ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಮೂಲಕ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಶಿವರಾಜ್ ಕುಮಾರ್, ಸಿ.ಟಿ. ರವಿ ಮತ್ತು ಯದುವೀರ್ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ. ಈ ದಾಳಿಯಲ್ಲಿ ಕ್ಷಿಪಣಿ ಮತ್ತು ಬಾಂಬ್‌ಗಳನ್ನು ಬಳಸಿ ೨೧ ಉಗ್ರರನ್ನು ಗುರಿಯಾಗಿಸಲಾಗಿದೆ.

ಬೆಂಗಳೂರು (ಮೇ 07): ಪೆಹಲ್ಗಾಮ್ ದಾಳಿಯಿಂದ ಕನ್ನಡಿಗರು ಸೇರಿದಂತೆ 26 ಜನರು ಉಗ್ರರ ದಾಳಿಗೆ ಹುತಾತ್ಮರಾದಾಗ ರಕ್ತ ಕುದಿಯುತ್ತಿತ್ತು. ಇದೀಗ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಮೂಲಕ ಕೇಂದ್ರ ಸರಿಯಾದ ಕ್ರಮ ಕೈಗೊಂಡಿದೆ ಎಂದು ನಟ ಶಿವ ರಾಜ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೀತಾ ಪಿಕ್ಚರ್ಸ್ ಸಂಸ್ಥೆಯ ಪಬ್ಬಾರ್ ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವ ರಾಜ್‌ಕುಮಾರ್ ಅವರು, ಆಪರೇಷನ್ ಸಿಂಧೂರ್ ಮೂಲಕ ಕೇಂದ್ರ ಸರಿಯಾದ ಕ್ರಮ ಕೈಗೊಂಡಿದೆ. ಪೆಹಲ್ಗಾಮ್‌​ನಲ್ಲಿ ನಡೆದ ಘಟನೆ ನೋಡಿದಾಗ ಎಂಥವರಿಗೂ ರಕ್ತಕುದಿಯುತ್ತದೆ. ಯಾರಿಗಾದರೂ ಅದು ಅನ್ಯಾಯ. ಮನುಷ್ಯನ ಜೀವ ತೆಗೆಯೋದು ಅಷ್ಟು ಈಸಿಯಲ್ಲ. ಪ್ರಾಣ ಅನ್ನೋದೇ ಒಂದು ಗಿಫ್ಟ್. ಅದನ್ನ ಯಾರೋ ಹೊಡೆದರೆ ಹೇಗಿರುತ್ತೆ.? ಏನೇ ಮಾಡಿದರೂ ಕೇಂದ್ರ ಸರ್ಕಾರ ಸರ್ಕಾರ ಕರೆಕ್ಟಾಗಿ ಮಾಡಿದ್ದಾರೆ ಅನ್ನೋ ಭರವಸೆ ಇದೆ ಎಂದು ಹೇಳಿದರು.

ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು, ಇವತ್ತು ನಮಗೆ ಎರಡನೇ ದೀಪಾವಳಿ. ಭಾರತೀಯರ ಸಿಂಧೂರಕ್ಕೆ ಕೈ ಹಾಕಿದ್ದಕ್ಕೆ ಇದು ತಕ್ಕ ಪ್ರತೀಕಾರ. ಮೋದಿ ಕೊಟ್ಟ ಮಾತು ತಪ್ಪೋದಿಲ್ಲ ಅಂತ ನಂಬಿಕೆ ಇತ್ತು. ಭಾರತೀಯ ಸೇನೆ ಮೇಲೂ ಅಪಾರದ ನಂಬಿಕೆ ಇತ್ತು. 1971ರಲ್ಲಿ ಯುದ್ಧ ಗೆದ್ವಿ, ಆದರೆ ಸಂಧಾನದಲ್ಲಿ ಸೋತ್ವಿ. ಭಾರತಮಾತೆ, ಸಹೋದರಿ ಸಿಂಧೂರ ಅಳಿಸಲು ಬಂದವರ ಅಳಿಸಿದ್ದೇವೆ. ಸಿಂಧೂರ ಅನ್ನೋ ಹೆಸರಿಗೆ ಮೋದಿ ಹಾಗೂ ಭಾರತೀಯ ಸೇನೆ ಬೆಲೆ ತಂದುಕೊಟ್ಟಿದ್ದಾರೆ. ಭಾರತದ ಶತ್ರುಗಳನ್ನ ಪೂರ್ಣ ನಿರ್ನಾಮ ಮಾಡಿ, ನಿಮ್ಮ ಜೊತೆ ನಾವಿದ್ದೇವೆ. ಒಂದು ಸಲ ಅವರನ್ನು ಸಂಪೂರ್ಣವಾಗಿ ಮುಗಿಸಿಬೇಕು ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಟ್ವೀಟ್ ಬಗ್ಗೆ ಮಾತನಾಡಿದ ಸಿ.ಟಿ. ರವಿ ಅವರು, ನಾಗರೀಕರ ನಡುವೆ ಶಾಂತಿ ಇರಬೇಕು, ಶತ್ರುಗಳನ್ನು ಮಟ್ಟ ಹಾಕುವುದು ಶಾಂತಿಯೇ, ಶ್ವಾಶತ ಶಾಂತಿಗೆ ಕಾರಣವಾಗುತ್ತದೆ. ರಾಜ್ಯ ಕಾಂಗ್ರೆಸ್ಸಿಗೆ ನಾನು ಕೂಡ ಟ್ವೀಟ್ ಮಾಡಿದ್ದೆ, ರಾಜ್ಯ ಕಾಂಗ್ರೆಸ್ ಟ್ಬೀಟ್ ಡಿಲೀಟ್ ಮಾಡಿರುವುದನ್ನು ನೋಡಿದ್ದೇನೆ. ಇದು ಬದಲಾಗಿರುವ ಕಾಂಗ್ರೆಸ್ ಮನಸ್ಥಿತಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಯೋಗ್ಯತೆಯನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಮೇಲೆ ಜನರಿಗೆ ಅಪನಂಬಿಕೆ, ಜಿಗುಪ್ಸೆಯನ್ನು ಮೂಡಿಸುತ್ತಿದೆ ಎಂದು ತಿಳಿಸಿದರು.

