ಬೆಂಗಳೂರು(ಸೆ.03): ಹಗಲು ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸಿಲುಕಿ ಕಷ್ಟ ಅನುಭವಿಸುವುದಲ್ಲದೆ, ಮಧ್ಯರಾತ್ರಿಯಲ್ಲಿಯೂ ನಗರದ ಅನೇಕ ಭಾಗಗಳಲ್ಲಿ ಸಿಗ್ನಲ್‌ನಲ್ಲಿ ನಿಲ್ಲಬೇಕಾದ ಅನಿವಾರ್ಯತೆಗೆ ಸಿಲಿಕಾನ್‌ ಸಿಟಿಯ ವಾಹನ ಸವಾರರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ನಗರದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ ಸುಮಾರು 10 ಗಂಟೆ ತನಕ ನಗರದ ಬಹುತೇಕ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಇರುತ್ತದೆ. ಹೀಗಾಗಿ ಸಂಚಾರ ನಿಯಮ ಪಾಲಿಸಬೇಕು. ಆದರೆ ರಾತ್ರಿ 12 ಗಂಟೆ ಬಳಿಕ ಕೂಡ ಹಲವು ಜಂಕ್ಷನ್‌ಗಳ ಸಿಗ್ನಲ್‌ನಲ್ಲಿ ಒಂದು ನಿಮಿಷಗಳ ಕಾಲ ನಿಲ್ಲುವ ಸ್ಥಿತಿ ಇದೆ. ಜಂಕ್ಷನ್‌ಗಳಲ್ಲಿ ಯಾವುದೇ ವಾಹನ ಇಲ್ಲದಿದ್ದರೂ ಏಕೆ ಸಿಗ್ನಲ್‌ನಲ್ಲಿ ನಿಲ್ಲಬೇಕು ಎಂದು ವಾಹನ ಸವಾರರು ಕಿಡಿ ಕಾರಿದ್ದಾರೆ.

ಯಾವುದೇ ವಾಹನ ಇಲ್ಲದಿದ್ದರೂ ಕೆಂಪು ದೀಪ ಇದ್ದಾಗ ವಾಹನ ಚಲಾಯಿಸಿದರೆ, ಕಾದು ಕುಳಿತಿರುವ ಕ್ಯಾಮೆರಾಗಳ ಮೂಲಕ ತಡರಾತ್ರಿ ಕೂಡ ಸಂಚಾರ ನಿಯಮ ಉಲ್ಲಂಘನೆ ದಂಡ ಬೀಳುತ್ತಿದೆ. ತಡರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಇಂತಹ ದಂಡಗಳು ಬೀಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಚ್ಚು ಹಾರ್ನ್‌ ಮಾಡಿದರೆ ಹಸಿರು ಸಿಗ್ನಲ್‌ ಲೈಟ್‌ ಆನ್‌ ಆಗಲ್ಲ!

ನಗರದ ಹೃದಯ ಭಾಗದಲ್ಲಿನ ಪ್ರಮುಖ ಜಂಕ್ಷನ್‌ಗಳಲ್ಲಿನ ಸಿಗ್ನಲ್‌ಗಳು ಮಧ್ಯರಾತ್ರಿ ಇದ್ದರೂ ಪರವಾಗಿಲ್ಲ. ಆದರೆ, ಇತ್ತೀಚೆಗೆ ಹೃದಯ ಭಾಗ ಹೊರತುಪಡಿಸಿ ಇನ್ನುಳಿದ ಹಲವು ಜಂಕ್ಷನ್‌ಗಳಲ್ಲೂ ಮಧ್ಯರಾತ್ರಿ ಸಿಗ್ನಲ್‌ಗಳು ಕಾರ್ಯನಿರ್ವಹಿಸುವುದರ ಹಿಂದೆ ದಂಡ ಸಂಗ್ರಹಕ್ಕೆ ಇದನ್ನು ಮಾರ್ಗವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಅನುಮಾನ ಮೂಡತೊಡಗಿದೆ.

ದಂಡ ಕಟ್ಟಿಟ್ಟ ಬುತ್ತಿ:

ಮಧ್ಯರಾತ್ರಿಯಾದ್ರು ಅದು ಸಂಚಾರ ನಿಯಮ ಉಲ್ಲಂಘನೆ ಉಲ್ಲಂಘನೆಯೇ. ಸಾರ್ವಜನಿಕರ ಅನುಕೂಲಕ್ಕಾಗಿಯೇ ಕೆಲ ಜಂಕ್ಷನ್‌ಗಳಲ್ಲಿ 24 ಗಂಟೆ ಸಿಗ್ನಲ್‌ ಕಾರ್ಯ ನಿರ್ವಹಿಸಲಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಪ್ರಮುಖ ಜಂಕ್ಷನ್‌ಗಳಲ್ಲಿರುವ ಆರ್‌ಎಲ್‌ ವಿಡಿಯೋದಿಂದ (ರೆಡ್‌ಲೈಟ್‌ ವೈಲೆಷನ್‌ ಡಿಟಕ್ಷನ್‌) ಆಟೋ ಮ್ಯಾಟಿಕ್‌ ಆಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನದ ಸಂಖ್ಯೆಯನ್ನು ಸೆರೆ ಆಗಲಿದೆ. ಇದಕ್ಕೆ ಹಗಲು, ರಾತ್ರಿ ಎಂಬುದು ಇಲ್ಲ ಎಂದು ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ ಅನಿಲ್‌ ಗ್ರಾಮಪುರೋಹಿತ್‌ ಹೇಳಿದರು.

