Covid 19 Spike: 1% ಸೋಂಕಿತರಷ್ಟೇ ಆಸ್ಪತ್ರೆಗೆ ದಾಖಲು: ಸಾವಿನ ಸಂಖ್ಯೆ ಕಡಿಮೆ
*2 ಲಕ್ಷ ಸಕ್ರಿಯ ಸೋಂಕಿತರಲ್ಲಿ 141 ಮಂದಿ ಮಾತ್ರ ಗಂಭೀರ
*99% ಸೋಂಕಿತರಿಗೆ ಮನೆಯಲ್ಲಿ ಆರೈಕೆ
*ಸೋಂಕಿತರ ಸಾವು ಸರಾಸರಿ 10ಕ್ಕಿಂತ ಕಡಿಮೆ
ಬೆಂಗಳೂರು (ಜ. 17): ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಸಕ್ರಿಯ ಸೋಂಕಿತರ ಸಂಖ್ಯೆ ಎರಡು ಲಕ್ಷದ ಆಸುಪಾಸಿಗೆ ಏರಿಕೆಯಾಗಿದ್ದರೂ ಈ ಪೈಕಿ 141 ಸೋಂಕಿತರ ಆರೋಗ್ಯ ಸ್ಥಿತಿ ಮಾತ್ರ ಗಂಭೀರವಾಗಿದೆ, ಇನ್ನು ಸೋಂಕಿತರ ಪೈಕಿ ಶೇ.1ರಷ್ಟುಆಸ್ಪತ್ರೆಯಲ್ಲಿದ್ದು, ಶೇ.99 ರಷ್ಟುಮಂದಿ ಮನೆಯ ಆರೈಕೆಯಲ್ಲಿದ್ದಾರೆ. ಮೂರನೇ ಅಲೆಯಲ್ಲಿ (3rd Wave) ಸೋಂಕು ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ತಗುಲುತ್ತದೆ. ಆದರೆ, ದೇಹಕ್ಕೆ ಹಾನಿ ಪ್ರಮಾಣ ಸಾಕಷ್ಟುಕಡಿಮೆ ಇರುತ್ತದೆ ಎಂದು ಆರೋಗ್ಯ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹಾಗೂ ವೈರಾಣು ತಜ್ಞರು ಹೇಳಿದ್ದರು.
ಸದ್ಯ ರಾಜ್ಯದ ಅಂಕಿ- ಅಂಶಗಳು ಇದ್ದಕ್ಕೆ ಪೂರಕ ಪೂರಕವಾಗಿದ್ದು, ಸೋಂಕಿನ ಹೊಸ ಪ್ರಕರಣಗಳು 2-3 ದಿನಕ್ಕೆ ದುಪ್ಪಟ್ಟಾಗುತ್ತಿವೆ. ಜ.1ರಂದು 1000ದ ಆಸುಪಾಸಿನಲ್ಲಿದ್ದ ಸೋಂಕು ಪ್ರಕರಣಗಳು, ಸದ್ಯ 30 ಸಾವಿರಕ್ಕಿಂತ ಹೆಚ್ಚು ವರದಿಯಾಗುತ್ತಿವೆ. ಅಲ್ಲದೆ, ಪಾಸಿಟಿವಿಟಿ ದರ ಶೇ.1 ರಿಂದ ಶೇ.20ಕ್ಕೆ ಹೆಚ್ಚಳವಾಗಿದೆ. ಅಂದರೆ, ಸೋಂಕು ಪರೀಕ್ಷೆಗೊಳಗಾಗುತ್ತಿರುವವರ ಪೈಕಿ ಪ್ರತಿ 100 ಮಂದಿಯಲ್ಲಿ 20 ಮಂದಿಗೆ ಸೋಂಕು ದೃಢಪಡುತ್ತಿದೆ. ಹೀಗಾಗಿ, ಸಕ್ರಿಯ ಸೋಂಕಿತರ ಸಂಖ್ಯೆ ನಿತ್ಯ ಏರಿಕೆಯಾಗುತ್ತಾ ಸಾಗಿ 1,97,984ಕ್ಕೆ ಹೆಚ್ಚಳವಾಗಿದೆ. ಆದರೆ, ಈ ಪೈಕಿ 1,831 ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 141 ಮಂದಿ ಮಾತ್ರ ಗಂಭೀರ ಅನಾರೋಗ್ಯದಿಂದ ತುರ್ತು ನಿಗಾ ಘಟಕದಲ್ಲಿದ್ದಾರೆ.
