ಮುಂಬೈ (ಫೆ. 01):  ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ವಾಹನಗಳು ನಿಂತಾಗ, ‘ಮುಂದಿರುವ ವಾಹನಗಳು ಬೇಗ ಸಾಗಲಿ’ ಎಂಬ ಉದ್ದೇಶದಿಂದ ಹಿಂದಿರುವ ವಾಹನಗಳ ಸವಾರರು ಜೋರಾಗಿ ಹಾರ್ನ್‌ ಮಾಡುವುದು ನಗರಗಳಲ್ಲಿ ಸಾಮಾನ್ಯ. ಆದರೆ ಮುಂಬೈನಲ್ಲಿ ಹೀಗೆ ಮಾಡಿದರೆ ಹುಷಾರ್‌. ಟ್ರಾಫಿಕ್‌ ಸಿಗ್ನಲ್‌ನ ಕೆಂಪು ದೀಪವು ಆಫ್‌ ಆಗಿ ಹಸಿರು ಬಣ್ಣದ ದೀಪ ಆನ್‌ ಆಗುವುದೇ ಇಲ್ಲ!

ಹೌದು. ಶಬ್ದ ತಡೆಯಲು ಇಂತಹ ವಿನೂತನ ವ್ಯವಸ್ಥೆಯನ್ನು ಮುಂಬೈ ಪೊಲೀಸರು ಅಳವಡಿಸಿದ್ದಾರೆ. ಈಗಾಗಲೇ 1 ದಿನ ಇದನ್ನು ಪ್ರಾಯೋಗಿಕವಾಗಿ ಹಲವು ಸಿಗ್ನಲ್‌ಗಳಲ್ಲಿ ಪರೀಕ್ಷಿಸಲಾಗಿದೆ.

ವಾಹನ ಮೇಲೆ ಸ್ಟಿಕ್ಕರ್ ಅಂಟಿಸಿದವರಿಗೆ ಫೈನ್, ಕೋರ್ಟ್ ಆದೇಶ ಜಾರಿಗೊಳಿಸಿದ ಪೊಲೀಸ್!

ಹಲವು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ‘ಡೆಸಿಬಲ್‌ ಮೀಟರ್‌’ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಸಿಗ್ನಲ್‌ ದೀಪಕ್ಕೆ ಸಂಯೋಜಿಸಲಾಗಿದೆ. ಇಲ್ಲಿ ವಾಹನಗಳ ಹಾರ್ನ್‌ ಶಬ್ದ 85 ಡೆಸಿಬಲ್‌ಗಿಂತ ಹೆಚ್ಚಾದಲ್ಲಿ ಆ ಬದಿಯ ಟ್ರಾಫಿಕ್‌ ಸಿಗ್ನಲ್‌ನ ಹಸಿರು ದೀಪವು ಆನ್‌ ಆಗುವುದೇ ಇಲ್ಲ. ಹಾರ್ನ್‌ ಶಬ್ದವು 85 ಡೆಸಿಬಲ್‌ಗಿಂತ ಕಮ್ಮಿ ಆದಲ್ಲಿ ಮಾತ್ರ ಹಸಿರು ಲೈಟ್‌ ಆನ್‌ ಆಗುತ್ತದೆ.

ಸಿಎಸ್‌ಎಂಟಿ, ಮರೈನ್‌ ಡ್ರೈವ್‌, ಪೆದ್ದಾರ್‌ ರೋಡ್‌, ಹಿಂದ್‌ಮಾತಾ ಹಾಗೂ ಬಾಂದ್ರಾದಲ್ಲಿ ಪೊಲೀಸರು ಈಗ ಈ ತಂತ್ರಜ್ಞಾನ ಅಳವಡಿಸಿದ್ದಾರೆ.

ಹಾವೇರಿ To ಹುಬ್ಬಳ್ಳಿ ಜೀರೋ ಟ್ರಾಫಿಕ್‌: ಪುಟ್ಟ ಕಂದಮ್ಮನ ಪ್ರಾಣ ಉಳಿಸಿದ ಪೊಲೀಸರು

ಪ್ರಾಯೋಗಿಕವಾಗಿ ಇದರ ಪರೀಕ್ಷೆ ನಡೆದ ದಿನ ಹಲವು ಸಿಗ್ನಲ್‌ಗಳಲ್ಲಿ ಕೆಂಪು ದೀಪ ಹಸಿರಾಗಿ ಪರಿವರ್ತನೆ ಆಗದೇ ವಾಹನ ಸವಾರರು ಪರದಾಡಿದರು. ಆಗ ಒಬ್ಬರಿಗೊಬ್ಬರು ಸವಾರರು, ‘ಹಾರ್ನ್‌ ಜೋರಾಗಿ ಹಾಕಬೇಡಿ. ಸಿಗ್ನಲ್‌ ದೀಪ ಆನ್‌ ಆಗಲ್ಲ’ ಎಂದು ಒಬ್ಬರಿಗೊಬ್ಬರು ಒತ್ತಾಯಿಸುತ್ತಿರುವುದು ಕಂಡುಬಂತು.