ಚನ್ನರಾಯಪಟ್ಟಣ, (ನ.29): ಭತ್ತ ಮತ್ತು ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲು ಸರ್ಕಾರ ಶೀಘ್ರದಲ್ಲೇ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲಿದೆ ಎಂದು ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ಭರವಸೆ ನೀಡಿದರು.

ಚನ್ನರಾಯಪಟ್ಟಣದಲ್ಲಿ ಗ್ರಾಮಸ್ವರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ಮೂಲಕ ರೈತರ ಹಿತ ಕಾಯಲು ಸರ್ಕಾರ ಸದಾ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ರೈತರು ಚಿಂತೆ ಪಡಬೇಕಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ರೈತರ ಪರವಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಸಹ ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಎಂದು ಹೇಳಿದರು.

ಸಿಎಂ ಬದಲಾವಣೆ ಮತ್ತೆ ಮುನ್ನೆಲೆಗೆ: ಮಹತ್ವದ ಪ್ರತಿಕ್ರಿಯೆ ಕೊಟ್ಟ ಬಿಜೆಪಿ ನಾಯಕ

ಮಧ್ಯವರ್ತಿಗಳ ಹಾವಳಿ ತಪ್ಪಿಸಿದ ಸರ್ಕಾರ
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಮುಕ್ತಗೊಳಿಸಲಾಗಿದೆ.162 ಎಪಿಎಂಸಿಗಳಲ್ಲೂ ಸಹ ಈಗ ರೈತರು ಮುಕ್ತವಾಗಿ ತಮ್ಮ ಬೆಳೆಯನ್ನು ಎಲ್ಲಿ ಬೇಕಿದ್ದರೂ, ಯಾವುದೇ ಅಡೆತಡೆಗಳಿಲ್ಲದೆ  ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದು ರೈತರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸೆಸ್ ಅನ್ನು ಸಹ ಸರ್ಕಾರ ಕಡಿಮೆಗೊಳಿಸಿದ್ದು, ಕೇವಲ 35 ಪೈಸೆಗೆ ಇಳಿಸಿದೆ. ರೈತರಿಗೆ ಕಿರಿಕಿರಿಯಾಗುತ್ತಿದ್ದ 79 ಎ, ಬಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನಮ್ಮ ಸರ್ಕಾರದಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆರ್ಥಿಕ ಸ್ಪಂದನದ ಮೂಲಕ ಸ್ವಾವಲಂಬನೆ 
ಆರ್ಥಿಕ ಸ್ಪಂದನ ಯೋಜನೆ ಮೂಲಕ ರೈತರಿಗೆ 39300 ಕೋಟಿ ರೂಪಾಯಿಗಳ ಸಾಲ ನೀಡಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮುಂದಾಗಲಾಗಿದೆ. 4 ವಿಭಾಗಗಳಲ್ಲಿ ಈ ಯೋಜನೆ ಜಾರಿಗೆ ತರುತ್ತಿದ್ದು ಬೆಂಗಳೂರು ಮೈಸೂರು ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಈಗಾಗಲೇ ಯೋಜನೆಗೆ ಚಾಲನೆ ನೀಡಲಾಗಿದೆ. ರೈತರು ಸಹ ಉತ್ತಮವಾಗಿ ಸ್ಪಂದನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

600 ಕೋಟಿ ರೂ.ಗಾಗಿ ಕೇಂದ್ರಕ್ಕೆ ಪ್ರಾಸ್ತಾವನೆ
ಇನ್ನು ಆತ್ಮನಿರ್ಭರ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ಪಾಲು 4750 ಕೋಟಿ ರೂಪಾಯಿ ಇದ್ದು, ಸಹಕಾರ ಇಲಾಖೆ ಮೂಲಕ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 600 ಕೋಟಿ ರುಪಾಯಿಗಳ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.