ಬೆಂಗಳೂರು (ನ. 21): ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣಾ ಕಣಕ್ಕೆ ಧುಮುಕಿರುವ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರವನ್ನು ವಾಪಸ್‌ ಪಡೆಯಲು ಗುರುವಾರ ಕಡೆಯ ದಿನವಾಗಿದ್ದು, ಅಖಾಡದಲ್ಲಿರುವ ಹುರಿಯಾಳುಗಳ ನಿಖರವಾದ ಮಾಹಿತಿ ಲಭ್ಯವಾಗಲಿದೆ.

ಡಿ.5ರಂದು ನಡೆಯುವ ಉಪಚುನಾವಣೆಗೆ ಈಗಾಗಲೇ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದೆ. 218 ಅಭ್ಯರ್ಥಿಗಳ 301 ನಾಮಪತ್ರಗಳು ಸ್ವೀಕೃತಗೊಂಡಿವೆ. ನಾಮಪತ್ರಗಳನ್ನು ಹಿಂಪಡೆಯಲು ಗುರುವಾರ ಕೊನೆಯ ದಿನವಾಗಿದೆ. ಗುರುವಾರ ಸಂಜೆಯ ಬಳಿಕ ಚುನಾವಣಾ ಕಣದಲ್ಲಿ ಉಳಿಯುವ ಅಂತಿಮ ಹುರಿಯಾಳುಗಳ ಸ್ಪಷ್ಟಚಿತ್ರಣ ತಿಳಿದು ಬರಲಿದೆ.

ನಾಲ್ವರು ಸದಸ್ಯರು ಕಾಂಗ್ರೆಸ್‌ನಿಂದ ಉಚ್ಛಾಟನೆ!

ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ತಲಾ 15 ಮತ್ತು ಜೆಡಿಎಸ್‌ನ 14 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿವೆ. ಬಿಎಸ್‌ಪಿಯ ಎರಡು, ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಒಂದು, ಇತರೆ ಪಕ್ಷದ 46 ಮತ್ತು 125 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತಗೊಂಡಿವೆ. ಗುರುವಾರ ಸಂಜೆವರೆಗೆ ನಾಮಪತ್ರ ಹಿಂಪಡೆಯಲು ಆಯೋಗವು ಕಾಲಾವಕಾಶ ನೀಡಿದೆ. ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿರುವ ಶಿವಲಿಂಗ ಶಿವಾಚಾರ್ಯ ಅವರ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ನಾಮಪತ್ರ ಹಿಂಪಡೆಯಲು ಮುಂದಾಗಿದ್ದಾರೆ.

ಬಂಡಾಯಗಾರರ ಅಸಮಾಧಾನವನ್ನು ಶಮನಗೊಳಿಸಲು ಮೂರೂ ಪಕ್ಷದ ಮುಖಂಡರು ಕೊನೆ ಘಳಿಗೆಯ ಪ್ರಯತ್ನ ನಡೆಸಿದ್ದಾರೆ. ಅತೃಪ್ತಿ ಶಮನವಾದರೆ ನಾಮಪತ್ರಗಳನ್ನು ಹಿಂಪಡೆಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷ ಬಂಡಾಯ ಬಿಸಿಯನ್ನು ಎದುರಿಸಬೇಕಾಗುತ್ತದೆ. ಹಿರೇಕೆರೂರಿನಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಬಿ.ಸಿ.ಪಾಟೀಲ್‌ ನಾಮಪತ್ರ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಸಿ.ಪಾಟೀಲ್‌ ಪುತ್ರಿ ಸೃಷ್ಟಿಪಾಟೀಲ್‌ ಸಹ ನಾಮಪತ್ರ ಸಲ್ಲಿಸಿದ್ದಾರೆ.

ಮಧುಬಂಗಾರಪ್ಪ ಕಾಂಗ್ರೆಸ್‌ಗೆ..? ಜಿಲ್ಲೆಯ 'ಕೈ' ಹಿರಿಯ ನಾಯಕ ಕಾಗೋಡು ಮಾತೇನು?

ಅಂತೆಯೇ ಮಹಾಲಕ್ಷ್ಮೇ ಲೇಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಮತ್ತು ಅವರ ಪತ್ನಿ ಹೇಮಲತಾ ಸಹ ಉಮೇದುವಾರಿಕೆ ಸಲ್ಲಿಸಿದ್ದಾರೆ. ಸೃಷ್ಟಿಪಾಟೀಲ್‌ ಮತ್ತು ಹೇಮಲತಾ ಅವರು ನಾಮಪತ್ರವನ್ನು ಹಿಂಪಡೆಯಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.