ಟೊಮೆಟೋ ಬಳಿಕ ಈರುಳ್ಳಿ ಬೆಲೆ ಏರಿಕೆ ಶಾಕ್?
ರಾಜ್ಯದ ಈರುಳ್ಳಿ ಬೆಳೆಯುವ ಪ್ರದೇಶದಿಂದ ಪೂರೈಕೆ ಕುಸಿತ, ಕೆಜಿ ಈರುಳ್ಳಿಗೆ ಈಗ 45 ರು.। ಮಹಾರಾಷ್ಟ್ರದಿಂದ ಈರುಳ್ಳಿ ಬರದಿದ್ದರೆ ಬೆಲೆ ಮತ್ತಷ್ಟು ಏರಿಕೆ
ಮಯೂರ್ ಹೆಗಡೆ
ಬೆಂಗಳೂರು(ಅ.11): ಟೊಮೆಟೋ ಬೆಲೆ ಏರಿಳಿತದ ಬಳಿಕ ಇದೀಗ ಈರುಳ್ಳಿ ಬೆಲೆ ಹೆಚ್ಚಳದ ಆತಂಕ ಎದುರಾಗಿದೆ. ಏಕೆಂದರೆ, ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಜಿಲ್ಲೆಗಳಿಂದ ಪೂರೈಕೆ ಬಹುತೇಕ ಕುಸಿದಿದೆ. ಆದರೆ, ಕೇಂದ್ರ ಸರ್ಕಾರ ನಾಫೆಡ್ (ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ಮೂಲಕ ಮಹಾರಾಷ್ಟ್ರದ ಈರುಳ್ಳಿಯನ್ನು ರಾಜ್ಯಕ್ಕೆ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣದಲ್ಲಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಈರುಳ್ಳಿ ಧಾರಣೆಯಲ್ಲಿ ಏರು-ಪೇರಾದರೆ ಅಥವಾ ಪೂರೈಕೆ ಕಡಿಮೆಯಾದರೆ ರಾಜ್ಯದಲ್ಲಿ ಈರುಳ್ಳಿ ಗಗನ ಮುಟ್ಟುವುದು ಖಚಿತ.
ಕಳೆದೆರಡು ವರ್ಷ ಅತಿವೃಷ್ಟಿ, ರೋಗ ಬಾಧೆಯಿಂದ ಈರುಳ್ಳಿ ನಷ್ಟವಾಗಿದ್ದರೆ, ಈ ಬಾರಿ ಅನಾವೃಷ್ಟಿ ಬಿತ್ತನೆ ಪ್ರಮಾಣವನ್ನು ಕುಗ್ಗಿಸಿದೆ. ಹೀಗಾಗಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಈ ವೇಳೆಗೆ ಬರಬೇಕಿದ್ದಷ್ಟು ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಪರಿಣಾಮ, ಯಶವಂತಪುರ, ದಾಸನಪುರ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹ 1000 ದಿಂದ ₹ 3000 ಬೆಲೆಯಿದೆ. ಕಳೆದ ಹದಿನೈದು ದಿನಗಳ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ₹ 15-20 ಕೆಜಿಗೆ ಸಿಗುತ್ತಿದ್ದ ಈರುಳ್ಳಿ ಇದೀಗ ಕೆಜಿಗೆ ₹ 40 - ₹ 45 ವರೆಗೂ ಮಾರಾಟವಾಗುತ್ತಿದೆ.
ಕೋಟೆನಾಡು ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ ಬೆಲೆ ಕುಸಿತ!
ರಾಜ್ಯದಲ್ಲಿ ಮೊದಲು ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣದ ರಾಜ್ಯಗಳಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ನವೆಂಬರ್ ಬಳಿಕ ಗದಗ, ವಿಜಯಪುರದಿಂದ ಪೂರೈಕೆಯಾಗುತ್ತದೆ. ಆದರೆ, ಈ ವರ್ಷ ಬಿತ್ತನೆ ಕಡಿಮೆಯಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಈ ವೇಳೆಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಶೇ. 35ರಷ್ಟು ಕಡಿಮೆ ಅಂದರೆ ನಿತ್ಯ ಸರಾಸರಿ 60 ಸಾವಿರದಿಂದ 70 ಸಾವಿರ ಚೀಲಗಳು ಮಾತ್ರ ಬರುತ್ತಿದ್ದು, ಇದರಲ್ಲಿ 2 ಸಾವಿರದಿಂದ 5 ಸಾವಿರ ಚೀಲ ಸರ್ಕಾರಿ ಈರುಳ್ಳಿ ಸೇರಿದೆ.
ಕಡಿಮೆ ಬೆಳೆಯಿಂದಾಗಿ ಬೆಲೆ ಮತ್ತಷ್ಟು ಗಗನಕ್ಕೇರುವುದನ್ನು ತಡೆಯಲು ಹಾಗೂ ಕೃತಕ ಅಭಾವ ಸೃಷ್ಟಿಗೆ ಅವಕಾಶ ನೀಡದಂತೆ ಕೇಂದ್ರದ ನಾಫೆಡ್ ಹಾಗೂ ನ್ಯಾಷನಲ್ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್) ಮೂಲಕ ಏಫ್ರಿಲ್, ಮೇ ತಿಂಗಳಲ್ಲಿ ಮಹಾರಾಷ್ಟ್ರದ ಈರುಳ್ಳಿಯನ್ನು ಖರೀದಿಸಿತ್ತು. ಅದನ್ನೀಗ ಕಳೆದ ವಾರದಿಂದ ಬೆಂಗಳೂರು ಮಾರುಕಟ್ಟೆಗೆ ಪೂರೈಸುತ್ತಿದೆ.
ಈ ಈರುಳ್ಳಿಯು ನವೆಂಬರ್ ಎರಡನೇ ವಾರದವರೆಗೆ ಮಾರುಕಟ್ಟೆಗೆ ಇದು ಬರಬಹುದು. ಈ ವೇಳೆಗೆ ಉತ್ತರ ಕರ್ನಾಟಕ, ಮಹಾರಾಷ್ಟ್ರದ ಈರುಳ್ಳಿ ಇದೇ ಪ್ರಮಾಣದಲ್ಲಿ ಬಂದರೆ ಬೆಲೆ ನಿಯಂತ್ರದಲ್ಲಿ ಇರುತ್ತದೆ. ಒಂದು ವೇಳೆ ಪೂರೈಕೆ ಕಡಿಮೆಯಾದರೆ ಬೆಲೆ ಏರಿಕೆಯಾಗಬಹುದು. ಆದರೆ, ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಿಸುವ ಸಾಧ್ಯತೆಯೇ ಹೆಚ್ಚಿದೆ ಎಂದು ವರ್ತಕರು ತಿಳಿಸಿದ್ದಾರೆ.
ಸರ್ಕಾರ ಪೂರೈಸುತ್ತಿರುವ ಪ್ರಮಾಣ ಕಡಿಮೆ ಇದ್ದರೂ ಇದು ಕೃತಕ ಅಭಾವ ತಪ್ಪಿಸುವಲ್ಲಿ, ಬೆಲೆ ನಿಯಂತ್ರಣದಲ್ಲಿಡುವಲ್ಲಿ ಮಹತ್ವ ಪಡೆದಿದೆ. ಸರ್ಕಾರ ಪೂರೈಸದಿದ್ದರೆ ಈಗಲೇ ಕೆಜಿಗೆ ₹ 50 ದಾಟುವ ಸಾಧ್ಯತೆಯಿತ್ತು ಎಂದು ಯಶವಂತಪುರ ಎಪಿಎಂಸಿ ಅಧಿಕಾರಿಗಳು ತಿಳಿಸಿದರು.
ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ
ಈರುಳ್ಳಿ ಬೆಲೆ ಏರಿಕೆ ಸಾಧ್ಯತೆಯಿದೆ. ಆದರೆ, ರಾಜ್ಯದಲ್ಲಿ ಈಗಾಗಲೇ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ಗರಿಷ್ಠ ₹ 280 ವರೆಗೆ ವ್ಯಾಪಾರವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಕಳೆದ ತಿಂಗಳಾಂತ್ಯಕ್ಕೆ ಕೆಜಿಗೆ ₹ 75- ₹ 170 ವರೆಗಿದ್ದ ಬೆಳ್ಳುಳ್ಳಿ ದರ ಕೆಜಿಗೆ ₹ 85- ₹ 190 ವರೆಗೆ ಬೆಲೆಯಿದೆ. ಇದು ಗ್ರಾಹಕರಿಗೆ ತಲುಪುವ ಹೊತ್ತಿಗೆ ₹ 150-₹ 280 ವರೆಗೂ ಏರಿಕೆಯಾಗುತ್ತಿದೆ.
ರಾಜ್ಯಕ್ಕೆ ಮಧ್ಯಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬರುತ್ತದೆ. ಗುಜರಾತ್, ರಾಜಸ್ಥಾನದಿಂದಲೂ ಪೂರೈಕೆ ಆಗುತ್ತದೆ. ಮಧ್ಯಪ್ರದೇಶದಲ್ಲಿ ಎರಡು ವಾರಗಳ ಹಿಂದೆ ಸುರಿದ ಭಾರೀ ಮಳೆಗೆ ಬೆಳ್ಳುಳ್ಳಿ ನೀರು ಪಾಲಾಗಿದೆ. ಪರಿಣಾಮ, ಶೇ. 25ರಷ್ಟು ಪೂರೈಕೆ ಕಡಿಮೆಯಾಗಿದೆ. ಇದು ಬೆಲೆ ವಿಪರೀತವಾಗಲು ಕಾರಣವಾಗಿದೆ. ಕಳೆದ ಎರಡು ವರ್ಷ ಕೇವಲ ಸಗಟು ₹ 20- ₹ 50 ಬೆಲೆಯಿತ್ತು. ಹೀಗಾಗಿ ರೈತರು ಹೆಚ್ಚಾಗಿ ಬೆಳೆಯಲು ಮುಂದಾಗಿರಲಿಲ್ಲ. ಆದರೆ, ಈ ವರ್ಷದ ಆರಂಭದಿಂದಲೇ ಬೆಲೆ ಹೆಚ್ಚುತ್ತಾ ಹೋಗಿದೆ ಎಂದು ವರ್ತಕರು ತಿಳಿಸಿದರು.
ಬೆಂಗಳೂರು ಬೆಳ್ಳುಳ್ಳಿ ವರ್ತಕರ ಸಂಘದ ಅಧ್ಯಕ್ಷ ಬಿಪಿನ್ ವೋರಾ, ಎಪಿಎಂಸಿಗೆ ಸದ್ಯ 3ಸಾವಿರ ಚೀಲ ವ್ಯಾಪಾರ ಆಗುತ್ತಿದೆ. ಡಿಸೆಂಬರ್, ಜನವರಿ ವೇಳೆಗೆ ಸಗಟು ಮಾರುಕಟ್ಟೆಯಲ್ಲೇ ಕೆಜಿಗೆ ₹ 250 ಆಗುವ ಸಾಧ್ಯತೆಯಿದೆ. ಒಂದಿಷ್ಟು ದಾಸ್ತಾನು ಇರುವ ಕಾರಣ ಈಗಲೇ ಅಷ್ಟೊಂದು ಬೆಲೆ ಹೆಚ್ಚಾಗಲ್ಲ ಎಂದರು.
ಗಗನಕ್ಕೇರಿದ ಈರುಳ್ಳಿ ದರ: ಕಂಗಾಲಾದ ಗ್ರಾಹಕ..!
ಈರುಳ್ಳಿ ಪೂರೈಕೆ ಕಡಿಮೆಯಿದ್ದರೂ ಬೆಲೆ ನಿಯಂತ್ರಣದಲ್ಲಿದೆ. ನಫೆಡ್, ಎನ್‌ಸಿಸಿಎಫ್ ಮೂಲಕ ಈರುಳ್ಳಿ ಪೂರೈಕೆ ಆಗುತ್ತಿರುವ ಕಾರಣ ಬೆಲೆ ಕಡಿಮೆಯಿದೆ ಎಂದು ಬೆಂಗಳೂರು ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಬಿ.ರವಿಶಂಕರ್ ಹೇಳಿದ್ದಾರೆ.
ಈ ವರ್ಷ ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ಬಿತ್ತನೆ ಕಡಿಮೆಯಾಗಿದೆ. ಇದೇ ವೇಳೆ ಕಡಿಮೆ ಉತ್ಪನ್ನವಿದ್ದರೂ ಗುಣಮಟ್ಟದಿಂದ ಕೂಡಿವೆ. ಸರ್ಕಾರ ತಕ್ಕ ಬೆಲೆ ನಿಗದಿಸಬೇಕು ಎಂದು ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ ತಿಳಿಸಿದ್ದಾರೆ.