ಸರ್ಕಾರಿ ರಜೆ ದಿನವಾದ ಶನಿವಾರವೂ ಎಲ್ಲಾ ಸೇವಾ ಕೇಂದ್ರಗಳಲ್ಲೂ ಗೃಹ ಜ್ಯೋತಿ ನೋಂದಣಿ ಮುಂದುವರೆದಿದ್ದು, ಸರ್ವರ್‌ ಸಮಸ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೋಂದಣಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 

ಬೆಂಗಳೂರು (ಜೂ.25): ಸರ್ಕಾರಿ ರಜೆ ದಿನವಾದ ಶನಿವಾರವೂ ಎಲ್ಲಾ ಸೇವಾ ಕೇಂದ್ರಗಳಲ್ಲೂ ಗೃಹ ಜ್ಯೋತಿ ನೋಂದಣಿ ಮುಂದುವರೆದಿದ್ದು, ಸರ್ವರ್‌ ಸಮಸ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೋಂದಣಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪರಿಣಾಮ ಶನಿವಾರ ಒಂದೇ ದಿನ 11.17 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಶನಿವಾರದ ವೇಳೆಗೆ 2.14 ಕೋಟಿ ಅರ್ಹ ಗ್ರಾಹಕರ ಪೈಕಿ 45.61 ಲಕ್ಷ ಮಂದಿಯ ನೋಂದಣಿ ಪೂರ್ಣಗೊಂಡಿದೆ ಎಂದು ಇಂಧನ ಇಲಾಖೆ ತಿಳಿಸಿದೆ.

ನಾಲ್ಕನೇ ಶನಿವಾರದ ರಜೆ ದಿನದ ಹೊರತಾಗಿಯೂ ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಹಾಗೂ ವಿದ್ಯುತ್‌ ಕಚೇರಿಗಳಲ್ಲಿ ನೋಂದಣಿ ಮುಂದುವರೆಯಿತು. ಇನ್ನು ಭಾನುವಾರವೂ ವಿದ್ಯುತ್‌ ಉಪವಿಭಾಗದ ಕಚೇರಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿದ್ಯುತ್‌ ಕಚೇರಿ, ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳಲ್ಲೂ ನೋಂದಣಿ ನಡೆಯಲಿದೆ. ಸುಮಾರು 2 ಸಾವಿರದಷ್ಟು ಸರ್ಕಾರಿ ನೋಂದಣಿ ಕೇಂದ್ರಗಳಿಗೆ ಪ್ರತ್ಯೇಕ ಲಿಂಕ್‌ ನೀಡಲಾಗಿದೆ. ಹೀಗಾಗಿ ಸರ್ವರ್‌ ಮೇಲಿನ ಒತ್ತಡ ಕಡಿಮೆಯಾಗಿದ್ದು, ಶನಿವಾರ ಕೆಲವು ಸಣ್ಣ ಪುಟ್ಟಸಮಸ್ಯೆಗಳ ಹೊರತಾಗಿ ಬಹುತೇಕ ಸರಾಗವಾಗಿ ನೋಂದಣಿ ಕಾರ್ಯ ನಡೆದಿದೆ.

ಶಿರಾಡಿ ಘಾಟಲ್ಲಿ ಸುರಂಗ ಮಾರ್ಗ ಯೋಜನೆಗೆ ಸರ್ಕಾರ ಮರುಜೀವ: ಸಚಿವ ಸತೀಶ್‌ ಜಾರಕಿಹೊಳಿ

ಇನ್ನು ಸಾರ್ವಜನಿಕರಿಗೆ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿರುವ https://sevasindhugs.karnataka.gov.in ವೆಬ್‌ಸೈಟ್‌ನಲ್ಲೂ ಹೆಚ್ಚು ಕಿರಿ ಕಿರಿ ಇಲ್ಲದೆ ನೋಂದಣಿ ಆಗುತ್ತಿದೆ. ಬಹುತೇಕ ಸಮಯದಲ್ಲಿ ಆಧಾರ್‌ ಓಟಿಪಿ ಸಂಖ್ಯೆ ನಮೂದಿಸಲು ಸಹ ಕೇಳುತ್ತಿಲ್ಲ. ಗ್ರಾಹಕರ ಗುರುತಿನ ಸಂಖ್ಯೆ, ಆಧಾರ್‌ ಹಾಗೂ ದೂರವಾಣಿ ಸಂಖ್ಯೆ ನಮೂದಿಸಿದರೆ ತನ್ನಿಂತಾನೇ ಓಟಿಪಿ ತೆಗೆದುಕೊಂಡು ನಮೂದಾಗುತ್ತಿದೆ. ಜತೆಗೆ ಯಾವುದೇ ಹೆಚ್ಚುವರಿ ದಾಖಲೆಗಳ ಅಪ್‌ಲೋಡ್‌ಗೆ ಕೇಳದಿರುವುದು ಅನುಕೂಲವಾಗಿದೆ ಎಂದು ಗ್ರಾಹಕರು ಹೇಳುತ್ತಾರೆ.

