ಕೊಪ್ಪಳದಲ್ಲಿ ಪ್ರೀತಿಸಿ ಮದುವೆಯಾದ ನವಜೋಡಿಗೆ ಹುಡುಗಿಯ ಕಡೆಯ ಪೋಷಕರು ಜೀವ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಕೊಪ್ಪಳ (ಫೆ.27): ಪ್ರೀತಿಸಿ ಮದುವೆಯಾದ ನವಜೋಡಿಗೆ ಹುಡುಗಿಯ ಕಡೆಯ ಪೋಷಕರು ಜೀವ ಬೆದರಿಕೆ ಹಾಕಿದ್ದು, ರಕ್ಷಣೆಗೆ ಪೊಲೀಸರ ಮೊರೆ ಹೋದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಕಲಕೇರಿ ಗ್ರಾಮದ ಶಿವಕುಮಾರ ಹಾಗೂ ಪವಿತ್ರಾ ಇಬ್ಬರು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಜಾತಿಗೆ ಸೇರಿದವರಾಗಿದ್ದು, ಯುವತಿಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪನೆಗೆ ಗವಿಸಿದ್ಧೇಶ್ವರ ಶ್ರೀಗಳ ವಿರೋಧ; ಪ್ರತಿಭಟನೆ ವೇಳೆ ಕಣ್ಣೀರು!
ಬೆಂಗಳೂರಿನಲ್ಲಿ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಶಿವಕುಮಾರ. ಪವಿತ್ರಾ ಬಿಎ ಎರಡನೇ ವರ್ಷದಲ್ಲಿ ಓದುತ್ತಿದ್ದಾಳೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದರಿಂದ ಪರಸ್ಪರ ಪರಿಚಯವಾಗಿದೆ, ಪರಿಚಯ ಪ್ರೀತಿಗೆ ತಿರುಗಿದೆ. ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಹುಡುಗಿಯ ಪೋಷಕರ ವಿರೋಧದ ನಡುವೆಯೂ ಇದೇ ತಿಂಗಳು ಫೆ.17ರಂದು ಕೂಕನಪಳ್ಳಿ ಗ್ರಾಮದ ಅಡವಿ ಅಮರೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ಸುದ್ದಿ ತಿಳಿಯುತ್ತಿದ್ದಂತೆ, ಯುವತಿಯ ಪೋಷಕರು ಯುವಕನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆಂದು ಶಿವಕುಮಾರ ಆರೋಪಿಸಿದ್ದಾರೆ.
ಪವಿತ್ರಾಗೆ ಬೇರೆ ಕಡೆ ವರ ನೋಡುತ್ತಿದ್ದ ಕುಟುಂಬಸ್ಥರು:
ಶಿವಕುಮಾರನೊಂದಿಗೆ ಪವಿತ್ರಾ ಮದುವೆಯಾಗುವುದು ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಬೇರೊಂದು ಕಡೆ ವರ ಹುಡುಕಾಟದಲ್ಲಿದ್ದ ಪೋಷಕರು. ಆದರೆ ಇತ್ತ ಶಿವಕುಮಾರನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಪವಿತ್ರಾ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದಾರೆ. ಇತ್ತ ಪೋಷಕರು ವರ ಹುಡುಕುತ್ತಿದ್ದರಿಂದ ಮನೆಯಿಂದ ಓಡಿ ಹೋಗಿರುವ ಪವಿತ್ರಾ, ಶಿವಕುಮಾರನೊಂದಿಗೆ ಸೇರಿದ್ದಾಳೆ.
ಇದನ್ನೂ ಓದಿ: 'ನನ್ನ ಮಗನಿಗೆ ಸಿನಿಮಾ ಹೀರೋ ಆಗಲು ಆಸಕ್ತಿ, ಬೇಡ ಅನ್ನೋಲ್ಲ: ಮಗನ ಭವಿಷ್ಯದ ಬಗ್ಗೆ ಶಿವರಾಜ ತಂಗಡಗಿ ಮಾತು
ಮಿಸ್ಸಿಂಗ್ ಕಂಪ್ಲೆಂಟ್:
ಮನೆಯಿಂದ ಓಡಿಹೋಗಿರುವ ಸುದ್ದಿ ತಿಳಿಯುತ್ತಿದ್ದಂತೆ ಹುಡುಗಿಯ ಪೋಷಕರು ಕನಕಗಿರಿ ಪೊಲೀಸ್ ಠಾಣೆಯಲ್ಲಿ 'ಮಿಸ್ಸಿಂಗ್' ಕಂಪ್ಲೆಂಟ್ ನೀಡಿದ್ದಾರೆ. ಆದರೆ ಪವಿತ್ರಾ ಶಿವಕುಮಾರನೊಂದಿಗೆ ಮದುವೆಯಾಗಿರುವುದು ತಿಳಿದು ಇನ್ನಷ್ಟು ಆಕ್ರೋಶಗೊಂಡು ಇಬ್ಬರಿಗೂ ಫೋನ್ ಮಾಡಿ ಬೆದರಿಕೆ ಹಾಕಿರುವ ಯುವತಿ ಕುಟುಂಬಸ್ಥರು. ಶಿವಕುಮಾರನ ಮನೆಗೆ ಹೋಗಿ ಪೋಷಕರಿಗೂ ಬೆದರಿಕೆ ಹಾಕಿದ ಹಿನ್ನೆಲೆ ಎಸ್‌ಪಿ ಕಚೇರಿಗೆ ಆಗಮಿಸಿದ ನವಜೋಡಿ ನಾವಿಬ್ಬರೂ ಪರಸ್ಪರ ಪ್ರೀತಿಸಿ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ, ಜೊತೆಯಾಗಿರಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
