ಬೆಂಗಳೂರು(ಜು.09): ಕೊರೋನಾ ಸೋಂಕು ಇರಬಹುದೆಂಬ ಭೀತಿಯಿಂದ ಹೃದಯಾಘಾತಕ್ಕೆ ಒಳಗಾಗಿ ಒದ್ದಾಡುತ್ತಿದ್ದ ವ್ಯಕ್ತಿಯ ನೆರವಿಗೆ ಜನರೂ ಬಾರದೆ, ಸಕಾಲದಲ್ಲಿ ಆ್ಯಂಬುಲೆನ್ಸ್‌ ಸಹ ದೊರೆಯದೇ ರಸ್ತೆಯಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

"

ಪೀಣ್ಯದಲ್ಲಿ ಕೈಗಾರಿಕೆಯೊಂದರ ಭದ್ರತಾ ಸಿಬ್ಬಂದಿಯಾಗಿರುವ ತಿಗಳರಪಾಳ್ಯದ 50 ವರ್ಷದ ರಾಜು ರಾತ್ರಿ ಪಾಳಿ ಮುಗಿಸಿಕೊಂಡು ಬೆಳಗ್ಗೆ ಆರು ಗಂಟೆಗೆ ಮನೆಗೆ ನಡೆದುಕೊಂಡು ಹೋಗುವಾಗ ಹೃದಯಾಘಾತವಾಗಿದೆ. ತೀವ್ರ ನೋವಿನಿಂದ ಸುಮಾರು 20 ನಿಮಿಷಗಳ ಕಾಲ ಒದ್ದಾಡಿದ್ದಾರೆ. ಈ ಸಮಯದಲ್ಲಿ ಕೊರೋನಾ ಸೋಂಕು ಇರಬಹುದೆಂಬ ಭಯದಿಂದ ಜನರು ನೆರವಿಗೆ ಧಾವಿಸದೇ ವಿಡಿಯೋ ಮಾಡುತ್ತಾ ಅಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಯಾವ ಆ್ಯಂಬುಲೆನ್ಸ್‌ ಸಹ ಬಂದಿಲ್ಲ. ಹೀಗಾಗಿ ರಾಜು ಸ್ಥಳದಲ್ಲೇ ಮೃತಪಟ್ಟರು. ಮಧ್ಯಾಹ್ನ 12 ಗಂಟೆಯಾದರೂ ಮೃತ ದೇಹ ಸ್ಥಳದಲ್ಲೇ ಇತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತರ ಬಳಿಯಿದ್ದ ಮೊಬೈಲ್‌ ಫೋನ್‌ನಿಂದ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದು, ಮೃತ ದೇವನನ್ನು ಪಡೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಕೊರೋನಾ ಸೋಂಕಿತನ ಬಿಡುಗಡೆಗೆ 2 ಲಕ್ಷ ಕೇಳಿದ ಅಪೋಲೋ?

ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು:

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಾಮರಾಜಪೇಟೆಯ ವ್ಯಕ್ತಿಯೊಬ್ಬರು ನಗರದ ಹಲವು ಆಸ್ಪತ್ರೆಗಳಲ್ಲಿ ಅಲೆದಾಡಿ ಚಿಕಿತ್ಸೆ ಲಭ್ಯವಾಗದೆ ಜೀವ ಕಳೆದುಕೊಂಡಿರುವ ಮತ್ತೊಂದು ಘಟನೆ ನಡೆದಿದೆ. ಶೇಷಾದ್ರಿಪುರದ ಆಪೋಲೋ, ರಂಗದೊರೈ, ಕಿಮ್ಸ್‌ ಮತ್ತು ಇಎಸ್‌ಐ ಆಸ್ಪತ್ರೆಗೆ ಹೋದರು ಚಿಕಿತ್ಸೆ ಸಿಗಲಿಲ್ಲ. ವೆಂಟಿಲೇಟರ್‌ ಇರುವ ಆ್ಯಂಬುಲೆನ್ಸ್‌ ಕಳಿಸಿ ಎಂದು ಮನವಿ ಮಾಡಿದರೆ ವೆಂಟಿಲೇಟರ್‌ ಇಲ್ಲದ ಅ್ಯಂಬುಲೆನ್ಸ್‌ ಕಳಿಸಿದ್ದಾರೆ. ಇದರಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಜೀವ ಬಿಟ್ಟಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನೆರವಿಗೆ ಸಿಎಂ ಮನೆಗೆ ಬಂದ ರೋಗಿ

