Asianet Suvarna News Asianet Suvarna News

ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯಕ್ಕೆ ಸುಗ್ರೀವಾಜ್ಞೆ; ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಗೆ ತಿದ್ದುಪಡಿ ಏನು?

ರಾಜ್ಯಾದ್ಯಂತ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳ ಮೇಲ್ಭಾಗದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಹಾಗೂ ಜಾಹೀರಾತು, ಸೂಚನಾ ಫಲಕಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆಯನ್ನು’ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

Ordinance to make 60% Kannada mandatory in all name plates at Bengaluru rav
Author
First Published Jan 6, 2024, 5:33 AM IST

ಬೆಂಗಳೂರು (ಜ.6) : ರಾಜ್ಯಾದ್ಯಂತ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳ ಮೇಲ್ಭಾಗದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಹಾಗೂ ಜಾಹೀರಾತು, ಸೂಚನಾ ಫಲಕಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆಯನ್ನು’ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇತ್ತೀಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಗ್ರೀವಾಜ್ಞೆ ಮೂಲಕ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಜಾರಿ ಮಾಡುವುದಾಗಿ ತಿಳಿಸಿದ್ದರು. 

ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ದೊಡ್ಡ ಕನ್ನಡ ನಾಮಫಲಕ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು!

ಅಲ್ಲದೆ, ಸುಗ್ರೀವಾಜ್ಞೆ ಮೂಲಕ ಜಾರಿಯಾಗಲಿರುವ ತಿದ್ದುಪಡಿ ಕಾನೂನು ಅನ್ವಯ 2024ರ ಫೆಬ್ರುವರಿ 28ರ ಒಳಗಾಗಿ ರಾಜ್ಯದಲ್ಲಿನ ಎಲ್ಲಾ ‘ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನರಂಜನಾ ಕೇಂದ್ರ ಮತ್ತು ಹೋಟೆಲ್‌’ ಮುಂತಾದವುಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು. ಉಳಿದ ಶೇ.40ರಷ್ಟು ಜಾಗದಲ್ಲಿ ಮಾತ್ರ ಇತರೆ ಭಾಷೆ ಇರಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ಇದರಂತೆ ಶುಕ್ರವಾರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ನಿರ್ಧರಿಸಲಾಗಿದೆ. ನಿರ್ಧಾರಕ್ಕೆ ರಾಜ್ಯಪಾಲರ ಅನುಮೋದನೆ ಬಿದ್ದ ತಕ್ಷಣದಿಂದ ತಿದ್ದುಪಡಿ ನಿಯಮ ಜಾರಿಯಾಗಲಿದೆ.

ಏನಿದು ತಿದ್ದುಪಡಿ?:

2023ರ ಮಾರ್ಚ್‌ ತಿಂಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ 2022ರ ಸೆಕ್ಷನ್‌ 17 (6) ರಲ್ಲಿ ನಾಮಫಲಕಗಳಲ್ಲಿನ ಅರ್ಧ ಭಾಗವು (ಶೇ.50) ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಲಾಗಿತ್ತು. ಇದೀಗ ನಿಯಮಕ್ಕೆ ತಿದ್ದುಪಡಿ ತಂದು ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಲಾಗಿದೆ.

ಇನ್ನು ಈ ಕಾಯ್ದೆಯ ನಿಯಮ 17(8) ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲ್ಲಿನ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.

 

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರಿಗೆ ಇನ್ನೂ 4 ದಿನ ಜೈಲೇ ಗತಿ: ಇಲ್ಲಿದೆ ಅಸಲಿ ಕಾರಣ!

ರಾಜ್ಯಾದ್ಯಂತ ಅನ್ವಯ:

ಈ ನಾಮಫಲಕ, ಜಾಹಿರಾತು ಹಾಗೂ ಸೂಚನಾಫಲಕದ ನಿಯಮ ರಾಜ್ಯಾದ್ಯಂತ ಎಲ್ಲಾ ನಗರ ಪಾಲಿಕೆಗಳು ಹಾಗೂ ಜಿಲ್ಲಾಡಳಿತಗಳ ವ್ಯಾಪ್ತಿಗೂ ಅನ್ವಯವಾಗಲಿವೆ.

ತಿದ್ದುಪಡಿ ಏನು?

* ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6) ಪ್ರಕಾರ ಶೇ.50ರಷ್ಟಿದ್ದ ಕನ್ನಡ ಬಳಕೆ ಶೇ.60ರಷ್ಟು ಮಾಡಲಾಗಿದೆ.

* ಸೆಕ್ಷನ್‌ 7(2)ಗೆ ತಿದ್ದುಪಡಿ ಮಾಡಿ ರಾಜ್ಯ ಮಟ್ಟದ ಸಮಿತಿಗೆ ಸಂಚಾಲಕರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಸದಸ್ಯರಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯನ್ನು ಸಂಚಾಲಕರನ್ನಾಗಿ ನೇಮಿಸಲು ತಿದ್ದುಪಡಿ ಮಾಡಲಾಗಿದೆ.

* ಕನ್ನಡ ಬರಹವು ನಾಮಫಲಕದ ಮೇಲ್ಭಾಗದಲ್ಲೇ ಇರಬೇಕು.

Follow Us:
Download App:
  • android
  • ios