ನಾಡಿನ ಬಂದೀಖಾನೆಗಳಿಗೆ ಔಷಧಗಳ ಪೂರೈಕೆಯಲ್ಲಿ ಶೇ.40ರಿಂದ 50ರಷ್ಟು ಭಾರಿ ವ್ಯತ್ಯಯ ಉಂಟಾಗಿರುವ ಪರಿಣಾಮ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ‘ಸೆರೆಹಕ್ಕಿ’ಗಳಿಗೆ ಪ್ರಾಣ ಸಂಕಟವಾಗುತ್ತಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಜೈಲುಗಳಲ್ಲಿ ಈಗ ಸಾಮಾನ್ಯ ಔಷಧಗಳೂ ಸಿಗುತ್ತಿಲ್ಲ.
ಗೋಳು ಕೇಳೋರ್ಯಾರು?
- ಈ ಮೊದಲು ಜೈಲುಗಳಿಗೆ ಔಷಧ ಪೂರೈಕೆ ಹೊಣೆ ಕಾರಾಗೃಹ ಇಲಾಖೆಗೆ ಸೇರಿತ್ತು
- ಆದರೆ 3 ವರ್ಷಗಳ ಹಿಂದೆ ಇದು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ ವರ್ಗ
- ಜನಸಾಮಾನ್ಯರ ಜೊತೆಗೆ ಕೈದಿಗಳ ಬಗ್ಗೆಯೂ ನಿಗಾ ಹೊಣೆ ಆರೋಗ್ಯ ಇಲಾಖೆಗೆ
- ಆದರೆ ಇದೀಗ ಆರೋಗ್ಯ ಇಲಾಖೆಯಿಂದ ಅಗತ್ಯ ಪ್ರಮಾಣ ಔಷಧ ಪೂರೈಕೆ ಸ್ಥಗಿತ
- ಹೀಗೆ ಪೂರೈಕೆ ಕಡಿತ ಮಾಡಿದ್ದಕ್ಕೆ ಸೂಕ್ತ ಕಾರಣ ನೀಡದ ಆರೋಗ್ಯ ಇಲಾಖೆ ಸಿಬ್ಬಂದಿ
- ಹೀಗಾಗಿ ಇದೀಗ ಕೈದಿಗಳಿಗೆ ಔಷಧ ಕೊರತೆ. ಹೀಗಾಗಿ ನೆರವಾಗುವಂತೆ ಇಲಾಖೆ ಮೊರೆ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಜು.15) ನಾಡಿನ ಬಂದೀಖಾನೆಗಳಿಗೆ ಔಷಧಗಳ ಪೂರೈಕೆಯಲ್ಲಿ ಶೇ.40ರಿಂದ 50ರಷ್ಟು ಭಾರಿ ವ್ಯತ್ಯಯ ಉಂಟಾಗಿರುವ ಪರಿಣಾಮ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ‘ಸೆರೆಹಕ್ಕಿ’ಗಳಿಗೆ ಪ್ರಾಣ ಸಂಕಟವಾಗುತ್ತಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಜೈಲುಗಳಲ್ಲಿ ಈಗ ಸಾಮಾನ್ಯ ಔಷಧಗಳೂ ಸಿಗುತ್ತಿಲ್ಲ.
ಔಷಧ ಮಾತ್ರವಲ್ಲದೆ ತುರ್ತು ಚಿಕಿತ್ಸೆ ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ಗಳು ಸಿಗದೆ ಕಾರಾಗೃಹಗಳಲ್ಲಿ ಆರೋಗ್ಯ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಈ ವಿಷಮ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೈದಿಗಳ ಜೀವ ರಕ್ಷಿಸಲು ತಕ್ಷಣವೇ ವೈದ್ಯಕೀಯ ಸೇವೆ ಸುಧಾರಿಸುವಂತೆ ಕೋರಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರಂತರವಾಗಿ ಬಂದೀಖಾನೆ ಮತ್ತು ಸುಧಾರಣಾ ಸೇವಾ ಇಲಾಖೆ ಪತ್ರಗಳನ್ನು ಬರೆದು ವಿನಂತಿಸಿದೆ. ಆದರೆ ಈ ಪತ್ರಗಳಿಗೆ ಆರೋಗ್ಯ ಇಲಾಖೆ ಸ್ಪಂದಿಸಿಲ್ಲ ಎನ್ನಲಾಗಿದೆ.
