*ಮಾಂಸದಂಗಡಿ ಬಿಟ್ಟು ಉಳಿದೆಡೆ ಜನ ಸಂಚಾರ ವಿರಳ*ಇಂದು ಬೆಳಗ್ಗೆ ವಾರಾಂತ್ಯ ನಿರ್ಬಂಧ ಅಂತ್ಯ, ಎಂದಿನಂತೆ ವಹಿವಾಟು*ದಂಡದ ಬಿಸಿ ಮುಟ್ಟಿಸಿದ್ದರ ಫಲ ಭಾನುವಾರದ ಕರ್ಫ್ಯೂ ಬಹುತೇಕ ಯಶಸ್ವಿ

ಬೆಂಗಳೂರು (ಜ. 17): ಕೊರೋನಾ 3ನೇ ಅಲೆ ನಿಯಂತ್ರಿಸುವ ಸಲುವಾಗಿ ಸರ್ಕಾರ ಘೋಷಿಸಿರುವ ವಾರಾಂತ್ಯ ಕರ್ಫ್ಯೂಗೆ (Weekend Curfew) ಭಾನುವಾರದಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ (Karnataka) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಜನಸಂಚಾರ ಕಡಿಮೆಯಾಗಿತ್ತು. ಭಾನುವಾರದ ಬಾಡೂಟಕ್ಕೆ ಮಾಂಸದ ಮಾರುಕಟ್ಟೆಗಳಲ್ಲಿ ಜನಸಂದಣಿಯಾಗಿದ್ದು ಬಿಟ್ಟರೆ ಬೇರೆಲ್ಲೂ ದೊಡ್ಡ ಮಟ್ಟದ ಜನಸಂಚಾರ ಕಂಡುಬಂದಿಲ್ಲ. ಮಾತ್ರವಲ್ಲದೆ ಶುಕ್ರವಾರ ರಾತ್ರಿಯಿಂದಲೇ ಅನಾವಶ್ಯಕವಾಗಿ ರಸ್ತೆಗಿಳಿದವರಿಗೆ ಪೊಲೀಸರು ಎಚ್ಚರಿಕೆ, ದಂಡದ ಬಿಸಿ ಮುಟ್ಟಿಸಿದ್ದರ ಫಲ ಭಾನುವಾರದ ಕರ್ಫ್ಯೂ ಬಹುತೇಕ ಯಶಸ್ವಿಯಾಗಿದೆ. ಸೋಮವಾರ ಬೆಳಗ್ಗೆ ಕರ್ಫ್ಯೂ ಅಂತ್ಯವಾಗಲಿದ್ದು, ಎಂದಿನಂತೆ ವಹಿವಾಟು ನಡೆಯಲಿದೆ.

ಮಾಂಸ ಖರೀದಿ ಭರಾಟೆ ಜೋರು: ಕೊರೋನಾ ಸೋಂಕಿನ ಭೀತಿಯ ಈ ನಡುವೆಯೂ ಬೆಂಗಳೂರು, ಮಂಡ್ಯ, ಹಾಸನ, ಹುಬ್ಬಳ್ಳಿ, ಧಾರವಾಡ, ಕಾರವಾರ, ಬಳ್ಳಾರಿ, ಶಿವಮೊಗ್ಗ, ಬಾಗಲಕೋಟೆ ನಗರಗಳಲ್ಲಿ ಮೀನು, ಮಾಂಸದಂಗಡಿಗಳ ಮುಂದೆ ಭಾನುವಾರ ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲ ಕಡೆ ಸಾಮಾಜಿಕ ಅಂತರ ಮಾಯವಾಗಿದ್ದು ಕೊರೋನಾ ನಿಯಮಾವಳಿಯೂ ಪಾಲನೆಯಾಗಲಿಲ್ಲ.

ಇದನ್ನೂ ಓದಿ:Covid Curfew: ಸರ್ಕಾರದ ವಿರುದ್ಧ ದಂಗೆಯೇಳಲು ಸಜ್ಜಾಗಿದೆ ಉದ್ಯಮ ಜಗತ್ತು!

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಬಳ್ಳಾರಿ, ಕೊಪ್ಪಳ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಅನೇಕ ನಗರ, ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಬೇಕರಿ, ಹೋಟೆಲ್‌ಗಳು ರಾತ್ರಿವರೆಗೆ ತೆರೆದು ವ್ಯಾಪಾರ ನಡೆಸಿದರೆ, ಸಣ್ಣಪುಟ್ಟದರ್ಶಿನಿ, ಹೋಟೆಲ್‌ಗಳು ಮಧ್ಯಾಹ್ನದವರೆಗೆ ಮಾತ್ರ ಗ್ರಾಹಕರಿಗೆ ಪಾರ್ಸೆಲ್‌ ಸೇವೆ ಒದಗಿಸಿದವು. ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲದೆ, ದೈನಂದಿನ ಪೂಜೆಗಳು ನೆರವೇರಿದವು.

