ ಯಾರದೋ ಓಲೈಕೆಗಾಗಿ ದೊಡ್ಡ ದೊಡ್ಡ ಕ್ರಿಮಿನಲ್‌ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ಬೇಕಾದರೆ ಕ್ರಿಮಿನಲ್‌ಗಳಿಗೆ ಪರಿಹಾರ ನೀಡಲಿ, ಅದಕ್ಕೆ ಜನರೇ ಉತ್ತರಿಸಲಿದ್ದಾರೆ ಎಂದರು.

‘ಕೈ’ಗೆ ಅನುಮಾನದ ಚಾಳಿ

ಮಂಗಳೂರು ಗಲಭೆಗೆ ಸಂಬಂಧಿಸಿ ಈಗ ಸಿಸಿ ಟಿವಿ ಬಗ್ಗೆ ಕಾಂಗ್ರೆಸ್‌ ಅನುಮಾನ ಪಡುತ್ತಿದೆ. ಅನುಮಾನ ಪಡುವುದು ಕಾಂಗ್ರೆಸ್‌ನ ಕೆಟ್ಟಚಾಳಿ. ಚುನಾವಣೆಯಲ್ಲಿ ಸೋತಾಗ ಕಾಂಗ್ರೆಸಿಗರು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

-ಸಿ.ಟಿ.ರವಿ, ಸಚಿವರು