ಇದನ್ನೂ ಓದಿ: 231 ದಿನ ಬಳಿಕ ರಾಜ್ಯದಲ್ಲಿ 34047 ಕೋವಿಡ್ ಕೇಸ್
99% ಸೋಂಕಿತರಿಗೆ ಮನೆಯಲ್ಲಿ ಆರೈಕೆ: ಮೊದಲ ಎರಡು ಕೊರೋನಾ ಅಲೆಗೆ ಹೋಲಿಸಿದರೆ ಸೋಂಕಿನ ಲಕ್ಷಣಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ ಸದ್ಯ1.96 ಲಕ್ಷ ಸೋಂಕಿತರು (ಶೇ.99) ಮನೆ ಆರೈಕೆಯಲ್ಲಿದ್ದಾರೆ. ಪಾಸಿಟಿವ್ ವರದಿ ಬಂದ ಕೂಡಲೇ ಆರೋಗ್ಯ ಸಿಬ್ಬಂದಿ ಅಗತ್ಯ ವೈದ್ಯಕೀಯ ಪರಿಕರ (ಮಾತ್ರೆ, ಮಾಸ್ಕ್ ಹಾಗೂ ಸ್ಯಾನಿಟೈಸರ್) ನೀಡುತ್ತಾರೆ. ಏಳು ದಿನ ಹೋಂ ಐಸೋಲೇಷನ್ ಇರುತ್ತಾರೆ. ಆ ಬಳಿಕ ಗುಣಮುಖ ಎಂದು ನಿರ್ಧರಿಸಲಾಗುತ್ತಿದೆ.
ಸಾವಿನ ಸಂಖ್ಯೆ ಕಡಿಮೆ: ಎರಡನೇ ಅಲೆಯಲ್ಲಿ (2021 ಏಪ್ರಿಲ್) ಸೋಂಕಿನ ಹೊಸ ಪ್ರಕರಣಗಳು 10 ಸಾವಿರ ಗಡಿದಾಟುತ್ತಿದ್ದಂತೆ ಸಾವಿನ ಸಂಖ್ಯೆಯು 100 ಗಡಿದಾಟಿತ್ತು. 30 ಸಾವಿರಕ್ಕೆ ಹೆಚ್ಚಿದಾಗ ನಿತ್ಯ 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರೂ. ಆದರೆ, ಕಳೆದ 10 ದಿನಗಳ ಹಿಂದೆಯೇ ಸೋಂಕು ಪ್ರಕರಣಗಳು 10 ಸಾವಿರಕ್ಕೂ ಹೆಚ್ಚಳವಾಗಿದ್ದು, 30 ಸಾವಿರಕ್ಕೆ ತಲುಪಿದೆ. ಆದರೆ, ಈ ಅವಧಿಯಲ್ಲಿ ಸೋಂಕಿತರ ಸಾವು ಸರಾಸರಿ 10ಕ್ಕಿಂತ ಕಡಿಮೆ ಇದೆ. ಇನ್ನು ಎರಡನೇ ಅಲೆಯಲ್ಲಿ ಆಸ್ಪತ್ರೆ ದಾಖಲಾತಿಯು ಕೂಡಾ ಸಕ್ರಿಯ ಪ್ರಕರಣಗಳಲ್ಲಿ ಶೇ.10 ಇತ್ತು ಆದರೆ, ಈ ಬಾರಿ ಶೇ.1ರಷ್ಟಿದೆ.
ಇದನ್ನೂ ಓದಿ: Weekend Curfew ರಾಜ್ಯಾದ್ಯಂತ ಯಶಸ್ವಿ: ಮಾಂಸದಂಗಡಿ ಬಿಟ್ಟು ಉಳಿದೆಡೆ ಜನ ಸಂಚಾರ ವಿರಳ!
ಅಂಕಿ -ಅಂಶ (ಜ.15ಕ್ಕೆ)
ಚಿಕಿತ್ಸೆ/ಹಾಸಿಗೆ ವಿಧ- ಸೋಂಕಿತರು
ಸಾಮಾನ್ಯ ಹಾಸಿಗೆ: 1134
ಆಕ್ಸಿಜನ್: 546
ಐಸಿಯು: 114
ಐಸಿಯು ವೆಂಟೀಲೆಟರ್: 37
231 ದಿನ ಬಳಿಕ ರಾಜ್ಯದಲ್ಲಿ 34047 ಕೋವಿಡ್ ಕೇಸ್
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು (Covid Cases) ವೇಗದಲ್ಲಿ ಹರಡುತ್ತಿದ್ದು ಶುಕ್ರವಾರ 34,047 ಹೊಸ ಪ್ರಕರಣಗಳು ದಾಖಲಾಗಿದೆ. ಇದು ಕಳೆದ 231 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಲಕ್ಷದ ಸಮೀಪಕ್ಕೆ ಬಂದಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.19.29ಕ್ಕೆ ಏರಿದೆ. 13 ಮಂದಿ ಮೃತರಾಗಿದ್ದಾರೆ. 5,902 ಮಂದಿ ಚೇತರಿಸಿಕೊಂಡಿದ್ದಾರೆ.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 2356 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಈ ಪೈಕಿ 49 ಮಂದಿ ಐಸಿಯು ವೆಂಟಿಲೇಟರ್ ಹಾಸಿಗೆಯಲ್ಲಿದ್ದಾರೆ. 145 ಮಂದಿ ಐಸಿಯು, 829 ಮಂದಿ ಎಚ್‌ಡಿಯು, 1,333 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಚೇತರಿಸಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆ ಆಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1.97 ಲಕ್ಷಕ್ಕೆ ಏರಿದೆ.
- ಜಯಪ್ರಕಾಶ್ ಬಿರಾದಾರ್, ಕನ್ನಡಪ್ರಭ ವಾರ್ತೆ