ಇನ್ನು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಬಹುತೇಕ ನಗರಗಳಲ್ಲಿ ಕೆಎಸ್‌ಆರ್‌ಟಿಸಿ, ನಗರ ಸಾರಿಗೆ, ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಗಿಂತ ಬಸ್‌ಗಳ ಸಂಖ್ಯೆಯೇ ಹೆಚ್ಚಿತ್ತು. ತುರ್ತು ಹಾಗೂ ಅಗತ್ಯ ಸೇವೆಯ ಸಿಬ್ಬಂದಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಬಸ್‌ಗಳು ಹಾಗೂ ಬಸ್‌ ನಿಲ್ದಾಣಗಳು ಪ್ರಯಾಣಿಕರು ಇಲ್ಲದೆ ಖಾಲಿ ಹೊಡೆದೆವು. ಆಗೊಮ್ಮೆ ಈಗೊಮ್ಮೆ ಒಂದೊಂದು ಬಸ್‌ ಸಂಚರಿಸಿದರೂ ಬಹುತೇಕ ಆಸನಗಳು ಖಾಲಿ ಇದ್ದವು. ಕೆಲವೆಡೆ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡಿದ ಪ್ರಸಂಗಗಳೂ ನಡೆದವು.

ಇದನ್ನೂ ಓದಿ: MP Renukacharya ಮತ್ತೆ ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ರೇಣುಕಾಚಾರ್ಯ, ಹೇಳೋರಿಲ್ವಾ?

ತರಕಾರಿ ರಸ್ತೆಗೆ ಚೆಲ್ಲಿ ರೈತ ಪ್ರತಿಭಟನೆ: ವಿಜಯಪುರದಲ್ಲಿ ವೀಕೆಂಡ್‌ ಕರ್ಫ್ಯೂ ಹಿನ್ನೆಲೆ ತರಕಾರಿ ಮಾರಲು ಬಂದ ರೈತರೊಬ್ಬರು ಪೊಲೀಸರ ವಿರುದ್ಧ ಆಕ್ರೋಶಗೊಂಡು ತರಕಾರಿಯನ್ನು ರಸ್ತೆಯಲ್ಲಿ ಚೆಲ್ಲಿ ಪ್ರಟಿಭಟನೆ ನಡೆಸಿರುವ ಘಟನೆ ನಗರದ ಗೋದಾವರಿ ಹೊಟೇಲ್‌ ಮುಂದೆ ನಡೆದಿದೆ. ರೈತ ಭೀಮನಗೌಡ ಬಿರಾದಾರ ಎಂಬುವರು ಹಳ್ಳಿಯಿಂದ ತರಕಾರಿಯನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾದಾಗ ಪೊಲೀಸರು ತಡೆದಿದ್ದಾರೆ. ತರಕಾರಿ ಮಾರಾಟ ಮಾಡಲು ಸ್ವಲ್ಪ ಅವಕಾಶ ನೀಡಿ ಎಂದು ರೈತ ಪರಿ ಪರಿಯಾಗಿ ಬೇಡಿಕೊಂಡರೂ ಒಪ್ಪದ ಪೊಲೀಸರು ಮಾರುಕಟ್ಟೆಬಂದ್‌ ಮಾಡಿಸಿದ್ದಾರೆ. ಈ ವೇಳೆ ರೈತ ತಾನು ತಂದಿದ್ದ ತರಕಾರಿಯನ್ನು ರಸ್ತೆಗೆ ಚೆಲ್ಲಿ, ಕಪ್ರ್ಯೂ ಹೆಸರಿನಲ್ಲಿ ಸರ್ಕಾರ ಜನ, ರೈತರನ್ನು ಬೀದಿಪಾಲು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರ್ಧ ತೆರೆದು ವ್ಯವಹಾರ ಮಾಡಿದ ಸೆಲೂನ್‌, ಚಪ್ಪಲಿ ಅಂಗಡಿ: ಚಿತ್ರದುರ್ಗದಲ್ಲಿ ಸೆಲೂನ್‌, ಚಪ್ಪಲಿ ಅಂಗಡಿ ಸೇರಿದಂತೆ ಕೆಲ ಅಂಗಡಿ ಮಾಲೀಕರು ಅರ್ಧ ಬಾಗಿಲು ತೆಗೆದು ಗ್ರಾಹಕರ ಒಳ ಕರೆದು ವಹಿವಾಟು ನಡೆಸುತ್ತಿದ್ದರು. ಈ ರೀತಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ಪತ್ತೆ ಹಚ್ಚಿದ ಪೊಲೀಸರು ದಂಡ ವಿಧಿಸುವ ದೃಶ್ಯ ಅಲ್ಲಲ್ಲಿ ಕಂಡು ಬಂತು.