ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕುಮಾರ ನಟನೆಯ ತರಬೇತಿ ಪಡೆದಿದ್ದು, ಸಿನಿಮಾ ಹೀರೋ ಆಗಲು ಆಸಕ್ತಿ ಹೊಂದಿದ್ದಾರೆ. ರಾಜಕೀಯಕ್ಕೆ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಸಕ್ತಿ ಇದ್ದರೆ ತಡೆಯಲಾಗದು ಎಂದಿದ್ದಾರೆ.

ಕೊಪ್ಪಳ (ಫೆ.24): ನನ್ನ ಮಗ ಶಶಿಕುಮಾರ ಸಿನಿಮಾ ನಟನೆಯ ತರಬೇತಿ ಪಡೆದಿದ್ದು, ಸಿನಿಮಾ ಹೀರೋ ಆಗಲು ಆಸಕ್ತಿ ಹೊಂದಿದ್ದಾನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

 ‘ನಿಮ್ಮ ಮಗ ರಾಜಕೀಯಕ್ಕೆ ಬರುತ್ತಾನಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿ, ‘ನನ್ನ ಮಗನನ್ನು ರಾಜಕೀಯಕ್ಕೆ ತರುವುದಿಲ್ಲ. ಆದರೆ ರಾಜಕೀಯದಲ್ಲಿ ಆಸಕ್ತಿ ಇದ್ದು ಅವನಾಗಿ ಬಂದರೆ ತಡೆಯಲು ಆಗದು’ ಎಂದರು. ಆದರೆ ಅವನು ರಾಜಕೀಯಕ್ಕೆ ಬರುವುದು ಅನುಮಾನ. ನನ್ನ ಮಗ ಶಶಿಕುಮಾರ ರಾಜಕೀಯಕ್ಕಿಂತ ಸಿನಿಮಾದಲ್ಲಿ ಆಸಕ್ತಿ ಹೆಚ್ಚಾಗಿದೆ. ಅವನು ಈಗಾಗಲೇ ಸಿನಿಮಾ ನಟನೆಯ ತರಬೇತಿ ಪಡೆದಿದ್ದಾನೆ. ಮುಂದೆ ಸಿನಿಮಾದಲ್ಲಿ ಹೀರೋ ಆಗುವುದಾದರೆ ಬೇಡ ಅನ್ನೋಲ್ಲ. ಆದರೆ, ಸಿನಿಮಾ ಇಂಡಸ್ಟ್ರೀ ಸದ್ಯ ಅಷ್ಟಾಗಿ ಸರಿಯಾಗಿಲ್ಲ, ಮುಂದಿನ ದಿನಗಳಲ್ಲಿ ನಾನು ಈ ಬಗ್ಗೆ ವಿಚಾರ ಮಾಡುತ್ತೇನೆ ಎಂದಿದ್ದಾನೆ ಎಂದಿದ್ದಾನೆ ಎಂದರು.

ಇದನ್ನೂ ಓದಿ: ಛತ್ರಪತಿ ಶಿವಾಜಿ ಒಂದು ಧರ್ಮಕ್ಕೆ ಸೀಮಿತವಲ್ಲ, ಕೇಸರಿಕರಣ ಯತ್ನ ನಡೆಯುತ್ತಿದೆ:ಶಿವರಾಜ ತಂಗಡಗಿ

ನಾನು ಕಾರ್ಯಕ್ರಮದ ನಂತರ ಬಾಗಲಕೋಟೆಗೆ ಹೋಗುತ್ತಿದ್ದೇನೆ, ಹೀಗಾಗಿ, ನನ್ನ ಜತೆ ಮಗ ಶಶಿಕುಮಾರ ಆಗಮಿಸಿದ್ದಾನೆ, ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರು.