Asianet Suvarna News Asianet Suvarna News

ಆ್ಯಪ್‌ ಆಟೋ ದರ ನಿಗದಿಗೆ 4 ವಾರ ಅವಕಾಶ; ಹೈಕೋರ್ಟ್ ಸಮ್ಮತಿ

  • ಓಲಾ, ಉಬರ್‌ ಆಟೋ ದರ: 4 ವಾರ ಅವಕಾಶ
  • ದರ ಹೆಚ್ಚಳ ಕೋರಿ ಕಂಪನಿಗಳ ಅರ್ಜಿ ಹಿನ್ನೆಲೆ
  • ಹೆಚ್ಚಿನ ಸಮಯ ಕೇಳಿ ಸರ್ಕಾರ ಮನವಿ
  • ಹೈಕೋರ್ಚ್‌ ಸಮ್ಮತಿ
Ola Uber is back on the road bengaluru rav
Author
First Published Nov 8, 2022, 7:38 AM IST

ಬೆಂಗಳೂರು (ನ.8) : ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆಗೆ ನ್ಯಾಯವಾದ ದರ ವಿಧಿಸುವ ಸಂಬಂಧ ಒಲಾ ಮತ್ತು ಉಬರ್‌ ಕಂಪನಿಗಳೊಂದಿಗೆ ಸಭೆ ನಡೆಸಿ ಒಮ್ಮತಕ್ಕೆ ಬರಲು ರಾಜ್ಯ ಸರ್ಕಾರಕ್ಕೆ ಹೈಕೋರ್ಚ್‌ ಮತ್ತೆ ನಾಲ್ಕು ವಾರ ಕಾಲಾವಕಾಶ ನೀಡಿದೆ.

ಓಲಾ, ಉಬರ್‌ಗೆ ಲಗಾಮು ಹಾಕಿದ ಸಾರಿಗೆ ಇಲಾಖೆ ಆಯುಕ್ತ ಎತ್ತಂಗಡಿ!

ಆ್ಯಪ್‌ ಆಧಾರಿತ ಓಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕೆಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಉಬರ್‌ ಇಂಡಿಯಾ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ಮತ್ತು ಅರ್ಜಿದಾರರ ಪರ ವಕೀಲರ ಮನವಿ ಪರಿಗಣಿಸಿದ ನ್ಯಾಯಪೀಠ, ಒಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ಕಲ್ಪಿಸುವ ಸಂಬಂಧ ಎಲ್ಲರ ಜೊತೆ ಸಮಾಲೋಚನಾ ಸಭೆ ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸರ್ಕಾರ ತಿಳಿಸಿದೆ. ಈ ಮಧ್ಯೆ ದರ ಹೆಚ್ಚಿಸುವಂತೆ ಕೋರಿ ಅರ್ಜಿದಾರರು ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಸಮಸ್ಯೆ ಬಗೆಹರಿಸಲು ಸರ್ಕಾರದ ಕೋರಿಕೆಯಂತೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿತು.

ಇನ್ನು ಅರ್ಜಿದಾರರ ಮಧ್ಯಂತರ ಮನವಿಗೆ ಮತ್ತು ಅರ್ಜಿಯಲ್ಲಿ ಪ್ರತಿವಾದಿ ಮಾಡಲು ಕೋರಿ ‘ಭಾರತ್‌ ಮೋಟಾರು ಸಾರಿಗೆ ಚಾಲಕರ ಸಂಘ’ ಸಲ್ಲಿಸಿರುವ ಮನವಿಗೆ ಸರ್ಕಾರ ಐದು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ತಿಳಿಸಿ ವಿಚಾರಣೆಯನ್ನು ನ.16ಕ್ಕೆ ಮುಂದೂಡಿತು.

ವಿಚಾರಣೆಗೆ ಹಾಜರಾಗಿದ್ದ ಸರ್ಕಾರಿ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚನಾ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಸಾರಿಗೆ ಆಯುಕ್ತರು ನಡೆಸಿದ ಸಭೆಯಲ್ಲಿ ಒಮ್ಮತದ ನಿಲುವಿಗೆ ಬರಲಾಗಿಲ್ಲ. ನ.14 ಮತ್ತು 15ರಂದು ಸಂಚಾರಿ ಪೊಲೀಸರ ಜೊತೆ ಸಭೆ ಏರ್ಪಡಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ದರ ಹೆಚ್ಚಳಕ್ಕೆ ಸರ್ಕಾಕ್ಕೆ ಕಂಪನಿಗಳಿಂದ ಒತ್ತಡ?

ಈ ನಡುವೆ, ಆ್ಯಪ್‌ ಆಧಾರಿತ ಆಟೋ ರಿಕ್ಷಾ ಸೇವೆ ಆರಂಭಿಸಲು ಅನುಮತಿ ನೀಡಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಚ್‌ ನಿರ್ದೇಶನ ನೀಡಿ ಹೆಚ್ಚು ಕಡಿಮೆ ಒಂದು ತಿಂಗಳಾಗುತ್ತಾ ಬಂದಿದ್ದರೂ ದರ ನಿಗದಿಪಡಿಸದೇ ಇರುವುದನ್ನು ನೋಡಿದರೆ ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.

ಕಳೆದ ಅ.29ರಂದು ಓಲಾ, ಉಬರ್‌, ಆಟೋ ಯೂನಿಯನ್‌ಗಳ ಜತೆ ಸಾರಿಗೆ ಇಲಾಖೆ ಮುಖ್ಯಕಾರ್ಯದರ್ಶಿಗಳು ಸಭೆ ನಡೆಸಿದ್ದರು. ಅಂತಿಮ ದರಪಟ್ಟಿಯನ್ನು ನ.7ರಂದು ಹೈಕೋರ್ಚ್‌ಗೆ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಆದರೆ, ಇಂದು ನೂತನ ದರಪಟ್ಟಿಸಲ್ಲಿಕೆ ಮಾಡದೇ, ನಾಲ್ಕು ವಾರ ಕಾಲಾವಧಿಯನ್ನು ರಾಜ್ಯ ಸರ್ಕಾರ ಕೇಳಿದೆ.

ಈ ಮಧ್ಯೆ ನೂತನ ದರಪಟ್ಟಿನಿಗದಿ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿಂದ ಓಲಾ, ಉಬರ್‌ ಕಂಪನಿಗಳ ಜತೆ ಸಭೆ ನಡೆಸಿದ್ದ ಸಾರಿಗೆ ಇಲಾಖೆ ಆಯುಕ್ತರು ಏಕಾಏಕಿ ವರ್ಗಾವಣೆಯಾಗಿದ್ದಾರೆ. ಹೊಸ ಆಯುಕ್ತರು ಮತ್ತೆ ಸಭೆ ನಡೆಸಿ ನಿರ್ಧರಿಸಲು ಇನ್ನಷ್ಟುವಿಳಂಬವಾಗಲಿದೆ. ಬಹುಶಃ ಮುಂದಿನ ವರ್ಷವೇ ದರ ನಿಗದಿಯಾಗುವ ಸಾಧ್ಯತೆ ಇದೆ. ಆದರೆ ಸರ್ಕಾರ ದರ ನಿಗದಿಗೆ ಇನ್ನಷ್ಟುಕಾಲಾವಕಾಶ ಕೇಳಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಆಟೋ ಚಾಲಕರ ಯೂನಿಯನ್‌ಗಳು, ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ, ಹೆಚ್ಚು ದರ ನಿಗದಿಗೆ ಪಟ್ಟು ಹಿಡಿದಿವೆ ಎಂದು ಆರೋಪಿಸಿವೆ.

ಓಲಾ, ಉಬರ್‌ ಹಾಗೂ ರ‍್ಯಾಪಿಡೋಗೆ ಸರ್ಕಾರದಿಂದ ನೂತನ ದರ!

ಸದ್ಯ ನಿಂತಿದೆ ಸುಲಿಗೆ!

ನೂತನ ದರಪಟ್ಟಿನಿಗದಿವರೆಗೂ ಸಾಮಾನ್ಯ ಆಟೋರಿಕ್ಷಾಗಳಿಗೆ ಸರ್ಕಾರ ನಿಗದಿಪಡಿಸಿರುವ ಮೀಟರ್‌ ದರ ಜತೆ ಶೇ.10 ಹಾಗೂ ಜಿಎಸ್‌ಟಿ ಒಳಗೊಂಡ ದರವನ್ನು ಪ್ರಯಾಣಿಕರಿಂದ ಪಡೆಯಬೇಕು ಎಂದು ಓಲಾ, ಉಬರ್‌ ಕಂಪನಿಗಳಿಗೆ ಹೈಕೋರ್ಚ್‌ ಸೂಚಿಸಿತ್ತು. ತಾತ್ಕಾಲಿಕವಾಗಿ ಸುಲಿಗೆ ನಿಂತಿದೆ. ಸದ್ಯ ಓಲಾ, ಉಬರ್‌ ಎರಡೂ ಆ್ಯಪ್‌ಗಳಲ್ಲಿಯೂ ಎರಡು ಕಿ.ಮೀಗೆ .40ಕ್ಕಿಂತ ಕಡಿಮೆ ದರ ಪಡೆಯುತ್ತಿವೆ. ಮುಂದಿನ ದಿನಗಳಲ್ಲಿಯೂ ಸದ್ಯ ಜಾರಿಯಲ್ಲಿರುವ ದರದಲ್ಲಿಯೇ ಆ್ಯಪ್‌ ಆಧಾರಿತ ಆಟೋ ಸೇವೆ ಮುಂದುವರೆಯಲಿ ಎಂಬ ಅಭಿಪ್ರಾಯಗಳನ್ನು ಸಾರ್ವಜನಿಕರು ವ್ಯಕ್ತಪಡೆಸುತ್ತಿದ್ದಾರೆ.

Follow Us:
Download App:
  • android
  • ios