ಒಂದೆಡೆ ಕೈದಿಗಳ ಸಾವಿನ ಸಂಖ್ಯೆ ಏರಿಕೆಯಾಗಿದ್ದರೆ, ಮತ್ತೊಂದೆಡೆ ತಮ್ಮ ಸ್ವಂತ ಹಣ ಹಾಗೂ ಸರ್ಕಾರೇತರ ಸಂಸ್ಥೆಗಳ ನೆರವು ಪಡೆದು ಕೈದಿಗಳಿಗೆ ಕಾರಾಗೃಹದ ಅಧಿಕಾರಿಗಳು ಔಷಧ ಸರಬರಾಜು ಮಾಡುತ್ತಿದ್ದಾರೆ.
ಯಾಕೆ ಈ ಸಮಸ್ಯೆ?:ರಾಜ್ಯದ ಎಲ್ಲ ಜೈಲುಗಳಿಗೆ ಔಷಧ ಪೂರೈಕೆ ಹಾಗೂ ಆ್ಯಂಬುಲೆನ್ಸ್ ಸೇರಿದಂತೆ ವೈದ್ಯಕೀಯ ಸೇವೆ ನಿರ್ವಹಣೆಯ ಹೊಣೆಗಾರಿಕೆಯು ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಮೇಲೆ ಬಿದ್ದಿತ್ತು. ಆದರೆ ಮೂರು ವರ್ಷಗಳ ಹಿಂದೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಶಿಫಾರಸು ಆಧರಿಸಿ ಕೈದಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಹೊಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸರ್ಕಾರ ವಹಿಸಿತ್ತು. ವೈದ್ಯಕೀಯ ಸೇವೆ ನಿರ್ವಹಣೆಯು ಕಾರಾಗೃಹ ಅಧಿಕಾರಿಗಳಿಗೆ ಕಾರ್ಯದೊತ್ತಡ ಹೆಚ್ಚಿಸುತ್ತದೆ. ಅಲ್ಲದೆ ನಾಗರಿಕರಿಗೆ ಆರೋಗ್ಯ ಕಾಳಜಿ ತೋರುವ ಜವಾಬ್ದಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದೆ. ಅಂತೆಯೇ ಜೈಲುಗಳಲ್ಲಿ ವೈದ್ಯಕೀಯ ಚಿಕಿತ್ಸೆ ಹೊಣೆಗಾರಿಕೆಯನ್ನು ಆ ಇಲಾಖೆಗೆ ವಹಿಸಬೇಕು ಎಂದು ಸರ್ಕಾರಕ್ಕೆ ಎಸ್‌ಎಚ್‌ಆರ್‌ಸಿ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಜೈಲುಗಳ ಆಸ್ಪತ್ರೆ ಹಾಗೂ ಆ್ಯಂಬುಲೆನ್ಸ್‌ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನಕ್ಕೊಳಪಡಿಸಿ ಸರ್ಕಾರ ಆದೇಶಿಸಿತು.
ಗೃಹ ಸಚಿವರಿಗೆ ಹೇಳಿದ ಕೈದಿಗಳು
ಅಪರಾಧ ಪ್ರಕರಣಗಳಲ್ಲಿ ಬಂಧಿತ ವಿಚಾರಣಾಧೀನ ಹಾಗೂ ಸಜಾ ಕೈದಿಗಳ ಯೋಗಕ್ಷೇಮ ಸರ್ಕಾರದ ಜವಾಬ್ದಾರಿಯಾಗಿದೆ. ಕಾರಾಗೃಹಗಳ ಆಸ್ಪತ್ರೆಗಳಲ್ಲಿ ಕೈದಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಹೊರಗಿನ ಆಸ್ಪತ್ರೆಗಳಿಗೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ಪ್ರತಿ ತಿಂಗಳು ಕೈದಿಗಳಿಗೆ ಅವರು ಕಾಯಿಲೆಗಳಿಗೆ ಅನುಗುಣವಾಗಿ ಮಾತ್ರೆ ಹಾಗೂ ಔಷಧವನ್ನು ವೈದ್ಯರ ಶಿಫಾರಸು ಆಧರಿಸಿ ಅಧಿಕಾರಿಗಳು ನೀಡುತ್ತಾರೆ.
