ಬೆಂಗಳೂರು(ಆ.01): ಹೊಟ್ಟೆ ನೋವಿನಿಂದ ದಾಖಲಾದ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದ ಖಾಸಗಿ ಆಸ್ಪತ್ರೆಯೊಂದು ಇದ್ದಕ್ಕಿದ್ದಂತೆ ರೋಗಿ ಕೊರೋನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ಹೇಳಿದ ಪರಿಣಾಮ ಮೃತರ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಬನಶಂಕರಿಯ ಸಾಗರ್‌ ಆಸ್ಪತ್ರೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಜೊತೆಗೆ ಆಸ್ಪತ್ರೆಯವರು ಕೊನೆಗೆ 6 ಲಕ್ಷ ಬಿಲ್‌ ಪಾವತಿಸುವಂತೆ ಮೃತರ ಕಡೆಯವರಿಗೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತ ರೋಗಿಯ ಕುಟುಂಬದವರು ಮತ್ತು ಸಂಬಂಧಿಕರು ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಫಲಿಸಲಿಲ್ಲ ಪ್ರಾರ್ಥನೆ; ಕೊರೋನಾ ದೃಢಪಟ್ಟ ಮೊದಲ ನಾಯಿಗೆ ದಯಾಮರಣ!

ಕಳೆದ ಹತ್ತು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 40 ವರ್ಷದ ವ್ಯಕ್ತಿಯನ್ನು ಕುಟುಂಬದವರು ಚಿಕಿತ್ಸೆಗಾಗಿ ಸಾಗರ್‌ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ವೈದ್ಯರು ರೋಗಿಯ ಹೊಟ್ಟೆಯಲ್ಲಿ ಕೀವು ತುಂಬಿದೆ ಎಂದು ಹೇಳಿ ಎರಡು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಶಸ್ತ ಚಿಕಿತ್ಸೆ ಯಶಸ್ವಿಯಾಗಿದ್ದು ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ರೋಗಿಗೆ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಒಟ್ಟು 6 ಲಕ್ಷ ಬಿಲ್‌ ಆಗಿದೆ. ಬಾಕಿ ಬಿಲ್‌ ಪಾವತಿಸಿ ಮೃತದೇಹವನ್ನು ಪಡೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಪ್ರತಿಭಟನೆ ನಡೆಸಿದ ರೋಗಿಯ ಕಡೆಯವರು ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಹೊಟ್ಟೆ ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಹೇಳಿ ದಾಖಲಿಸಿಕೊಂಡು 4 ಲಕ್ಷ ಪಡೆದಿದ್ದ ಆಸ್ಪತ್ರೆಯವರು ಬಳಿಕ ಈಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗದೆ ಮೃತಪಟ್ಟ ಬಳಿಕ ಕೋವಿಡ್‌ ಪಾಸಿಟಿವ್‌ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಇನ್ನೂ 2 ಲಕ್ಷ ಬಿಲ್‌ ಬಾಕಿ ಇದ್ದು ಪಾವತಿಸಿ ಮೃತದೇಹ ಪಡೆಯಲು ಹೇಳುತ್ತಿದ್ದಾರೆ. ಇದು ಖಂಡನೀಯ ಎಂದು ಮೃತರ ಸ್ನೇಹಿತ ವೆಂಕಟೇಶ್‌ ಅವರು ತಿಳಿಸಿದ್ದಾರೆ.