ತಲೆತಿರುಗಿ ಬೀಳುತ್ತಿದ್ದವನಿಗೆ ಹೈಕೋರ್ಟ್‌ನಿಂದ ಪೆರೋಲ್!
ಪೆರೋಲ್ ನೀಡುವಂತೆ ಕೋರಿ ಈ ಮೂವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್ ಈ ಆದೇಶ ಮಾಡಿದೆ.
ಬೆಂಗಳೂರು(ಡಿ.28): ಜೈಲಿನಲ್ಲಿ ನಡೆದಾಡುವಾಗ ತಲೆತಿರುಗಿ ಬೀಳುತ್ತಿದ್ದ, ಸ್ನಾನ ಮಾಡುವಾಗ ಪ್ರಜ್ಞಾಹೀನನಾಗುತ್ತಿದ್ದ ಮತ್ತು ಶಿಥಿಲಾವಸ್ಥೆಗೆ ತಲುಪಿರುವ ಮನೆಯನ್ನು ಸರ್ಕಾರ ದಿಂದ ಮಂಜೂರಾಗಿರುವ ಅನುದಾನದಿಂದ ದುರಸ್ತಿ ಮಾಡಿಸುವ ಕಾರಣಕ್ಕಾಗಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮೂವರಿಗೆ ಪೆರೋಲ್ ನೀಡುವ ಮೂಲಕ ಹೈಕೋರ್ಟ್ ಮಾನವೀಯತೆ ಮೆರೆದಿದೆ.
ಪೆರೋಲ್ ನೀಡುವಂತೆ ಕೋರಿ ಈ ಮೂವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್ ಈ ಆದೇಶ ಮಾಡಿದೆ. ಪೆರೋಲ್ ಮೇಲೆ ಬಿಡುಗಡೆಯಾದ ಅಪರಾಧಿಗಳು ಮರಳಿ ಜೈಲಿಗೆ ಹಿಂದಿರುಗುವುದನ್ನು ಖಾತರಿಪಡಿಸಿಕೊಳ್ಳಲು ಜೈಲು ಅಧೀಕ್ಷಕರು ಅಗತ್ಯ ಷರತ್ತುಗಳನ್ನು ವಿಧಿಸಬೇಕು. ಅಪರಾಧಿಗಳು ಪ್ರತಿವಾರ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗ ಬಾರದು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.
ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಹೈಫೈ ಪತ್ನಿಗೆ ಉಗಿದು ಕಳಿಸಿದ ನ್ಯಾಯಾಧೀಶೆ: ಕೋರ್ಟ್ ಕೇಸ್ ವೈರಲ್
ಪ್ರಕರಣ-1: ಸ್ನಾನ ಮಾಡುವಾಗ ಪ್ರಜ್ಞಾಹೀನ:
ಶಿವಮೊಗ್ಗದ ಮುಮ್ರಾಜ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ನನ್ನ ಮಗ ನೂರುಲ್ಲಾ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಆತ ನಾಲೈದು ತಿಂಗಳ ಅವಧಿಯಲ್ಲಿ ಜೈಲಿನಲ್ಲಿ ಸ್ಥಾನ ಮಾಡುವಾಗ ಮೂರು ಬಾರಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಆತನಿಗೆ ವಿಶೇಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಬೇಕಿದೆ. ಮಗ ನಾಲ್ಕು ವರ್ಷ ಐದು ತಿಂಗಳು ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ಚಿಕಿತ್ಸೆ ಪಡೆಯಲು ಪೆರೋಲ್ ನೀಡುವಂತೆ ಕೋರಿದ್ದರು. ಈ ಮನವಿ ಪುರಸ್ಕರಿಸಿದ ಹೈಕೋರ್ಟ್, ನೂರುಲ್ಲಾಗೆ 60 ದಿನಗಳ ಕಾಲ ಪೆರೋಲ್ ನೀಡಿದೆ.
