Asianet Suvarna News Asianet Suvarna News

Udupi: ಕಾರ್ಕಳದ ಪರಶುರಾಮ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ದೇವರ 33 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.

Parashurama Theme Park inaugurated by CM Basavaraj Bommai At udupi gvd
Author
First Published Jan 27, 2023, 10:07 PM IST

ಉಡುಪಿ (ಜ.27): ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ದೇವರ 33 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರ ಮುತುವರ್ಜಿಯಲ್ಲಿ ಪ್ರವಾಸೋದ್ಯಮ ಹಾಗೂ ಧಾರ್ಮಿಕತೆ ಬೆಳೆಸುವ ಅಪರೂಪದ ಯೋಜನೆ ಜಾರಿಯಾಗಿದೆ. ಪರಶುರಾಮ ಥೀಮ್ ಪಾರ್ಕ್ ಹೆಸರಲ್ಲಿ ಆಕರ್ಷಣೀಯ ಕೇಂದ್ರವನ್ನು ಭೂಮಟ್ಟದಿಂದ 400 ಅಡಿ ಎತ್ತರದಲ್ಲಿ ರೂಪಿಸಲಾಗಿದೆ. ಉಮಿಕಲ್ ಬೆಟ್ಟದ ತುದಿಯಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿರುವ ಕೊಡಲಿ ಹಿಡಿದ ಪರಶುರಾಮರ ಪ್ರತಿಮೆಯನ್ನು ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕರಾವಳಿಯ ಪ್ರವಾಸೋದ್ಯಮ ದೃಷ್ಟಿಯಿಂದ ಯೋಜನೆಯ ಮಹತ್ವವನ್ನು ವಿವರಿಸಿದರು. 

ಉದ್ಘಾಟನಾ ಭಾಷಣ ಮಾಡಿದ ಸಿಎಂ, ಇಂದು ಕರ್ನಾಟಕದ ಕರಾವಳಿಯ ಐತಿಹಾಸಿಕ ದಿನ, ಪರಶುರಾಮ ಥೀಂ ಪಾರ್ಕ್, ಪುತ್ಥಳಿ ಅನಾವರಣ ಮಾಡಿದ ನಾವು ಭಾಗ್ಯವಂತರು,ಇದೊಂದು ಇತಿಹಾಸ ಸೃಷ್ಟಿ ಮಾಡಿದ ದಿನ ಎಂದು ಹೇಳಿದರು. ಪರಶುರಾಮ ರೋಚಕ ಕಥೆ ಇರುವ ಅವತಾರ ಪುರುಷ, ಪರಶುರಾಮ ಮಹಾಭಾರತದಲ್ಲಿ ಕರ್ಣನ ವ್ಯಕ್ತಿತ್ವದಂತೆಯೇ ಶಿವನಿಂದ ವರ ಪಡೆದ ವೀರ ಶೂರ ಅಗಾಧ ಶಕ್ತಿ ಹೊಂದಿದ್ದ ವ್ಯಕ್ತಿ ಪರಶುರಾಮ, ರೇಣುಕಾದೇವಿಯ ಪ್ರೀತಿಯ ಮಗ ಕೊನೆಗೆ ತಾಯಿಯ ಶಿರಚ್ಛೇದನ ಮಾಡುತ್ತಾನೆ.ವಿಶ್ವವನ್ನು 21 ಬಾರಿ ಸುತ್ತಿ ಗೆಲುವು ಸಾಧಿಸುತ್ತಾನೆ. ಸಮುದ್ರಕ್ಕೆ ಕೊಡಲಿ ಎಸೆದು ಭೂಭಾಗ ಸೃಷ್ಟಿಯಾಗುತ್ತದೆ. 

Yadgir: ಬಾಬಾ ಕನಸಿನಲ್ಲಿ ಬಂದಿದ್ದಕ್ಕೆ ಭವ್ಯ ಸಾಯಿ ಮಂದಿರ ನಿರ್ಮಿಸಿದ ಉದ್ಯಮಿ ಮಹಾರಾಜ್ ದಿಗ್ಗಿ

