ಸುರ್ಜೇವಾಲಾ ನಡೆಸಿದ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು: ವಿವಾದ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ಸಭೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯಸ್ಥರು ಭಾಗಿಯಾಗಿದ್ದು ವಿವಾದಕ್ಕೀಡಾಗಿದೆ.
ಬೆಂಗಳೂರು (ಜೂ.14) ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ಸಭೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯಸ್ಥರು ಭಾಗಿಯಾಗಿದ್ದು ವಿವಾದಕ್ಕೀಡಾಗಿದೆ.
ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಬಿಬಿಎಂಪಿ(BBMP) ಆಡಳಿತಾಧಿಕಾರಿಯೂ ಆಗಿರುವ ರಾಕೇಶ್ ಸಿಂಗ್(Rakesh singh) ಮತ್ತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್(Tushar girinath IAS) ಅವರು ಪಾಲ್ಗೊಂಡಿರುವುದನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಜತೆಗೆ ಸುರ್ಜೇವಾಲಾ ಅವರೇ ಸಭೆಯ ನೇತೃತ್ವ ವಹಿಸಿರುವುದನ್ನು ಬಲವಾಗಿ ಖಂಡಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ಮುಖಂಡರ ನಿಯೋಗ ಬುಧವಾರ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ದೂರು ನೀಡಲು ನಿರ್ಧರಿಸಿದೆ.
ಸುರ್ಜೇವಾಲಾ, ಶೆಟ್ಟರ್ ಭೇಟಿ: ಸ್ಥಾನಮಾನದ ಕುರಿತು ಚರ್ಚೆ
ಈ ಬಗ್ಗೆ ಸಭೆಯ ಫೋಟೋ ಲಗತ್ತಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಬೆಂಗಳೂರಿನ ಶಾಂಘ್ರಿಲಾ ಹೋಟೆಲ್‌ನಲ್ಲಿ ಎಟಿಎಂ ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು? ರಾಜ್ಯ ಸರ್ಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಬಿಬಿಎಂಪಿ ಅಧಿಕಾರಿಗಳೊಟ್ಟಿಗೆ ಏನು ಕೆಲಸ? ಇದು ಶೇ.85 ಡೀಲ್ ಫಿಕ್ಸಿಂಗ್ ಸಭೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಅವರೇ ಉತ್ತರಿಸಿ’ ಎಂದು ಒತ್ತಾಯಿಸಿದೆ.
ಅಲ್ಲದೆ, ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಅವರೂ ಸಭೆಯ ಫೋಟೋ ಲಗತ್ತಿಸಿ ಟ್ವೀಟ್ ಮಾಡಿದ್ದು, ‘ಸಭೆಯಲ್ಲಿ ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ವಿಶೇಷ ಆಯುಕ್ತ ದೀಪಕ್ ಇರುವುದನ್ನು ಗಮನಿಸಬಹುದು. ಸಭೆಯ ಅಧ್ಯಕ್ಷತೆಯನ್ನು ಸುರ್ಜೇವಾಲಾ ತೆಗೆದುಕೊಂಡಿರುವಂತೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಕದಲ್ಲಿ ಕೂಡಿಸಿಕೊಳ್ಳುವ ಸೌಜನ್ಯ ತೋರಿರುವಂತೆ ಸ್ಪಷ್ಟವಾಗಿ ಕಾಣುತ್ತದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಸಭೆಯ ಫೋಟೋ ಜತೆಗೆ ಟ್ವೀಟ್ ಮಾಡಿ, ರಾಜ್ಯದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೋ ಅಥವಾ ದೆಹಲಿಯ ಜನಪಥರಸ್ತೆಯ 10ನೇ ನಂಬರಿನ ಹಂಗಿನ ಸರ್ಕಾರವೋ? ಕನ್ನಡಿಗರು ಮತ ಹಾಕಿದ್ದು ಕಾಂಗ್ರೆಸ್ ಸರ್ಕಾರಕ್ಕಾ? ಅಥವಾ ಕೈಗೊಂಬೆ ಸರ್ಕಾರಕ್ಕಾ? ಪಾಪ.. ಜನರ ಮತ ಹಂಗಿನ ಸರ್ಕಾರದ ಪಾಲಾಗಿದೆ. ಸರ್ಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಬಿಎಂಪಿಯ 243 ವಾರ್ಡ್‌ಗಳಿಗೂ ಚುನಾವಣೆ ಸಾಧ್ಯತೆ: ರಾಮಲಿಂಗಾರೆಡ್ಡಿ ಸಮಿತಿ ವರದಿ
ಸರ್ಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡಿನ ನಿಲಯದ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು! ನಾನು ಟ್ಯಾಗ್ ಮಾಡಿರುವ ಫೋಟೋ ಆ ದೈನೇಸಿ ಸ್ಥಿತಿಗೆ ಸಾಕ್ಷಿ. ರಣದೀಪ್ ಸುರ್ಜೇವಾಲಾ ಅವರಿಗೆ ಸರ್ಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು? ಸಭೆಯಲ್ಲಿ ಹಿರಿಯ ಸಚಿವರಿದ್ದಾರೆ! ಹಿರಿಯ ಐಎಎಸ್ ಅಧಿಕಾರಿಗೂ ಹಾಜರಿದ್ದಾರೆ!! ಹೀಗಾಗಿ ಇದು ಅಧಿಕೃತ ಸಭೆಯೇ ಆಗಿದೆ. ಸುರ್ಜೇವಾಲಾ ಮಧ್ಯದ ಸ್ಥಾನದಲ್ಲಿ ಕುಳಿತಿದ್ದಾರೆ. ಸಚಿವರು ಪಕ್ಕದ ಕುರ್ಚಿಗಳ ಪಾಲಾಗಿದ್ದಾರೆ. ಇದೇನು ವಿಚಿತ್ರ? ಇದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ ಸಭೆಯಲ್ಲಿ ಡಿ.ಕೆ.ಶಿವಕುಮಾರ್, ರಾಕೇಶ್ ಸಿಂಗ್, ತುಷಾರ್ ಗಿರಿನಾಥ್, ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.