ಪೆಹಲ್ಗಾಂ ದಾಳಿ ಬಳಿಕ ಭಾರತದಲ್ಲಿರುವ ಪಾಕಿಸ್ತಾನಿಯರು ಭಾರತ ತೊರೆಯಲು ಸೂಚನೆ ನೀಡಿತ್ತು. ಇದೀಗ ಮೂವರು ಅಪ್ರಾಪ್ತ ಪಾಕಿಸ್ತಾನಿಯರು ಮೈಸೂರಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರು(ಮೇ.06) ಪೆಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಭಾರತ ಹಲವು ನಿರ್ಣಯಗ ಕೈಗೊಂಡಿದೆ. ಈ ಪೈಕಿ ಭಾರತದಲ್ಲಿರುವ ಪಾಕಿಸ್ತಾನಿಯರು ತಕ್ಷಣವೇ ದೇಶ ತೊರೆಯವಂತೆ ಆದೇಶ ನೀಡಿತ್ತು. ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು. ಇದರಂತೆ ಹಲವರು ಪಾಕಿಸ್ತಾನಕ್ಕೆ ಮರಳಿದ್ದಾರೆ. ಮತ್ತೆ ಕೆಲವರು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನದ ಮೂವರು ಅಪ್ರಾಪ್ತರು ತಮಗೆ ಮೈಸೂರಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮೈಸೂರಿನಲ್ಲಿ ಇರಲು ಅವಕಾಶ ಕೊಡಿ, ಕಾನೂನು ಕ್ರಮ ಬೇಡ
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ 8 ವರ್ಷದ ಬಿಬಿ ಯಾಮಿನಾ, 4 ವರ್ಷದ ಮೊಹಮ್ಮದ್ ಯುದಾಸಿರ್ ಹಾಗೂ 3 ವರ್ಷದ ಮೊಹಮ್ಮದ್ ಯೂಸುಫ್ ಈ ಅರ್ಜಿ ಸಲ್ಲಿಸಿದ್ದಾರೆ. ಈ ಮೂವರು ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ. ಇದೀಗ ಈ ಮೂವರು ಮಕ್ಕಳು ತಾವು ಮೈಸೂರನಲ್ಲಿ ಕನಿಷ್ಠ ಮೇ.15ರ ವರೆಗೆ ಇರಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರೆ. ಇವರ ತಂದೆ ಬಲೂಚಿಸ್ತಾನದಲ್ಲಿದ್ದು, ತಾಯಿ ರಂಶಾ ಜಹಾನ್ ಜೊತೆ ಮೈಸೂರಿಗೆ ಆಗಮಿಸಿದ್ದಾರೆ.

ಪಾಕಿಸ್ತಾನ ಪ್ರಜೆ ಬಳಿ ಭಾರತದ ಆಧಾರ್, ವೋಟಿಂಗ್ ಮತ್ತು ರೇಷನ್ ಕಾರ್ಡ್!

ಮೈಸೂರು ಮೂಲದ ರಂಶಾ ಜಹಾನ್ 2015ರಲ್ಲಿ ಪಾಕಿಸ್ತಾನದ ಮೊಹಮ್ಮದ್ ಫಾರೂಖ್‌ನ ಮದುವೆಯಾಗಿದ್ದಾರೆ. ಈ ದಂಪತಿಗಳ ಮೂವರು ಮಕ್ಕಳು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳು ತಕ್ಷಣವೇ ದೇಶ ತೊರೆಯುವಂತೆ ಸೂಚಿಸಿತ್ತು. ಆದರೆ ಮೇ.12ರಂದು ಮೈಸೂರಿನಲ್ಲಿ ಮದುವೆ ಕಾರ್ಯಕ್ರಮವಿರುವ ಕಾರಣ ತಕ್ಷಣ ಹೊರಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಿದೆ. 

