ಪಾವಗಡ ತಾಲೂಕಿನಲ್ಲಿ ನಕ್ಸಲ್ ಸಂಘಟನೆ ಹೆಸರಲ್ಲಿ 5 ಲಕ್ಷ ರೂ.ಗೆ ಬೇಡಿಕೆ ಇಟ್ಟ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ, ಶಂಕಿತ ನಕ್ಸಲ್ ನಾಯಕ ಉಪ್ಪಾರ ವೆಂಕಟೇಶನ ಪತ್ತೆಗಾಗಿ 120ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಪೊಲೀಸರು ಕನಿಕಲಬಂಡೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಡ್ರೋನ್‌ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ಶೋಧ ನಡೆಸಲಾಗುತ್ತದೆ.

ವರದಿ- ನಾಗೇಂದ್ರ ಜೆ.

ತುಮಕೂರು (ಸೆ.14): ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕನಿಕಲಬಂಡೆ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಶಂಕಿತ ನಕ್ಸಲ್ ನಾಯಕ, ಉಪ್ಪಾರ ವೆಂಕಟೇಶನ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ರೈತರ ಜಮೀನಿನ ಗೇಟ್‌ಗೆ ನಕ್ಸಲ್‌ ಸಂಘಟನೆ ಹೆಸರಲ್ಲಿ ಅನಾಮಿಕನೊಬ್ಬ ಪತ್ರ ಅಂಟಿಸಿದ್ದ. ಪೀಪಲ್ಸ್‌ ವಾರ್‌ ಜನಶಕ್ತಿ ಪಾರ್ಟಿ ಕಾಮ್ರೇಡ್‌ ದೇವಣ್ಣ ದಳಂ ಹೆಸರಲ್ಲಿ ಪತ್ರ ಅಂಟಿಸಲಾಗಿತ್ತು. ತೆಲುಗು ಭಾಷೆಯಲ್ಲಿರುವ ಪತ್ರದಲ್ಲಿ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಡಲಾಗಿತ್ತು. ಪತ್ರ ಪತ್ತೆಯಾದ ಬೆನ್ನಲ್ಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ.

ಕನಿಕಲಬಂಡೆ ಗ್ರಾಮದ ಉಪ್ಪಾರ ವೆಂಕಟೇಶ್, ಕಳೆದ 2-2 ವರ್ಷದಿಂದ ಗ್ರಾಮದ ಹೊರವಲಯಗಳಲ್ಲಿನ ಬೆಟ್ಟ ಹಾಗೂ ದಟ್ಟ ಪೊದೆಗಳಲ್ಲಿ ಅಡಗಿ ರಸ್ತೆಯಲ್ಲಿ ಓಡಾಡುವ ವಾಹನ ಸವಾರರನ್ನು ಅಡ್ಡಗಟ್ಟಿ ಬೆದರಿಕೆವೊಡ್ಡಿ ಹಣ ಪಡೆಯುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಆತನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

ಶೋಧ ಹೇಗೆ?:

ಭಾನುವಾರ ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಸತತ 5 ಗಂಟೆಗಳ ಕಾಲ ತಾಲೂಕಿನ ಕನಿಕಲಬಂಡೆ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ವೆಂಕಟೇಶ್ ನಿಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ತುಮಕೂರು ಹೆಚ್ಚುವರಿ ಎಸ್ಪಿ ಗೋಪಾಲ್ ಮತ್ತು ಮಧುಗಿರಿ ಡಿವೈಎಸ್‌ಪಿ ಮಂಜುನಾಥ್ ನೇತೃತ್ವದಲ್ಲಿ 5 ವಿಶೇಷ ತಂಡಗಳಲ್ಲಿ 120ಕ್ಕೂ ಹೆಚ್ಚು ಪೊಲೀಸರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ. 10 ಪೊಲೀಸ್ ಜೀಪ್, ವ್ಯಾನ್ ಹಾಗೂ ಒಂದು ಖಾಸಗಿ ಬಸ್‌ನಲ್ಲಿ ತೆರಳಿದ ಪೊಲೀಸರು, ಎಕೆ-47 ಸೇರಿದಂತೆ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು 12 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು.

ತಾಲೂಕಿನ ಪಳವಳ್ಳಿ ಕಡಪಲಕೆರೆ, ವೀರಮ್ಮನಹಳ್ಳಿ, ಗಂಗಾಸಾಗರ, ಅಚ್ಚಮ್ಮನಹಳ್ಳಿ, ಕೆಂಚಗಾನಹಳ್ಳಿ ಹಾಗೂ ಕನಿಕಲಬಂಡೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯಿತು. ಡ್ರೋನ್‌ ಕ್ಯಾಮರಾ ಮೂಲಕವೂ ಕಾರ್ಯಾಚರಣೆ ಮುಂದುವರಿಸಲಾಗಿದೆ. ಆದರೂ, ಶಂಕಿತ ನಕ್ಸಲರ ಯಾವುದೇ ಕುರುಹು ಪತ್ತೆಯಾಗಿಲ್ಲ. ಕರಪತ್ರ ಅಂಟಿಸಿದವರು ಯಾರು ಎಂಬುದು ತಿಳಿದು ಬಂದಿಲ್ಲ. ಕಾರ್ಯಾಚರಣೆ ಮುಂದುವರಿದಿದ್ದು, ವಿಶೇಷ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.