ಟಿಪ್ಪುವಿನ ಪ್ರತಿಮೆ ಏಕೆ ಬೇಕು?: ಸಾಹಿತಿ ಎಸ್.ಎಲ್.ಭೈರಪ್ಪ
ಸಣ್ಣ ರಾಜ್ಯವಾದರೂ ಮಾದರಿ ಆಡಳಿತ ನೀಡಿದ, ಎಲ್ಲರನ್ನೂ ಪ್ರೀತಿಯಿಂದ ಕಂಡಕಾರಣಕ್ಕೆ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ಆದರೆ ಇಷ್ಟೊಂದು ವಿರೋಧ ಮಾಡಿದರೂ ಟಿಪ್ಪುವಿನ ಪ್ರತಿಮೆ ಏಕೆ ಬೇಕು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಪ್ರಶ್ನಿಸಿದರು.
ಮೈಸೂರು (ನ.14): ಸಣ್ಣ ರಾಜ್ಯವಾದರೂ ಮಾದರಿ ಆಡಳಿತ ನೀಡಿದ, ಎಲ್ಲರನ್ನೂ ಪ್ರೀತಿಯಿಂದ ಕಂಡಕಾರಣಕ್ಕೆ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ಆದರೆ ಇಷ್ಟೊಂದು ವಿರೋಧ ಮಾಡಿದರೂ ಟಿಪ್ಪುವಿನ ಪ್ರತಿಮೆ ಏಕೆ ಬೇಕು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಪ್ರಶ್ನಿಸಿದರು. ರಂಗಾಯಣ ಮತ್ತು ಅಯೋಧ್ಯ ಪ್ರಕಾಶನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಡ್ಡಂಡ ಸಿ.ಕಾರ್ಯಪ್ಪ ಅವರ ಟಿಪ್ಪು ನಿಜಕನಸುಗಳು ನಾಟಕ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಟಿಪ್ಪು ಮೂಲತಃ ಕ್ರೂರಿ. ನಂದಿಬೆಟ್ಟದ ಮೇಲಿನಿಂದ ಜನರನ್ನು ಚೀಲಕ್ಕೆ ತುಂಬಿ ಕೆಳಕ್ಕೆ ಎಸೆಯುತ್ತಿದ್ದ. ಆದರೆ ನಮ್ಮ ವ್ಯವಸ್ಥೆಯಲ್ಲಿ ಟಿಪ್ಪು ಜಯಂತಿಯನ್ನು ಆಯೋಜಿಸುತ್ತಿದ್ದಾರೆ. ಇದು ಎಲ್ಲಾ ಚುನಾವಣೆಯಲ್ಲೂ ಕೆಲಸ ಮಾಡುತ್ತದೆ. ಬೇಕಿದ್ದರೆ ಹೆತ್ತ ತಾಯಿಯ ಜುಟ್ಟು ಹಿಡಿದು ಒಪ್ಪಿಸಿ ಬಿಡುವಷ್ಟರ ಮಟ್ಟಿಗೆ ನಮ್ಮ ಪ್ರಜಾಪ್ರಭುತ್ವವಿದೆ. ಇದಕ್ಕಾಗಿಯೇ ನಾವು ಬ್ರಿಟಿಷರನ್ನು ಓಡಿಸಿದ್ದು ಎಂದು ಅವರು ಪ್ರಶ್ನಿಸಿದರು.