ಅರ್ಜಿ ನೋಂದಣಿ ಹೇಗೆ?: ಗೃಹ ಜ್ಯೋತಿ ಯೋಜನೆಗೆ ಸ್ಮಾರ್ಚ್‌ ಫೋನ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಇದ್ದರೆ ಸುಲಭವಾಗಿ ನೋಂದಾಯಿಸಬಹುದು. ಯಾವುದೇ ದಾಖಲೆ ಅಪ್‌ಲೋಡ್‌ ಅಗತ್ಯವಿಲ್ಲ. ವಿದ್ಯುತ್‌ ಸಂಪರ್ಕದ ಗ್ರಾಹಕರ ಸಂಖ್ಯೆ, ಆಧಾರ್‌ ಸಂಖ್ಯೆ, ಆಧಾರ್‌ ಕಾರ್ಡ್‌ನಲ್ಲಿರುವ ದೂರವಾಣಿ ಸಂಖ್ಯೆ ಮೂರು ಇದ್ದರೆ ಸಾಕು. https://sevasindhugs.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಯಾವ ಎಸ್ಕಾಂ ಎಂಬ ಆಯ್ಕೆ ಕ್ಲಿಕ್‌ ಮಾಡಬೇಕು. ಬಳಿಕ ವಿದ್ಯುತ್‌ ಬಿಲ್‌ನಲ್ಲಿರುವ 10 ಸಂಖ್ಯೆಯ ಗ್ರಾಹಕರ ಸಂಖ್ಯೆ ನಮೂದಿಸಬೇಕು. ಈ ವೇಳೆ ಮನೆ ವಿಳಾಸ ತಾನಾಗೆ ಮೂಡುತ್ತದೆ.

ಡಿಸೆಂಬರ್‌ ಒಳಗೆ ಬಿಬಿಎಂಪಿ ಚುನಾವಣೆ: ಸಚಿವ ರಾಮಲಿಂಗಾರೆಡ್ಡಿ

ಮುಂದೆ ಸ್ವಂತ ಮನೆಯೇ ಅಥವಾ ಬಾಡಿಗೆ ಮನೆಯೇ ಎಂಬುದನ್ನು ಟಿಕ್‌ ಮಾಡಬೇಕು. ಅರ್ಜಿದಾರರ ಮನೆಯ ಯಜಮಾನರ ಆಧಾರ್‌ ಕಾರ್ಡ್‌ನ 12 ಸಂಖ್ಯೆ ಟೈಪಿಸಬೇಕು. ನಂತರ ಆಧಾರ್‌ ಇ-ಅಥೆಂಟಿಕೇಷನ್‌ ಕೇಳುತ್ತದೆ. ಕ್ಲಿಕ್‌ ಮಾಡಿದರೆ ಫೋನ್‌ಗೆ ಬರುವ ಓಟಿಪಿ ನಮೂದಿಸಬೇಕು. ಮುಂದಿನ ಬಾಕ್ಸ್‌ನಲ್ಲಿ ಫೋನ್‌ ಸಂಖ್ಯೆ ನಮೂದಿಸಿ ಈ ಸಂಖ್ಯೆಗೆ ಮತ್ತೊಂದು ಓಟಿಪಿ ಬರುತ್ತದೆ. ಅದನ್ನು ಟೈಪ್‌ ಮಾಡಬೇಕು. ಬಳಿಕ ಡಿಕ್ಲರೇಶನ್‌ ನೀಡಿ ವರ್ಡ್‌ ವೆರಿಫಿಕೇಷನ್‌ ಎಂದು ಕಾಣಿಸುವ 6 ಸಂಖ್ಯೆಯನ್ನು ಬಾಕ್ಸ್‌ನಲ್ಲಿ ಟೈಪ್‌ ಮಾಡಿ ಸಬ್ಮಿಟ್‌ ಮಾಡಿ. ಅರ್ಜಿ ಸಂಖ್ಯೆಯ ಜತೆ ಸ್ವೀಕೃತಿ ಪ್ರತಿಯ ಪಿಡಿಎಫ್‌ ಡೌನ್‌ ಲೋಡ್‌ ಮಾಡಿಕೊಳ್ಳಿ. ಅಲ್ಲಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯುತ್ತದೆ.