ಸಂಸದ ಯದುವೀರ್ ಅವರು ಮಾತನಾಡಿ, ಗಾಂಧೀಜಿಯವರ ಶಾಂತಿಯ ಮಂತ್ರವನ್ನ ಕಾಂಗ್ರೆಸ್ ಈಗ ದುರಪಯೋಗಪಡಿಸಿಕೊಳ್ಳುತ್ತಿದೆ. ಶಾಂತಿಗು ಒಂದು ಲಿಮಿಟ್ ಇರುತ್ತದೆ. ಎಷ್ಟು ದಿನ ಶಾಂತಿಯಿಂದ ಇರಲು ಸಾಧ್ಯ. ಪೆಹಲ್ಗಾಮ್ ಘಟನೆಯನ್ನ ಎಲ್ಲರೂ ಕಣ್ಣಾರೆ ಕಂಡಿದ್ದಾರೆ. ದೇಶ ಇಂತಹ ಪ್ರತ್ಯುತ್ರರಕ್ಕಾಗಿ ಕಾಯುತ್ತಿತ್ತು. ಉತ್ತಮವಾದ ಪ್ರತ್ಯುತ್ತರವನ್ನ ಕೊಟ್ಟಿದೆ. ಪಾಕಿಸ್ತಾನ ಯಾವಗಲೂ ಭಯೋತ್ಪಾದಕರನ್ನ ತನ್ನ ಯಂತ್ರವಾಗಿ ಬಳಿಸಿಕೊಂಡಿದೆ. ಮೊದಲ ನಿಂದಲೂ ಪಾಕಿಸ್ತಾನಕ್ಕೆ ಇದು ಚಾಳಿ. ಈಗ ಅಂತಹ ಪಾಕಿಸ್ತಾನಕ್ಕೆ ಭಾರತದ ಸೈನಿಕರು ಸರಿಯಾದ ಉತ್ತರ ನೀಡಿದ್ದಾರೆ. ಸಮಯ ಬಂದಾಗಲೆಲ್ಲಾ ಇ‌ನ್ನೂ ಇಂತಹ ಉತ್ತರಗಳು ಮುಂದುವರೆಯುತ್ತದೆ ಎಂದರು.

ಘಟನೆಯ ಹಿನ್ನೆಲೆಯೇನು? 

ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ಮೇ 6ರ ಮಧ್ಯರಾತ್ರಿ 1.44ರ ವೇಳೆಗೆ 'ಆಪರೇಷನ್ ಸಿಂಧೂರ್' ಎಂಬ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಒಟ್ಟು 9 ಉಗ್ರ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಿತು. ಈ ದಾಳಿಯಲ್ಲಿ SCALP ಕ್ಷಿಪಣಿ, HAMMER ಬಾಂಬ್‌ಗಳು ಮತ್ತು ಡ್ರೋನ್‌ ಆಧಾರಿತ ಲೋಟರಿಂಗ್ ಮ್ಯೂನಿಷನ್‌ಗಳನ್ನು ಬಳಸಲಾಗಿತ್ತು. ಈ ಮೂಲಕ 21 ಉಗ್ರರ ಸ್ಥಳಗಳ ಮೇಲೆ ದಾಳಿಯನ್ನು ಮಾಡಿದೆ. ಆದರೆ, ಇದಕ್ಕೆ ಪಾಕಿಸ್ತಾನ ಮಾತ್ರ ಸೈನಿಕ ಶಿಬಿರಗಳ ಮೇಲೆ ದಾಳಿ ಮಾಡಿದೆ ಎಂದು ಹೇಳಿಕೊಂಡಿದೆ.