ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿನ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿರಾಡಿಘಾಟ್‌ನಲ್ಲಿ ಸುರಂಗವನ್ನೊಳಗೊಂಡ ಸಂಚಾರ ಮಾರ್ಗ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಹಾಸನ (ಜೂ.25): ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿನ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿರಾಡಿಘಾಟ್‌ನಲ್ಲಿ ಸುರಂಗವನ್ನೊಳಗೊಂಡ ಸಂಚಾರ ಮಾರ್ಗ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು. ಸಕಲೇಶಪುರ ತಾಲೂಕಿನ ದೋಣಿಗಾಲ್‌ನಲ್ಲಿ ಶನಿವಾರ ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬರುವ ಶಿರಾಡಿಘಾಟ್‌ನಲ್ಲಿ ಒಟ್ಟು 30 ಕಿಮೀ ಉದ್ದದ ಹೊಸ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. 

ಇದರಲ್ಲಿ 3.8 ಕಿಮೀ ಸುರಂಗ ಮಾರ್ಗ ಇರಲಿದೆ. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಬಳಿಕ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು. ಕೇಂದ್ರದ ಅನುಮತಿ ದೊರೆತ ನಂತರ ವಿಸ್ತೃತ ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು. ಈ ಮಾರ್ಗದಲ್ಲಿ ಬರುವ 10 ಕಿಮೀ ಉದ್ದದ ರಸ್ತೆ ಕಾಮಗಾರಿ ಅರಣ್ಯ ಸಂರಕ್ಷಣಾ ಕಾಯಿದೆ ವ್ಯಾಪ್ತಿಗೆ ಬರಲಿದೆ. ಇದಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ವ್ಯವಹರಿಸಿ, ಆನೆ ಕಾರಿಡಾರ್‌ ಸೇರಿದಂತೆ ಪ್ರಾಣಿಗಳ ಚಲನವಲನಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಯೋಜನೆ ರೂಪಿಸಿ, ಅನುಷ್ಠಾನ ಮಾಡಲಾಗುವುದು. 

ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ: ಸಾಹಿತಿಗಳ ಆತಂಕಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ

ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಲಾಗುವುದು. ಪರಿಸರಕ್ಕೆ ಪ್ರಾಮುಖ್ಯತೆ ನೀಡಿ ಅದನ್ನು ಉಳಿಸಿಕೊಂಡು ಯೋಜನೆ ಜಾರಿಗೊಳಿಸಲಾಗುವುದು ಎಂದರು. ಇದು ಬೆಂಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದ್ದು, ಕಾಮಗಾರಿಗಾಗಿ ಸಂಪೂರ್ಣವಾಗಿ ಶಿರಾಡಿಘಾಟ್‌ ರಸ್ತೆ ಬಂದ್‌ ಮಾಡಲು ಆಗುವುದಿಲ್ಲ. ಸಮಯ ಮಿತಿಯೊಳಗೆ ಏಕಮುಖ ಸಂಚಾರ ಮಾಡಿ ವಾಹನ ಓಡಾಡಲು ಅವಕಾಶ ಮಾಡಿಕೊಡಲು ಚಿಂತನೆ ಮಾಡಿದ್ದೇವೆ ಎಂದರು. ಅಧಿ​ಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ತಾಂತ್ರಿಕ ತೊಂದರೆಯಿಂದ ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿ ವಿಳಂಬವಾಗಿದೆ. ರಾಜ್ಯದಲ್ಲಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳಲ್ಲಿ ಇದೂ ಒಂದು. 2017ರಿಂದ ಕಾಮಗಾರಿ ನಡೆಯುತ್ತಿದ್ದು, ಎರಡು-ಮೂರು ವರ್ಷದ ಹಿಂದೆಯೇ ಕಾಮಗಾರಿ ಮುಗಿಯಬೇಕಿತ್ತು. 

ಡಿಸೆಂಬರ್‌ ಒಳಗೆ ಬಿಬಿಎಂಪಿ ಚುನಾವಣೆ: ಸಚಿವ ರಾಮಲಿಂಗಾರೆಡ್ಡಿ

ಮುಂದಿನ ಮಾಚ್‌ರ್‍ನೊಳಗೆ ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿ ಪೂರ್ಣಗೊಳಿಸುವಂತೆ ಅ​ಧಿಕಾರಿಗಳು, ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಹಾಸನದಿಂದ ಸಕಲೇಶಪುರ ಬೈಪಾಸ್‌ವರೆಗೆ ನವೆಂಬರ್‌ 1ರೊಳಗೆ ಕಾಮಗಾರಿ ಮುಗಿಸಬೇಕು. ಸಂಪೂರ್ಣ ಕಾಮಗಾರಿಯನ್ನು 2024ರ ಮಾಚ್‌ರ್‍ ಒಳಗೆ ಮುಕ್ತಾಯ ಮಾಡಲು ಸೂಚನೆ ನೀಡಲಾಗಿದೆ. ಮಳೆಗಾಲದಲ್ಲಿ ಭೂಕುಸಿತ ತಡೆಗೆ ಅಗತ್ಯವಿರುವ ಕಡೆ ಕಡ್ಡಾಯವಾಗಿ ತಡೆಗೋಡೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದರು. ಇದೇ ವೇಳೆ, ರಸ್ತೆ ಕಾಮಗಾರಿಯಿಂದ ಭೂಕುಸಿತ ಉಂಟಾಗಿ ಜಮೀನು ಕಳೆದುಕೊಂಡ ರೈತರ, ಭೂಮಾಲೀಕರ ಅಹವಾಲು ಆಲಿಸಿದ ಸಚಿವರು, ಅವರಿಗೆ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.