ಕರ್ನಾಟಕದ ಆದ್ಯತೆ ನೋಡಿಕೊಂಡು ತಮಿಳುನಾಡಿಗೆ ನೀರು ಬಿಡಲು ಸೂಚನೆ
ಉಭಯ ರಾಜ್ಯಗಳ ವಾದ ಆಲಿಸಿದ ಪ್ರಾಧಿಕಾರ, ಪರಿಸರ ಮತ್ತು ರಾಜ್ಯದ ಕುಡಿಯುವ ನೀರಿನ ಆದ್ಯತೆ ನೋಡಿಕೊಂಡು ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತು. ಅಲ್ಲದೆ, 2022-23ನೇ ಜಲ ವರ್ಷದ ಲೆಕ್ಕಪತ್ರವನ್ನು ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳಿಗೆ ಸೂಚನೆ ನೀಡಿತು.
ನವದೆಹಲಿ(ಮೇ.22): ಪರಿಸರ ಮತ್ತು ರಾಜ್ಯದ ಕುಡಿಯುವ ನೀರಿನ ಆದ್ಯತೆ ನೋಡಿಕೊಂಡು ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕರ್ನಾಟಕಕ್ಕೆ ಆದೇಶಿಸಿದೆ. ಕರ್ನಾಟಕದಲ್ಲಿ ತೀವ್ರ ಬರಗಾಲ ಇರುವುದರಿಂದ ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ಕಳೆದ ಗುರುವಾರ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆ ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ, ತಮಿಳುನಾಡು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಮಂಗಳವಾರ ದೆಹಲಿಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ವಾದ ಮಂಡಿಸಿದ ತಮಿಳುನಾಡು, ಸುಪ್ರೀಂಕೋರ್ಟ್ ಆದೇಶದಂತೆ ಪರಿಸರ ರಕ್ಷಣೆಗಾಗಿ ಕರ್ನಾಟಕ ಮೇ 15ರೊಳಗೆ 6.005 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಿತ್ತು ಆದರೆ, ಬಿಟ್ಟಿಲ್ಲ, ಮೇ ತಿಂಗಳ ಅಂತ್ಯದೊಳಗೆ ಈ ಬಾಕಿ ನೀರು ಬಿಡುಗಡೆಗೆ ಆದೇಶಿಸಲು ಆಗ್ರಹಿಸಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ, ಮಳೆ ಶುರುವಾಗಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಿಂದ (ಕ್ಯಾಚ್ ಮೆಂಟ್) ಪ್ರಸ್ತುತ 1,300 ರಿಂದ 1,400 ಕ್ಯೂಸೆಕ್ ನೀರು ಕಳೆದ ಕೆಲವು ದಿನಗಳಿಂದ ತ.ನಾಡಿಗೆ ಹರಿಯುತ್ತಿದೆ ಎಂದು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಟ್ಟಿತು.
ಬರಗಾಲದಿಂದ ಬರಿದಾಗಿದ್ದ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಮರಳಿದ ಜೀವಕಳೆ
ಅಲ್ಲದೆ, ರಾಜ್ಯದ ಬರ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟಿತು. ಉಭಯ ರಾಜ್ಯಗಳ ವಾದ ಆಲಿಸಿದ ಪ್ರಾಧಿಕಾರ, ಪರಿಸರ ಮತ್ತು ರಾಜ್ಯದ ಕುಡಿಯುವ ನೀರಿನ ಆದ್ಯತೆ ನೋಡಿಕೊಂಡು ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತು. ಅಲ್ಲದೆ, 2022-23ನೇ ಜಲ ವರ್ಷದ ಲೆಕ್ಕಪತ್ರವನ್ನು ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳಿಗೆ ಸೂಚನೆ ನೀಡಿತು.