ಗ್ರಾಮ ಪಂಚಾಯತ್ ಚುನಾವಣೆಯ ಕರಡು ಮೀಸಲಾತಿ ಪಟ್ಟಿಯಲ್ಲಿನ ದೋಷಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಈ ಸ್ಟೋರಿ ಮಾರ್ಗದರ್ಶನವಾಗಲಿದೆ. ಅರ್ಜಿಯನ್ನು ಹೇಗೆ ಸಿದ್ಧಪಡಿಸಬೇಕು, ಯಾವ ಕಾರಣಗಳನ್ನು ನೀಡಬೇಕು, ಮತ್ತು ನಿಗದಿತ ಸಮಯದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಇದು ವಿವರಿಸುತ್ತದೆ.   

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ವಾರ್ಡ್‌ವಾರು ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ನಿಮ್ಮ ವಾರ್ಡ್‌ನ ಮೀಸಲಾತಿಯಲ್ಲಿ ಏನಾದರೂ ತಪ್ಪು ಅಥವಾ ಅನ್ಯಾಯ ನಡೆದಿದೆ ಎಂದು ನಿಮಗೆ ಅನಿಸಿದರೆ, ಅದನ್ನು ಸರಿಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಸಾರ್ವಜನಿಕರು ಹಾಗೂ ಚುನಾವಣಾ ಆಕಾಂಕ್ಷಿಗಳು ಜಿಲ್ಲಾಧಿಕಾರಿಗಳಿಗೆ ಅಥವಾ ಸಂಬಂಧ ಪಟ್ಟ ತಾಲೂಕು ದಂಡಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಕ್ಷೇಪಣೆ ಸಲ್ಲಿಸುವ ಸರಳ ಹಂತಗಳು ಇಲ್ಲಿವೆ!

1. ಅರ್ಜಿ ಸಿದ್ಧಪಡಿಸುವುದು ಹೇಗೆ?

ಒಂದು ಬಿಳಿ ಹಾಳೆ ತೆಗೆದುಕೊಳ್ಳಿ ಅಥವಾ ಕಂಪ್ಯೂಟರ್ ಟೈಪಿಂಗ್ ಮೂಲಕ ಅರ್ಜಿ ಸಿದ್ಧಪಡಿಸಿ. ಅರ್ಜಿಯ ಆರಂಭದಲ್ಲಿ, "ಮಾನ್ಯ ಜಿಲ್ಲಾಧಿಕಾರಿಗಳು" ಎಂದು ಬರೆದು, ನಿಮ್ಮ ಜಿಲ್ಲೆಯ ಹೆಸರನ್ನು ಹಾಕಿ. ನಂತರ ವಿಷಯ ಎಂದು ನಮೂದಿಸಿ ನಿಮ್ಮ ಗ್ರಾಪಂ ಹೆಸರು ಮತ್ತು ವಾರ್ಡ್ ಸಂಖ್ಯೆ ಬರೆದು, ಮೀಸಲಾತಿ ಬದಲಾವಣೆ ಕೋರಿ ಆಕ್ಷೇಪಣೆ ಎಂದು ಸ್ಪಷ್ಟವಾಗಿ ಬರೆಯಿರಿ. ಅರ್ಜಿಯಲ್ಲಿ ನಿಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಿರಿ.

2. ಅರ್ಜಿಯಲ್ಲಿ ಏನು ಬರೆಯಬೇಕು?

ಕೇವಲ ಮೀಸಲಾತಿ ಬದಲಾಯಿಸಿ ಎಂದರೆ ಅಧಿಕಾರಿಗಳು ಒಪ್ಪುವುದಿಲ್ಲ. ಅದಕ್ಕೆ ಸರಿಯಾದ ಕಾರಣ ನೀಡಬೇಕು. ಸರದಿ ಉಲ್ಲಂಘನೆ, ಕಳೆದ ಎರಡು-ಮೂರು ಚುನಾವಣೆಗಳಲ್ಲಿ ನಿಮ್ಮ ವಾರ್ಡ್‌ಗೆ ಯಾವ ಮೀಸಲಾತಿ ಇತ್ತು? ಈ ಬಾರಿಯೂ ಅದೇ ವರ್ಗಕ್ಕೆ ಮುಂದುವರಿದಿದೆಯೇ? ಹಾಗಿದ್ದರೆ ರೊಟೇಷನ್ ನಿಯಮದಂತೆ ನಮಗೆ ಈ ಬಾರಿ ಬೇರೆ ಮೀಸಲಾತಿ ಬರಬೇಕಿತ್ತು ಎಂದು ಬರೆಯಿರಿ. ನಿಮ್ಮ ವಾರ್ಡ್‌ನಲ್ಲಿ ಒಂದು ನಿರ್ದಿಷ್ಟ ಸಮುದಾಯದ (ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ) ಜನರ ಸಂಖ್ಯೆ ಹೆಚ್ಚಾಗಿದ್ದರೂ ಅವರಿಗೆ ಮೀಸಲಾತಿ ಸಿಗದಿದ್ದರೆ, ಅಥವಾ ಜನರೇ ಇಲ್ಲದ ವರ್ಗಕ್ಕೆ ಮೀಸಲಾತಿ ನೀಡಿದ್ದರೆ ಅದನ್ನು ಅರ್ಜಿಯಲ್ಲಿ ಎತ್ತಿ ತೋರಿಸಿ.

3. ಯಾವ ದಾಖಲೆಗಳನ್ನು ಲಗತ್ತಿಸಬೇಕು?

ನಿಮ್ಮ ದೂರಿಗೆ ಬಲ ಬರಲು ಈ ವಿಷಯಗಳ ಜಿರಾಕ್ಸ್ ಪ್ರತಿ ಅರ್ಜಿಯೊಂದಿಗೆ ಜೋಡಿಸಿ, ಅವುಗಳೆನೆಂದರೆ, ನಿಮ್ಮ ವಾರ್ಡ್‌ನ ಇತ್ತೀಚಿನ ಮತದಾರರ ಪಟ್ಟಿಯ ನಕಲು. ಕಳೆದ ಚುನಾವಣೆಗಳಲ್ಲಿ ಆ ವಾರ್ಡ್‌ಗೆ ಯಾವ ಮೀಸಲಾತಿ ಇತ್ತು ಎಂಬುದನ್ನು ತೋರಿಸುವ ಹಳೆಯ ದಾಖಲೆಗಳನ್ನು ಲಗತ್ತಿಸಿ. ಇದಾದರೇ ನಿಮ್ಮ ಅರ್ಜಿಗೆ ಇನ್ನು ಬಲ ಬರುತ್ತದೆ.

4. ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು?

ಸಿದ್ಧಪಡಿಸಿದ ಅರ್ಜಿಯನ್ನು ನೇರವಾಗಿ ನಿಮ್ಮ ಜಿಲ್ಲಾಧಿಕಾರಿಗಳ (DC)ಕಚೇರಿಗೆ ಅಥವಾ ಅವರು ಸೂಚಿಸಿರುವ ತಹಶೀಲ್ದಾರ್ ಕಚೇರಿಯ ಚುನಾವಣಾ ವಿಭಾಗಕ್ಕೆ ಹೋಗಿ ನೀಡಬೇಕು. ಅರ್ಜಿಯನ್ನು ಕೊಟ್ಟ ತಕ್ಷಣ, ಅಲ್ಲಿನ ಅಧಿಕಾರಿಯಿಂದ ಮತ್ತೊಂದು ಪ್ರತಿಯ ಮೇಲೆ "ಸ್ವೀಕೃತಿ ಮುದ್ರೆ" (ರಸೀದಿ/Stamp) ಮತ್ತು ದಿನಾಂಕವನ್ನು ಕಡ್ಡಾಯವಾಗಿ ಹಾಕಿಸಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ. ಇದು ನಿಮ್ಮ ಬಳಿ ಇರುವ ದೊಡ್ಡ ಸಾಕ್ಷಿ.

5. ಕೊನೆಯ ದಿನಾಂಕದ ಗಮನವಿರಲಿ!

ಕರಡು ಪಟ್ಟಿ ಪ್ರಕಟವಾದ ದಿನದಿಂದ ಕೇವಲ 7ರಿಂದ 15 ದಿನಗಳ ಒಳಗೆ ಮಾತ್ರ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಈ ಸಮಯ ಮೀರಿದರೆ ನಿಮ್ಮ ಅರ್ಜಿ ಸ್ವೀಕರಿಸುವುದಿಲ್ಲ. ಬಂದಿರುವ ಎಲ್ಲ ಅರ್ಜಿ ಪರಿಶೀಲಿಸಿ, ತಪ್ಪುಗಳಿದ್ದರೆ ಸರಿಪಡಿಸಿ ಜಿಲ್ಲಾಧಿಕಾರಿಗಳು ಅಂತಿಮ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುತ್ತಾರೆ.