ಸೃಷ್ಟಿಕರ್ತನ ಈ ಕಥೆ ಪುರಾಣದಲ್ಲಿದೆ ಎಂದರು. ಮುಂದಿನ ಪೀಳಿಗೆಗೆ ಈ ಕಥೆ ಬೇಕಾಗುತ್ತದೆ ಅದಕ್ಕಾಗಿ ಈ ಥೀಂ ಪಾರ್ಕ್ ಸ್ಥಾಪನೆ ಆಗಿದೆ.ಸುನೀಲ್ ಕುಮಾರ್ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳೋದು ಜನ ಸೇವಕನನ ಗುಣ.ನಾನು ಪರಶುರಾಮನ ಭಕ್ತನಾಗಿ ಉದ್ಘಾಟನೆಗೆ ಬಂದಿದ್ದೇನೆ. ಥೀಂ ಪಾರ್ಕ್ ಟೂರಿಸಂ ಸೆಂಟರ್ ಜೊತೆ ಪುಣ್ಯಭೂಮಿ ಕೂಡಾ ಆಗಲಿದೆ.ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ.ಕರಾವಳಿಗೆ ಟೂರಿಸಂ ನ ಮಾಸ್ಟರ್ ಪ್ಲ್ಯಾನ್ ಮಾಡಿದ್ದೇವೆ.ಈ ಭಾಗದ ಜನ ಪರಿಶ್ರಮ ಜೀವಿಗಳು, ಕರಾವಳಿ ಭಾಗಕ್ಕೆ ಒಂದೂವರೆ ಲಕ್ಷ ಕೋಟಿ ರುಪಾಯಿ ಹೂಡಿಕೆಗೆ ಮುಂದೆ ಬಂದಿದ್ದಾರೆ.ಕರಾವಳಿಗೆ ಪ್ಯಾಕೇಜ್ ಕೊಡಲ್ಲ ಬದುಕು ಕಟ್ಟಿಕೊಡುತ್ತೇವೆ.ಪರಶುರಾಮನ ಸ್ಥಾಪನೆ ನಂತರ ತುಳುನಾಡು ಬಂಗಾರದ ನಾಡು ಆಗಲಿದೆ ಎಂದು ಹೇಳಿದರು.

ಏನಿದು ಪರಶುರಾಮ ಥೀಂ‌ಪಾರ್ಕ್?: ಕರಿಯಕಲ್ಲಿನ ಊರು ಕಾರ್ಕಳ ಶಿಲ್ಪ ಕಲೆಗಳ ತವರೂರು. ಕಲ್ಲರಳಿ ಹೂವಾದಂತಿರುವ ಅಪರೂಪದ ಪ್ರದೇಶ. ಈ ದೇಶಕ್ಕೆ ಅಪರೂಪದ ಶಿಲ್ಪ ಕಲಾಕೃತಿ ಮತ್ತು ಶಿಲ್ಪಿಗಳನ್ನು ನೀಡಿದ ಭೂಮಿ. ಕರಿಯ ಕಲ್ಲಿನ ಬೆಟ್ಟದ ಮೇಲೆ ತುಳುನಾಡ ಸೃಷ್ಟಿಕರ್ತ ಪರಶುರಾಮನ ಅಪರೂಪದ ಪ್ರತಿಮೆಯೊಂದು ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ. ಈ ಬೃಹತ್ ಗಾತ್ರದ ಕಂಚಿನ ಪ್ರತಿಮೆ ಕರಾವಳಿಯ ಸಾಕ್ಷಿ ಪ್ರಜ್ಞೆಯಾಗಿ ಅತೀ ಎತ್ತರದಲ್ಲಿ ಕಂಗೊಳಿಸಲಿದೆ. ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತನ್ನ ತವರು ಕ್ಷೇತ್ರದಲ್ಲಿ ಪರಶುರಾಮನನ್ನು ಸ್ಥಾಪಿಸಲು ಕಂಡ ಕನಸು ನನಸಾಗಿದೆ. 

ಲೋಕಕ್ಕೆ ಅನೇಕ ಕಂಟಕಗಳು ಬಂದಾಗಲೂ ತುಳುನಾಡ ಕರಾವಳಿ ಅತ್ಯಂತ ಸುರಕ್ಷಿತವಾಗಿದ್ದನ್ನು ನೋಡಿದ್ದೇವೆ. ಕರುನಾಡ ಸಹೋದರಿ ಈ ತುಳುನಾಡು ಪರಶುರಾಮನ ಸೃಷ್ಟಿ. ಹಾಗಂತಲೇ ಭಯಾನಕ ಚಂಡಮಾರುತಗಳು ಬಂದಾಗಲೂ ನಮ್ಮ ಕರಾವಳಿ ಅತ್ಯಂತ ಸೇಫ್ ಆಗಿ ಅಚ್ಚರಿ ಹುಟ್ಟಿಸಿದ್ದು ಇದೆ. ಇದೀಗ ತುಳುನಾಡ ಸೃಷ್ಟಿಕರ್ತ ಪರಶುರಾಮರನ್ನು ಅತ್ಯಂತ ಭಕ್ತಿ ಆಧಾರಗಳಿಂದ ಗೌರವಿಸುವ ಕ್ಷಣ.. ಹಾಗಂತಲೇ ಸಚಿವ ಸುನಿಲ್ ಕುಮಾರ್ ಅವರ ತವರು ಕ್ಷೇತ್ರದಲ್ಲಿ 33 ಅಡಿ‌ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಯಾಗಿದೆ. ತುಳುನಾಡು ಪರಶುರಾಮ ದೇವರ ಸೃಷ್ಟಿ ಅನ್ನುವ ನಂಬಿಕೆ ಇದೆ. 