ಕೊರೋನಾ ಸೋಂಕಿನ ಲಕ್ಷಣಗಳಿರುವ ತನ್ನ ಚಿಕಿತ್ಸೆಗೆ ನೆರವು ನೀಡುವಂತೆ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಆಟೋ ರಿಕ್ಷಾದಲ್ಲಿ ಬಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಮ್ಮು, ನೆಗಡಿ ಸೇರಿದಂತೆ ಕೊರೋನಾ ಸೋಂಕು ತಗುಲಿರುವ ಲಕ್ಷಣಗಳಿದ್ದು ಆ್ಯಂಬುಲೆನ್ಸ್‌ ಸಿಗುತ್ತಿಲ್ಲ. ಹಾಸಿಗೆ ಲಭ್ಯವಿರುವುದು ಖಚಿತವಾದಲ್ಲಿ ಮಾತ್ರ ಆ್ಯಂಬುಲೆನ್ಸ್‌ ಕಳಿಸಲಾಗುವುದು ಎಂದು ಹೇಳುತ್ತಿದ್ದು. ತಕ್ಷಣ ನೆರವಿಗೆ ಬರಬೇಕು ಎಂದು ಕೆ.ಜಿ ಹಳ್ಳಿಯ ರೋಗಿಯೊಬ್ಬರು ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಬಂದಿದ್ದಾರೆ.

ಹಲವು ಖಾಸಗಿ ಆಸ್ಪತ್ರೆಗಳಿಗೆ ಹೋಗಿದ್ದು, ಎಲ್ಲಿಯೂ ಚಿಕಿತ್ಸೆ ಕೊಡುತ್ತಿಲ್ಲ. ಬಿಬಿಎಂಪಿಗೆ ಕರೆ ಮಾಡಿದರೆ ಬೆಡ್‌ ಖಾಲಿ ಇಲ್ಲ ಎಂದು ಹೇಳುತ್ತಿದ್ದಾರೆ. ಸುತ್ತಾಡಿ ಸಾಕಾಗಿದೆ. ಇಲ್ಲೇ ಸಾಯುತ್ತೇನೆ ಎಂದು ವಿಡಿಯೋ ಮಾಡಿದ್ದು ಬುಧವಾರ ವೈರಲ್‌ ಆಗಿದೆ. ಮುಖ್ಯಮಂತ್ರಿಗಳ ನಿವಾಸದ ಮುಂದಿರುವ ಪೊಲೀಸ್‌ ಸಿಬ್ಬಂದಿ ಇಲ್ಲಿಗೆ ಬಂದರೆ ಯಾವುದೇ ಪ್ರಯೋಜನ ಇಲ್ಲ. ಆಸ್ಪತ್ರೆಗಳ ವಿರುದ್ಧ ದೂರು ನೀಡಿ ಎಂದು ತಿಳಿಸಿದ ನಂತರ ಆತ ಮನೆಗೆ ವಾಪಸ್‌ ಹೋಗಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದೆ ಮುಖ್ಯಮಂತ್ರಿಗಳ ಗೃಹ ಕಚೇರಿ ಸಿಬ್ಬಂದಿ, ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಘಟನೆಯಾಗಿದೆ. ಅವರಿಗೆ ಚಿಕಿತ್ಸೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ.