Political Controversy: ಚಾಣಕ್ಯ ಎಂದೂ ಕುದುರೆ ವ್ಯಾಪಾರ ಮಾಡುತ್ತಿರಲಿಲ್ಲ. ಈಗ ಕುದುರೆ ವ್ಯಾಪಾರ ಮಾಡುವ ಡಿಕೆಶಿ ಚಾಣಕ್ಯ ಆಗಲು ಹೇಗೆ ಸಾಧ್ಯ ಎಂದು ಆರ್.ಅಶೋಕ್ ಲೇವಡಿ ಮಾಡಿದರು. 

ಬೆಳಗಾವಿ (ಜೂ.22): ಚಾಣಕ್ಯ ಎಂದೂ ಕುದುರೆ ವ್ಯಾಪಾರ ಮಾಡುತ್ತಿರಲಿಲ್ಲ. ಈಗ ಕುದುರೆ ವ್ಯಾಪಾರ ಮಾಡುವ ಡಿಕೆಶಿ ಚಾಣಕ್ಯ ಆಗಲು ಹೇಗೆ ಸಾಧ್ಯ ಎಂದು ಆರ್.ಅಶೋಕ್ ಲೇವಡಿ ಮಾಡಿದರು. ಪರಿಷತ್ ಚುನಾವಣೆ ಬಳಿಕ ಸಿಎಂ ಡಿಕೆಶಿ ತಂತ್ರ ‌ಚಾಣಕ್ಯ ತಂತ್ರ ಎಂದು ಬಣ್ಣಿಸುತ್ತಿರುವ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಚಾಣಾಕ್ಷ ಯಾವೂರಿಗೆ..? ನಾವು 17 ಜನ ಶಾಸಕರನ್ನು ಕರೆದುಕೊಂಡು ಹೋದಾಗ ಈ ಚಾಣಕ್ಯ ಎಲ್ಲಿದ್ದ..? ಡಿಕೆಶಿ ‌ಆಗ ಮಂತ್ರಿ ಇದ್ದರು, ಆಗ ನಮ್ಮ ಜೊತೆಗೆ ಅವರ ಶಾಸಕರು ಬಂದಿದ್ದರು ಎಂದು ತಿರುಗೇಟು ನೀಡಿದರು.

2019ರಲ್ಲಿ ಕಾಂಗ್ರೆಸ್ ‌ಶಾಸಕರು ಮುಂಬೈಗೆ ಹೋದಾಗ ಇದೇ ಕಾಂಗ್ರೆಸ್ ನಾಯಕರು ಕುದುರೆ ವ್ಯಾಪಾರ ಅಂದಿದ್ದರು. ನಮ್ಮ ಜೊತೆಗೆ ಕಾಂಗ್ರೆಸ್ ಶಾಸಕರು ಬಂದಾಗ ಆಪರೇಷನ್ ಕಮಲ ಅಂತಾ ಹೇಳಿದ್ದೀರಿ. ಆಗ ನಮಗೆ ಬುದ್ಧಿ ಹೇಳ್ತಿರಾ? ಈಗ ನೀವು ಮಾಡಿದ್ದೇನು, ನಾಚಿಕೆ ಆಗಲ್ಲವಾ..? ಕಾಂಗ್ರೆಸ್‌ಗೆ ಇದು ತಿರುಗಬಾಣ ಆಗುತ್ತದೆ. ನಾವೇ ಉತ್ತರ ಕೊಡುತ್ತೇವೆ ಎಂದು ಆರ್.ಅಶೋಕ ಕೈ ಸವಾಲು ಹಾಕಿದರು.

ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ, ವಂಚನೆ ಬಗೆದಿರುವುದು ನಿಜ. ಯಾವ ಶಾಸಕ ದ್ರೋಹ ಮಾಡಿದ್ದಾರೆ ಗೊತ್ತಿಲ್ಲ. ಆ ಕಾರಣಕ್ಕೆ ಅಧ್ಯಕ್ಷರ ಜೊತೆಗೆ ಮಾತನಾಡುತ್ತೇವೆ. ಈ ವಿಚಾರವಾಗಿ ಚರ್ಚಿಸಲು ನಮ್ಮ ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಕುದುರೆ ವ್ಯಾಪಾರ, ಹಣದ ಹೊಳೆ ಹರಿಸಿರುವುದನ್ನು ತಿಳಿಸುತ್ತೇವೆ. ಪರಿಷತ್ ‌ಚುನಾವಣೆಯಲ್ಲಿ ಈ ರೀತಿ ಮಾಡಿರುವುದು ಕಾಂಗ್ರೆಸ್‌ಗೆ ಒಳ್ಳೆಯದಲ್ಲ ಎಂದು ಆರ್.ಅಶೋಕ ಹರಿಹಾಯ್ದರು.

ಆಣೆ ಪ್ರಮಾಣ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಹಿನ್ನೆಲೆ ಆಣೆ ಪ್ರಮಾಣ ಮಾಡಿಸಲು ಬಿಜೆಪಿ ಶಾಸಕರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುವ ಸಂಬಂಧ ವಿಜಯೇಂದ್ರ ನನಗೆ ಫೋನ್ ಮಾಡಿದ್ದರು. ನಾಳೆ ಅವರನ್ನು ಭೇಟಿ ಆಗಿ, ಮಾತುಕತೆ ನಡೆಸುತ್ತೇನೆ.‌ ವಿಜಯೇಂದ್ರ ಮತ್ತು ಹಿರಿಯರ ಜೊತೆಗೆ ಚರ್ಚಿಸಿದ ಬಳಿಕ ಸ್ಪಷ್ಟ ತೀರ್ಮಾನ ಮಾಡುತ್ತೇವೆ ಎಂದರು.

ಅಡ್ಡ ಮತದಾನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ, ತಪ್ಪಿತಸ್ಥರಿಗೆ ಬುದ್ಧಿ ಕಲಿಸುತ್ತೇವೆ. ಕೇಂದ್ರ ನಾಯಕರ ಜೊತೆಗೆ ಗಂಭೀರವಾಗಿ ಚರ್ಚೆ ಮಾಡಿ ಕ್ರಮಕ್ಕೆ ಆಗ್ರಹಿಸುತ್ತೇವೆ. ಅಡ್ಡ ಮತದಾನ ಮಾಡಿದವರು ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೆ ಮಾಡುತ್ತೇವೆ ಎಂದು ಆರ್.ಅಶೋಕ‌ ಖಡಕ್ ಎಚ್ಚರಿಕೆ ನೀಡಿದರು.