ಸಿಟಿ ರವಿಗೆ ರಿಲೀಫ್; ಪೊಲೀಸರಿಗೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ
ಪ್ರಕರಣ-2: ಸರ್ಕಾರಿ ಹಣದಲ್ಲಿ ಮನೆ ದುರಸ್ತಿ:
ಮೈಸೂರಿನ ಮಹದೇವಮ್ಮ ಎಂಬುವವರು (58) ಅರ್ಜಿ ಸಲ್ಲಿಸಿ, ನನ್ನ ಪುತ್ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ನಾವು ನೆಲೆಸಿರುವ ಮನೆ ಮಳೆಯಿಂದ ಹಾನಿಗೊಳಗಾಗಿ ಶಿಥಿಲಾವಸ್ಥೆಗೆ ತಲುಪಿದೆ. ಮನೆ ದುರಸ್ತಿಗೆ ರಾಜ್ಯ ಸರ್ಕಾರ 1.25 ಲಕ್ಷ ರು. ಮಂಜೂರು ಮಾಡಿದೆ. ಆದರೆ, ನಮಗೆ ವಯಸ್ಸಾಗಿದೆ. ದುರಸ್ತಿ ಕೆಲಸದ ಮೇಲ್ವಿಚಾರಣೆ ವಹಿಸಬೇಕೇಂದರೆ ಮಗ ಜೈಲಿನಿಂದ ಹೊರಬೇಕಿದೆ. ಆದ್ದರಿಂದ ಮಗನಿಗೆ ಪೆರೋಲ್ ನೀಡಬೇಕು ಎಂದು ಕೋರಿದ್ದರು. ಈ ಮನವಿ ಪುರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರೆಯ ಪುತ್ರನಿಗೆ 90 ದಿನಗಳ ಪೆರೋಲ್ ಮಂಜೂರು ಮಾಡಿದೆ.
ಪ್ರಕರಣ-3: ತಲೆತಿರುಗಿ ಬಿಳುತ್ತಿದ್ದಾಕೆಗೆ ಪೆರೋಲ್
ಮೈಸೂರಿನ ಗೀತಾ ಅವರು ಅರ್ಜಿ ಸಲ್ಲಿಸಿ, ತನ್ನ ಸಹೋದರಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಲ್ಲಿದ್ದಾರೆ. ತಲೆ ತಿರುಗುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಡೆದಾಡುವಾಗ ತೀವ್ರ ಅಸಮತೋಲನ ಉಂಟಾಗುತ್ತಿದೆ. ಯಾವುದೇ ಬೆಂಬಲದೊಂದಿಗೆ ನಿಂತರೂ ತೂಗಾಡುತ್ತಲೇ ಇರುತ್ತಾರೆ. ತಲೆತಿರುಗಿದ್ದರಿಂದ ನೆಲೆಕ್ಕೆ ಬಿದ್ದು ತೀವ್ರವಾಗಿ ಗಾಯಯೊಂಡಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು ಸಹೋದರಿಯ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗತಿ ಕುರಿತು ವರದಿ ಸಲ್ಲಿಸಿದ್ದಾರೆ. ಈಗಾಗಲೇ ನನ್ನ ಸಹೋದರಿ ಆರು ವರ್ಷ, ಏಳು ತಿಂಗಳ ಕಾಲ ಜೈಲು ಶಿಕ್ಷೆ ಪೂರೈಸಿದ್ದಾರೆ. ಆಕೆಗೆ ಚಿಕಿತ್ಸೆ ಕಲ್ಪಿಸಲು ಪೆರೋಲ್ ನೀಡಬೇಕು ಎಂದು ಕೋರಿದ್ದರು. ಈ ಮನವಿ ಪುರಸ್ಕರಿಸಿದ ಹೈಕೋರ್ಟ್, ಅರ್ಜಿದಾರೆಯ ಸಹೋದರಿಗೆ 90 ದಿನಗಳ ಕಾಲ ಪೆರೋಲ್ ನೀಡಿದೆ.