ಬೆಂಗಳೂರು[ನ.21]: ಕೆ.ಆರ್‌. ಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಬಿಬಿಎಂಪಿಯ ಕಾಂಗ್ರೆಸ್‌ ಸದಸ್ಯರಾದ ಜಯಪ್ರಕಾಶ್‌, ಶ್ರೀಕಾಂತ್‌, ಸುರೇಶ್‌, ಎಚ್‌.ಜಿ. ನಾಗರಾಜ್‌ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ರಾಜ್ಯ ಕಾಂಗ್ರೆಸ್‌ ಆದೇಶ ಮಾಡಿದೆ.

ನಾಲ್ಕು ಮಂದಿಯ ಮೇಲೆ ಕೆ.ಆರ್‌. ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಪರ ಕೆಲಸ ಮಾಡದೆ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಪರ ಕೆಲಸ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿತ್ತು.

'ಪತಿಯೊಂದಿಗೆ ನಾಮಪತ್ರ ಸಲ್ಲಿಸಿದ ಹೇಮಲತಾ, ಇತರ ಮೂವರು ಜೆಡಿಎಸ್‌ನಿಂದ ಉಚ್ಛಾಟನೆ'

ಈ ಬಗ್ಗೆ ಆದೇಶ ಹೊರಡಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿ ಷಫೀಉಲ್ಲ, ಬಸವನಪುರ ವಾರ್ಡ್‌ ಸದಸ್ಯ ಜಯಪ್ರಕಾಶ್‌, ದೇವಸಂದ್ರ ವಾರ್ಡ್‌ ಸದಸ್ಯ ಶ್ರೀಕಾಂತ್‌, ಎ.ನಾರಾಯಣಪುರ ವಾರ್ಡ್‌ನ ಸುರೇಶ್‌, ವಿಜ್ಞಾನನಗರ ವಾರ್ಡ್‌ನ ಎಚ್‌.ಜಿ. ನಾಗರಾಜ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದಾರೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.