ರಾಜ್ಯ ಸರ್ಕಾರವು ಭಾರತ್ ಜೋಡೋ ಸಂಘಗಳಿಗೆ ನೀಡುತ್ತಿರುವ ಅನುದಾನದ ಬದಲಾಗಿ ಆಶಾ ಕಾರ್ಯಕರ್ತೆಯರ ಗೌರವ ಧನವನ್ನು ಹೆಚ್ಚಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಅಲ್ಲದೆ, ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ್ದು, ತಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಬೆಂಗಳೂರು (ನ.21): ಭಾರತ್ ಜೋಡೋ ಸಂಘಗಳಿಗೆ 1 ಸಾವಿರ ಕೋಟಿ ರು. ಕೊಟ್ಟಿರುವ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೂ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಎಲ್ಲ ಕೇಂದ್ರವೇ ಕೊಡಬೇಕು ಅಂದ್ರೆ ರಾಜ್ಯ ಸರ್ಕಾರ ಇರೋದ್ಯಾಕೆ?

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು, ಎಲ್ಲದಕ್ಕೂ ಕೇಂದ್ರ ಸರ್ಕಾರ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ರಾಜ್ಯ ಸರ್ಕಾರ ಇರುವುದೇಕೆ? ಕೇಂದ್ರ ಸರ್ಕಾರ ಹೆಚ್ಚಳ ಮಾಡಲ್ಲ ಎಂದರೆ, ರಾಜ್ಯ ಸರ್ಕಾರವೇ ಏಕೆ ಹೆಚ್ಚಳ ಮಾಡಬಾರದು? ಆಶಾ ಕಾರ್ಯಕರ್ತೆಯರು ನಮ್ಮ ನಾಡಿನ ಜನತೆಗೆ ಕೆಲಸ ಮಾಡುತ್ತಿದ್ದಾರೆ. ಎಲ್ಲದಕ್ಕೂ ಕೇಂದ್ರ ಸರ್ಕಾರ ಎನ್ನುವ ಬದಲು ರಾಜ್ಯ ಸರ್ಕಾರವೇ ಗೌರವಧನ ಹೆಚ್ಚಳ ಮಾಡಬೇಕು. ಅನಗತ್ಯವಾಗಿ ಸಾರ್ವಜನಿಕರ ಹಣ ಪೋಲು ಮಾಡುತ್ತಿರುವ ಈ ಸರ್ಕಾರಕ್ಕೆ ಚಳಿಯನ್ನೂ ಲೆಕ್ಕಿಸದೆ ಮಕ್ಕಳನ್ನು ಹಾಕಿಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಕಣ್ಣಿಗೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗೆ ಕಾರ್ಯಕರ್ತರನ್ನ ಸಾಕುವುದೇ ದೊಡ್ಡ ಕೆಲಸ

ಅವರಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕುವುದೇ ದೊಡ್ಡ ಕೆಲಸವಾಗಿದೆ. ಅದಕ್ಕೆ ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದಾರೆ. ನಾನೀಗ ಕೇಂದ್ರದ ಮಂತ್ರಿ. ನನ್ನ ಕೆಲಸ ಒಂದು ಪರಿಮಿತಿಯಲ್ಲಿದೆ. ನಾನೇನು ಮಾಡಲು ಆಗಲ್ಲ. ನಾನು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅನೇಕ ಬಾರಿ ಹಲವು ತೀರ್ಮಾನ ಮಾಡಿದ್ದೇನೆ. ಈ ಸರ್ಕಾರ ಈಗ ಆಶಾ ಕಾರ್ಯಕರ್ತೆಯರಿಗೆ ತಕ್ಷಣ ಏನಾದರೂ ಒಂದು ತೀರ್ಮಾನ ತೆಗೆದುಕೊಳ್ಳಬೇಕು. ಆ ಹೆಣ್ಣುಮಕ್ಕಳು ರಸ್ತೆಯಲ್ಲಿ ಮಲಗಿದ್ದಾರೆ. ಇದು ನಾಗರಿಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಆ ಹೆಣ್ಣುಮಕ್ಕಳಿಗೆ ಸರ್ಕಾರ ಸ್ಪಂದಿಸಬೇಕು. ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಚಪಲಚನ್ನಿಗರಾಯ ಯಾರು? ಡಿಕೆ ಸುರೇಶ್‌ಗೆ ಹೆಚ್‌ಡಿಕೆ ತಿರುಗೇಟು

ಯಾವ ಚಪಲ ಚನ್ನಿಗರಾಯನೂ ಇಲ್ಲ. ಎಲ್ಲವೂ ಮುಗಿದು ಹೋಗಿರುವ ಅಧ್ಯಾಯ. ಯಾರು ಚಪಲಚನ್ನಿಗರಾಯ ಅಂತ ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಲಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ ತೊಂದರೆ ನೀಡಲು ನನಗೆ ಊಟದ ತೊಂದರೆ ಏನಿಲ್ಲ. ನಾನು ಚೆನ್ನಾಗಿದ್ದೀನಿ. ಎಷ್ಟು ಬೇಕೋ ಅಷ್ಟು ಊಟ ಮಾಡುತ್ತೇನೆ. ಇತಿಮಿತಿಯಲ್ಲಿ ಊಟ ಮಾಡುತ್ತೇನೆ. ಇವರಿಂದ ನಾನು ಹೇಳಿಸಿಕೊಳ್ಳಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇವರ ಮೇಲೆ ದಾಳಿ ಮಾಡುವುದಕ್ಕೇ ನಾನು ಇರೋದು

ಇವರ ಮೇಲೆ ದಾಳಿ ಮಾಡುವುದಕ್ಕೇ ನಾನು ಇರುವುದು. ವಿರೋಧ ಪಕ್ಷದ ಇರುವುದು ಏಕೆ? ಇವರ ತಪ್ಪುಗಳನ್ನು ಹೊರಗೆ ಎತ್ತಿ ಇಡಲೇ ಇರುವುದು. ನಾನು ಅವರ ತಪ್ಪು ಎತ್ತಿ ಹಿಡಿಯುವುದನ್ನೇ ಅವರು ಅಸೂಯೆ ಎಂದರೆ ನಾನೇನು ಹಿಡಿದುಕೊಳ್ಳಲು ಆಗುತ್ತಾ? ಇವರ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಇವರ ಬಳಿ ಸರ್ಟಿಫಿಕೇಟ್ ಪಡೆಯಲು ನಾನು ಹೋರಾಟ ಮಾಡಬೇಕಾ? ನನಗೆ ಜನತೆ ಸರ್ಟಿಫಿಕೇಟ್‌ ಕೊಡುತ್ತಾರೆ ಎಂದು ಸುರೇಶ್‌ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.