ಜನವರಿಯಲ್ಲಿ ಆಗಮಿಸಿದ್ದ ಮೂವರು ಮಕ್ಕಳು ಹಾಗೂ ರಂಶಾ ಜಹಾನ್
ರಜಾ ದಿನದಲ್ಲಿ ಪಾಕಿಸ್ತಾನದಿಂದ ಇವರು ಭಾರತಕ್ಕೆ ಆಗಮಿಸಿಲ್ಲ. 2025ರ ಜನವರಿ 4 ರಂದು ಭಾರತಕ್ಕೆ ಆಗಮಿಸಿದ್ದ ಮೂವರು ಮಕ್ಕಳು ಹಾಗೂ ರಂಶಾ ಜಹಾನ್ ಫೆಬ್ರವರಿ 17, 2025ಕ್ಕೆ ವೀಸಾ ಅವಧಿ ಅಂತ್ಯಗೊಂಡಿತ್ತು. ಈ ವೇಳೆ ಮತ್ತೆ ಕೆಲ ಕಾರಣಗಳನ್ನು ನೀಡಿ ವೀಸಾ ಅವಧಿ ವಿಸ್ತರಣೆ ಮಾಡಿಸಿಕೊಳ್ಳಲಾಗಿದೆ. ಜೂನ್ 18ರ ವರೆಗೆ ವೀಸಾ ಅವಧಿಯನ್ನು ವಿಸ್ತರಿಸಿಕೊಂಡದ್ದಾರೆ. ಇದರ ನಡುವೆ ಕೇಂದ್ರದ ಸೂಚನೆಯಿಂದ ತಕ್ಷಣವೇ ಮರಳಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಇದೀಗ ಮೇ.12ರಂದು ಮದುವೆ ಕಾರಣ ನೀಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 

ವಾಘ ಗಡಿಗೆ ತೆರಳಿ ಫೋನ್ ಮಾಡಿದರೂ ರಿಸೀವ್ ಮಾಡದ ಗಂಡ
ಪಾಕಿಸ್ತಾನ ಪತಿ ಇದೀಗ ಪತ್ನಿ ರಂಶಾ ಜಹಾನ್ ಫೋನ್ ಸ್ವೀಕರಿಸುತ್ತಿಲ್ಲ. ವಾಘಾ ಗಡಿಗೆ ತೆರಳಿ ಮಕ್ಕಳನ್ನು ಗಂಡನ ಬಳಿ ಒಪ್ಪಿಸಲು ಮುಂದಾಗಿದ್ದ ಮೈಸೂರಿನ ರಂಶಾ ಜಹಾನ್‌ಗೆ ಹಿನ್ನಡೆಯಾಗಿತ್ತು. ವಾಘಾ ಗಡಿಯಲ್ಲಿ ಫೋನ್ ಮಾಡುತ್ತಾ ಕಾದು ಕುಳಿತರೂ ಗಂಡ ಫೋನ್ ಸ್ವೀಕರಿಸಲೇ ಇಲ್ಲ. ಇತ್ತ ವಾಘ ಗಡಿಗೂ ಬರಲೇ ಇಲ್ಲ. ವಾಘಾ ಗಡಿಯಲ್ಲಿ ಭಾರಿ ಹೈಡ್ರಾಮವೇ ನಡೆದಿತ್ತು. ಹೀಗಾಗಿ ಮೂವರು ಮಕ್ಕಳೊಂದಿಗೆ ರಂಶಾ ಜಹಾನ್ ಮೈಸೂರಿಗೆ ಮರಳಿದ್ದರು. ಇದೀಗ ಮೇ. 12ರಂದು ಮದುವೆ ಕಾರಣದಿಂದ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಿಲ್ಲ. ಮೈಸೂರಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿ ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. 

ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉತ್ತರದ ಬಳಿಕ ಈ ಕುರಿತು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಪಾಕಿಸ್ತಾನದ ಪ್ರಜೆಗಳ ಗಡಿಪಾರಿಗೆ ಅಗತ್ಯ ಕ್ರಮ: ಪರಮೇಶ್ವರ್‌ ಸ್ಪಷ್ಟನೆ