ಮಧ್ಯರಾತ್ರಿ ಸಿಗ್ನಲ್‌ ಯಾಕೆ?

ನಗರದ ಕೆಲವೊಂದು ಪ್ರಮುಖ ಜಂಕ್ಷನ್‌ಗಳಲ್ಲಿ ಮಾತ್ರ 24 ತಾಸು ಸಿಗ್ನಲ್‌ ಇರಲಿದೆ. ಗಣ್ಯರು, ಅತಿಗಣ್ಯರು ಓಡಾಡುವ ಜಂಕ್ಷನ್‌ ಹಾಗೂ ಅತಿ ಹೆಚ್ಚು ಅಪಘಾತ ಸಂಭವಿಸುವಂತಹ ಜಂಕ್ಷನ್‌ ಹಾಗೂ ಹೆಚ್ಚು ರಸ್ತೆಗಳು ಸಂಪರ್ಕಿಸುವ ಜಂಕ್ಷನ್‌ಗಳಲ್ಲಿ ಈ ವ್ಯವಸ್ಥೆ ಇದೆ. ಉದಾಹರಣೆಗೆ ಚಾಲುಕ್ಯ ವೃತ್ತಕ್ಕೆ ಆರು ರಸ್ತೆಗಳು ಸಂಪರ್ಕಿಸುತ್ತವೆ. ಸಿಐಡಿ ಕಚೇರಿಯಿಂದ ವೇಗವಾಗಿ ಸವಾರ ಬಂದರೆ, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ತಡರಾತ್ರಿಯಲ್ಲೂ ಸಿಗ್ನಲ್‌ ಇರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿರುವುದೇ ಹೊರತು ಇದರಿಂದ ದಂಡ ಸಂಗ್ರಹಿಸುವ ಉದ್ದೇಶವಿಲ್ಲ ಎಂದು ಹೈಗ್ರೌಂಡ್ಸ್‌ ಸಂಚಾರ ಠಾಣೆಯ ಎಎಸ್‌ಐ ಒಬ್ಬರು ಹೇಳಿದರು.

ತಡರಾತ್ರಿ ಎಲ್ಲ ಜಂಕ್ಷನ್‌ಗಳಲ್ಲಿಯೂ 60 ಸೆಕೆಂಡ್‌ ಇರುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲಾಗಿರುತ್ತದೆ. 15 ಸೆಕೆಂಡ್‌ ಹಾಗೂ 30 ಸೆಕೆಂಡ್‌ನಷ್ಟು ಅಂತರ ಇರುತ್ತದೆ. ಐದಾರು ರಸ್ತೆ ಸಂಪರ್ಕ ಸಾಧಿಸುವ ಜಂಕ್ಷನ್‌ ಆದರೆ ಅಂತಹ ಜಂಕ್ಷನ್‌ನಲ್ಲಿ 40 ಸೆಕೆಂಡ್‌ ಇರುವುದು ಅನಿವಾರ್ಯವಾಗುತ್ತದೆ ಎಂದು ವಿವರಣೆ ನೀಡಿದರು.

ತಡರಾತ್ರಿ ರಸ್ತೆಯಲ್ಲಿ ವಾಹನ ಇಲ್ಲದಿದ್ದರೂ ಒಂದು ನಿಮಿಷ ಬೇಕು. ಇದರಿಂದ ಸಂಚಾರಿ ಪೊಲೀಸರು ದಂಡ ಸಂಗ್ರಹಕ್ಕೆ ಒತ್ತು ಕೊಟ್ಟಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ, ಸಿಗ್ನಲ್‌ನಲ್ಲಿ ತಡರಾತ್ರಿ ಕಾಯುವ ಸಮಯದ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ವಾಹನ ಸವಾರ ರಾಜೇಶ್‌ ಎಂಬುವರು ಹೇಳಿದ್ದಾರೆ.  

ಪ್ರತಿಯೊಬ್ಬರು ಕಡ್ಡಾಯವಾಗಿ ನಡುರಾತ್ರಿ ಕೂಡ ಸಂಚಾರ ನಿಯಮ ಪಾಲಿಸಲೇ ಬೇಕು. ಇದು ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿರುವುದೇ ಹೊರತು ದಂಡ ವಸೂಲಿಗಾಗಿ ಅಲ್ಲ. ಅಲ್ಲದೆ, ಇದೇನು ಹೊಸತಲ್ಲ, ಹತ್ತಾರು ವರ್ಷಗಳಿಂದ ಪ್ರಮುಖ ಜಂಕ್ಷನ್‌ಗಳಲ್ಲಿ 24 ತಾಸು ಸಿಗ್ನಲ್‌ ವ್ಯವಸ್ಥೆ ಇದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.