ಅನಾದಿಕಾಲದಿಂದಲೂ ಆಡು ಭಾಷೆಯಲ್ಲಿ ಈ ಮಾತನ್ನು ಹೇಳಿಕೊಂಡು ಬರಲಾಗಿದೆ. ಪರಶುರಾಮ ದೇವರು ಎತ್ತರದ ಸ್ಥಳದಿಂದ ನಿಂತು ತಮ್ಮ ಕೊಡಲಿಯನ್ನು ಬಿಸಿದಷ್ಟು ಭೂಮಿ ತುಳುನಾಡಾಗಿ ಮಾರ್ಪಟ್ಟಿತ್ತು ಅನ್ನುವ ಮಾತು ಕೇಳಿದ್ದೇವೆ. ಪರಶುರಾಮರು ಕೊಡಲಿ ಎಸೆದಷ್ಟು ದೂರ ಸಮುದ್ರ ಹಿಂದಕ್ಕೆ ಸರಿದು ಈ ಸುರಕ್ಷಿತ ಸ್ಥಳ ಇವತ್ತಿಗೂ ಫಲವತ್ತಿನ ಭೂಮಿಯಾಗಿ ಇಲ್ಲಿನ ಜನ ಅನುಭವಿಸುತ್ತಿದ್ದಾರೆ. ನಾಡಿನ ಬೇರೆಲ್ಲಾ ಭಾಗಗಳಿಗಿಂತಲೂ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿಯಲ್ಲಿ ವ್ಯತ್ಯಾಸವಿದೆ. ಈ ಎಲ್ಲಾ ಹೊಸತನಗಳಿಗೆ ಕಾರಣ ಈ ಭೂಮಿ ಪರಶುರಾಮರ ಸೃಷ್ಟಿ ಎಂದು ಹಿರಿಯರು ನಂಬಿಕೊಂಡು ಬಂದಿದ್ದಾರೆ. ಇಷ್ಟಿದ್ದರೂ ಪರಶುರಾಮ ದೇವರನ್ನು ಮೆಚ್ಚಿಸಿ ಅರ್ಚಿಸಲು ಯಾವುದೇ ದೇವಾಲಯಗಳು ಈ ಭಾಗದಲ್ಲಿ ಕಂಡುಬಂದಿಲ್ಲ. 

Kodagu: ಫೆ.3ರಿಂದ 6ರವರೆಗೆ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ: ಗಾಂಧಿ ಮೈದಾನದಲ್ಲಿ ವೈನ್ ಮೇಳ

ಸೃಷ್ಟಿಕರ್ತನಿಗೆ ಗೌರವ ಕೊಡುವ ಸಲುವಾಗಿ ತುಳುನಾಡ ಜನರು ಕಂಡ ಕನಸು ಪರಶುರಾಮ ಪ್ರತಿಮೆ. ಈ ಭಾಗದ ಜನರ ನಾಡಿ ಮಿಡಿತ ಅರಿತ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ ಸುನಿಲ್ ಕುಮಾರ್, ಅಪರೂಪದ ಬೆಟ್ಟವೊಂದರ ಮೇಲೆ ಪರಶುರಾಮರ 33 ಅಡಿಗಳ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮಾಡಿಸಿದ್ದಾರೆ. ಶಿಲ್ಪ ಕಲೆಗಳ ತವರು ಕಾರ್ಕಳ ತಾಲೂಕಿನ ಬೈಲೂರು ಎರ್ಲಪ್ಪಾಡಿ, ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ 33 ಅಡಿಗಳ ಪ್ರತಿಮೆ ಪ್ರತಿಷ್ಠಾಪನೆ ಪೂರ್ಣಗೊಂಡಿವೆ. ಸುಮಾರು 15 ಟನ್ ತೂಕದಲ್ಲಿ ಮತ್ತು ಅಂದಾಜು ಎರಡು ಕೋಟಿ ವೆಚ್ಚದಲ್ಲಿ ಕೊಡಲಿ ಹಿಡಿದ ಆಕರ್ಷಕ ಬಂಗಿಯಲ್ಲಿ ಪರಶುರಾಮನ ಪ್ರತಿಮೆ ರೂಪಿಸಲಾಗಿದೆ.  ಕಲಾವಿದರಾದ ಕೃಷ್ಣ ನಾಯಕ್ ಅವರು, ಅಪರೂಪದ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

Follow Us:
Download App:
  • android
  • ios