ಮಧುಮೇಹ ಹಾಗೂ ರಕ್ತದೊತ್ತಡ ಸೇರಿದಂತೆ ಎಲ್ಲ ಕಾಯಿಲೆಗಳಿಗೆ ಔಷಧ ಲಭ್ಯವಿದೆ. ಆದರೆ ಎರಡು ವರ್ಷಗಳಿಂದ ಔಷಧ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಜ್ವರ ಹಾಗೂ ನೆಗಡಿ ಮಾತ್ರೆಗಳು ಸಿಗುತ್ತಿಲ್ಲ. ಇನ್ನು ಸಕಾಲಕ್ಕೆ ಆಂಬ್ಯುಲೆನ್ಸ್‌ಗಳು ಲಭ್ಯವಾಗುತ್ತಿಲ್ಲ. ಇದರಿಂದ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರ ಬಳಿಯೇ ಕೈದಿಗಳು ಅಲವತ್ತುಕೊಂಡಿದ್ದರು. ನಮಗೆ ಔಷಧ ನೀಡಿ ಜೀವ ಉಳಿಸುವಂತೆ ಸಚಿವರಿಗೆ ಅವರು ಮೊರೆಯಿಟ್ಟಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿನ 4000 ಕೈದಿಗಳಿಗೆ ಕೇವಲ 7 ವೈದ್ಯರ ನಿಯೋಜನೆ ಮಾಡಿರುವುದು ಕೈದಿಗಳ ಕುರಿತ ಸರ್ಕಾರದ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿ ಹೊರಹೊಮ್ಮಿದೆ
ಎರಡು ಗಂಟೆ ಬಾರದ ಆಂಬ್ಯುಲೆನ್ಸ್
ಸಕಾಲಕ್ಕೆ ಆ್ಯಂಬುಲೆನ್ಸ್ ಸೇವೆ ಸಿಗದಿದ್ದುದು ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿಯೊಬ್ಬನ ಪ್ರಾಣಕ್ಕೆ ಎರವಾಯಿತು. ಕೈದಿಯ ಆರೋಗ್ಯದಲ್ಲಿ ಏರುಪೇರಾದ ಕೂಡಲೇ ಜೈಲು ಆಸ್ಪತ್ರೆಯಿಂದ ಬೇರೆಡೆಗೆ ವರ್ಗಾಯಿಸಲು ಎರಡು ಗಂಟೆ ಕಾದರೂ ಆ್ಯಂಬುಲೆನ್ಸ್ ಸಿಗಲಿಲ್ಲ. ಕೊನೆಗೆ ಬೇರೆಡೆಯಿಂದ ಆ್ಯಂಬುಲೆನ್ಸ್ ತರಿಸಿ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆ ಸಜಾ ಕೈದಿ ಕೊನೆಯುಸಿರೆಳೆದ ಎಂದು ಮೂಲಗಳು ಹೇಳಿವೆ.
ಸಾವಿನ ಪ್ರಮಾಣ ಏರಿಕೆ :
ಅಸಮರ್ಪಕ ಔಷಧ ಪೂರೈಕೆ ಹಿನ್ನೆಲೆಯಲ್ಲಿ ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳ ಸಾವಿನ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ 126 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 2024ರಲ್ಲಿ 56 ಹಾಗೂ 2025ರಲ್ಲಿ 70 ಕೈದಿಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಜೈಲುಗಳಲ್ಲಿ ಔಷಧ ಕೊರತೆ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೂ ತರಲಾಗಿದೆ. ಕಾರಾಗೃಹ ಅಧಿಕಾರಿಗಳು ಮಾನವೀಯತೆಯಿಂದ ಸ್ವಂತ ಹಣದಲ್ಲಿ ಕೆಲವರಿಗೆ ಔಷಧ ಪೂರೈಸಿದ್ದಾರೆ. ಇದಕ್ಕೆ ಕೆಲವು ಎನ್‌ಜಿಓಗಳು ಸಹ ನೆರವಾಗಿವೆ.
-ಕಾರಾಗೃಹದ ಅಧಿಕಾರಿಗಳು