ಈಗ ಟಿಪ್ಪು ಸುಲ್ತಾನ್ ಪ್ರತಿಮೆ ರಾಜಕೀಯ: ತನ್ವೀರ್ ಹೇಳಿಕೆಗೆ ಪರ-ವಿರೋಧ
ಪ್ರತಾಪಗಡ ಎಂಬಲ್ಲಿ ಶಿವಾಜಿ ಗುಡಿಯನ್ನು ಮಟ್ಟಹಾಕಿ, ಅಲ್ಲೊಂದು ಮಸೀದಿ ಕಟ್ಟಿದರು ನಮ್ಮ ಜನಪ್ರತಿನಿಧಿಗಳು. ಇದೆಲ್ಲವೂ ಮತಕ್ಕಾಗಿ ಅಲ್ಲವೇ? ಇದನ್ನು ನಾವು ಪ್ರಶ್ನಿಸದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಈ ನಾಟಕವನ್ನು ನೋಡಿ ಮನೆಗೆ ಹೋದರೆ ಪ್ರಯೋಜನವಿಲ್ಲ. ಬದಲಿಗೆ ನಾಲ್ಕಾರು ಮಂದಿಗೆ ಈ ವಿಷಯ ಮುಟ್ಟಿಸಬೇಕು. ಜನರಿಗೆ ಈ ಸತ್ಯ ತಿಳಿಯಬೇಕು. ಟಿಪ್ಪು ಹೆಸರನ್ನು ರೈಲಿಗೆ ಇಡುವ ಜನ, ಕಲಾಂ ಹೆಸರನ್ನಿಡಲು ಸಿದ್ಧರಿಲ್ಲ. ಟಿಪ್ಪುವನ್ನು ಹೀರೋ ಮಾಡಿಕೊಂಡು ಬರುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಅವರು ಹೇಳಿದರು.
ಚರಿತ್ರೆಯ ಭಾಗ: ಟಿಪ್ಪು ನಿಜಕನಸುಗಳು ನಾಟಕ ಕೃತಿಯು ಚರಿತ್ರೆಯ ಒಂದು ಭಾಗ. ಕಾಶ್ಮೀರ್ ಫೈಲ್ಸ್ ಸಿನಿಮಾದಂತೆ ಈ ನಾಟಕ ಕೃತಿಯಲ್ಲಿ ದೃಶ್ಯಗಳು ಓಡುತ್ತವೆ. ಇಲ್ಲಿ ಭಾವನೆ, ಇತಿಹಾಸ ಮತ್ತು ಮೌಲ್ಯಗಳ ಸಂಘರ್ಷ ಕಂಡುಬರುತ್ತದೆ. ಇದು ಚರಿತ್ರೆಯ ಒಂದು ಭಾಗವಾಗಿದೆ ಎಂದು ಚಿಂತಕ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟರು. ಕೃತಿಯ ಲೇಖಕ ಹಾಗೂ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಸರ್ಕಾರದ ಅನುದಾನಪಡೆದು ರಂಗಾಯಣದಿಂದ ಟಿಪ್ಪು ಕಂಡ ಕನಸುಗಳು ನಾಟಕ ಪ್ರದರ್ಶಿಸಲಾಯಿತು. ಅದಕ್ಕಾಗಿ ಈಗ ನಾನು ಟಿಪ್ಪುವಿನ ನಿಜ ಕನಸುಗಳು ನಾಟಕ ರಚಿಸಿದ್ದೇನೆ. ಇದೇ ತಿಂಗಳ 20 ರಂದು ಅದು ಪ್ರದರ್ಶನಗೊಳ್ಳಲಿದೆ ಎಂಬುದಾಗಿ ಅವರು ತಿಳಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್: ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಗಬಹುದು ಎಂಬ ಕಾರಣಕ್ಕೆ ರಂಗಾಯಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ರಂಗಾಯಣದ ಮುಖ್ಯ ಗೇಟ್ ಮತ್ತು ಭೂಮಿಗೀತದ ಪ್ರವೇಶ ದ್ವಾರದಲ್ಲಿ ಪೊಲೀಸರು ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿ ಒಳಗೆ ಬಿಟ್ಟರು.
ಟಿಪ್ಪು ಯಾವ ಹುಲಿ ಕೊಂದ: ಸಂಸದ ಪ್ರತಾಪ ಸಿಂಹ ಮಾತನಾಡಿ, ನಾವು ಶಾಲೆಯಲ್ಲಿ ಟಿಪ್ಪು ಸುಲ್ತಾನ್ ಮೈಸೂರು ಹುಲಿ ಎಂದು ಓದಿಕೊಂಡು ಬಂದೆವು. ಯಾವ ಹುಲಿ ಕೊಂದ ಎಂದು ಪ್ರಶ್ನಿಸಲಿಲ್ಲ. ಏಕಾಂಕಿಯಾಗಿ, ಬರಿಗೈಯಲ್ಲಿ ಕೊಲ್ಲುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಟಿಪ್ಪುವನ್ನು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬೆಂಬಲಿಸಲು ಯಾವ ಅನಿವಾರ್ಯತೆ ಇದೆಯೋ ಗೊತ್ತಿಲ್ಲ. ಶಾಸಕ ತನ್ವೀರ್‌ಸೇಠ್ ಸಮರ್ಥನೆಯಲ್ಲಿ ನ್ಯಾಯವಿದೆ, ಆದರೆ ವಿಶ್ವನಾಥ್‌ಗೆ ಏನು ಅನಿವಾರ್ಯತೆ ಇದೆ?
2ನೇ ಮಹಾಯುದ್ದದಲ್ಲಿ ಹೈದರ್‌ಅಲಿ ಸತ್ತ ಮೇಲೆ ಒಂದು ಯುದ್ಧವನ್ನೂ ಗೆಲ್ಲಲಾಗದ ಆತ ಸುಲ್ತಾನ ಹೇಗೆ ಆಗುತ್ತಾನೆ? ಬರಿಗೈಯಲ್ಲಿ ಹೇಗೆ ಹುಲಿ ಕೊಲ್ಲುತ್ತಾನೆ? ಇಲ್ಲಿ ಎಂದಿಗೂ ಮುಸ್ಲಿಂರು ಏಕಾಂಗಿಯಾಗಿ ಶೌರ್ಯಮೆರಿದಿಲ್ಲ, ಕ್ರೌರ್ಯ ಮೆರೆದಿದ್ದಾರೆ. 3ನೇ ಮಹಾಯುದ್ಧವಾದಲ್ಲಿ ರಣರಂಗಕ್ಕೂ ಬರದೆ, ಕೋಟೆ ಒಳಗೆ ಸತ್ತ ಟಿಪ್ಪು ಸುಲ್ತಾನ ಆಗಲು ಸಾಧ್ಯವೇ ಇಲ್ಲ. ಆತ ಕೋಟೆ ಒಳಗೇ ಕುಳಿತು ಬ್ರಿಟೀಷರೊಡನೆ ಸಂಧಾನಕ್ಕೆ ಮುಂದಾಗಿದ್ದ ಎಂದು ಅವರು ಹೇಳಿದರು.
ಯಾವ ಆಕಾರದಲ್ಲಿ ಟಿಪ್ಪು ಪ್ರತಿಮೆ ಮಾಡಬೇಕೆಂದು ನಿರ್ಧಾರವಾಗಿಲ್ಲ: ತನ್ವೀರ್ ಸೇಠ್
ಸಾಮರಸ್ಯ ವೇದಿಕೆಯ ವಾದಿರಾಜ್ ಮಾತನಾಡಿ, ಐ.ಎಂ. ಮುತ್ತಣ್ಣ, ಡಾ.ಎಸ್.ಎಲ್. ಭೈರಪ್ಪ, ಪ್ರತಾಪ ಸಿಂಹ, ಚಿಮೂ, ಪ್ರಧಾನ ಗುರುದತ್ ಮೊದಲಾದವರು ಟಿಪ್ಪು ನಿಜಸ್ವರೂಪ ಬಯಲಿಗೆ ಶ್ರಮಿಸಿದ್ದಾರೆ. ನಾವು ಬರೆದಿರುವುದು ಕಾಲ್ಪನಿಕ ಅಲ್ಲ, ಅಧಾರ ಯುಕ್ತವಾಗಿದೆ. ಆದರೆ ಸಂಜಯ್ ಖಾನ್ ಕಾಲ್ಪನಿಕ ಎಂದು ಒಪ್ಪಿದರೆ, ಗಿರೀಶ್ ಕಾರ್ನಾಡ್ ಲಾವಣಿ ಕೇಳಿ ಬರೆದೆ ಎಂದು ಜಾರಿಕೊಂಡಿದ್ದಾಗಿ ತಿಳಿಸಿದರು. ಲೇಖಕ ಅಡ್ಡಂಡ ಸಿ. ಕಾರ್ಯಪ್ಪ, ರೋಹಿತ್ ಚಕ್ರತೀರ್ಥ, ಅಯೋಧ್ಯಾ ಪ್ರಕಾಶನದ ಶಶಾಂಕ್ ಭಟ್ ಇದ್ದರು.