Asianet Suvarna News Asianet Suvarna News

ಪೋಕ್ಸೋ ಕಾಯ್ದೆಗಿಂತ ವೈಯಕ್ತಿಕ ಕಾನೂನು ಮೇಲಲ್ಲ: ಹೈಕೋರ್ಟ್‌

15ಕ್ಕೇ ಮುಸ್ಲಿಂ ಬಾಲಕಿ ವಿವಾಹಕ್ಕೆ ಅರ್ಹಳಲ್ಲ, ಪೋಕ್ಸೋ ಕಾಯ್ದೆ ಮೀರಲು ಯಾವ ವೈಯಕ್ತಿಕ ಕಾಯ್ದೆಗೂ ಅವಕಾಶವಿಲ್ಲ: ಹೈಕೋರ್ಟ್‌

No Personal Act Can Override the POCSO Act Says High Court of Karnataka grg
Author
First Published Nov 1, 2022, 6:44 AM IST

ಬೆಂಗಳೂರು(ನ.01): ಮೊಹಮದೀಯ ಕಾನೂನು ಪ್ರಕಾರ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬಿದರೆ ಪ್ರೌಢಾವಸ್ಥೆ ಎಂದು ಪರಿಗಣಿಸಿ ಮದುವೆ ಮಾಡಬಹುದು ಎಂಬ ವಾದವನ್ನು ಒಪ್ಪದ ಹೈಕೋರ್ಟ್‌, ವಿಶೇಷ ಕಾಯ್ದೆಯಾದ ‘ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ’ ಯನ್ನು (ಪೋಕ್ಸೋ) ಯಾವುದೇ ‘ವೈಯಕ್ತಿಕ ಕಾನೂನು’ ಅತಿಕ್ರಮಿಸಲು (ಓವರ್‌ ರೈಡ್‌) ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

17 ವರ್ಷದ ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿಯಾಗಿಸಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಕೆ.ಆರ್‌.ಪುರದ ಅಲೀಂ ಪಾಷಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕ್‌ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿದ್ಯುತ್‌ ಸ್ಪರ್ಶದಿಂದ ಆನೆ ಸಾವು: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಮೊಹಮದೀಯ ಕಾನೂನಿನಲ್ಲಿ ಪ್ರೌಢಾವಸ್ಥೆಯನ್ನು ಮದುವೆಗೆ ಪರಿಗಣಿಸಲಾಗುತ್ತದೆ. ಸಾಮಾನ್ಯ ಪ್ರೌಢಾವಸ್ಥೆಯ ವಯಸ್ಸು 15 ವರ್ಷ ಆಗಿದೆ. ಹಾಗಾಗಿ, ಈ ಪ್ರಕರಣದಲ್ಲಿ ಸಂತ್ರಸ್ತೆಗೆ ವಯಸ್ಸು 17 ವರ್ಷ ಆಗಿದೆ. ಅರ್ಜಿದಾರ ಆಕೆಯನ್ನು ಮದುವೆಯಾಗಿದ್ದಾನೆ. ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದ ಪರಿಣಾಮ ಸಂತ್ರಸ್ತೆಯ ಗರ್ಭಿಣಿಯಾಗಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್‌ 9 ಮತ್ತು 10 ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ವಾದವನ್ನು ಒಪ್ಪದ ನ್ಯಾಯಪೀಠ, ಪೋಕ್ಸೋ ವಿಶೇಷ ಕಾಯ್ದೆಯಾಗಿದೆ. ಈ ಕಾಯ್ದೆಯ ಪ್ರಕಾರ ಲೈಂಗಿಕ ಚಟುವಟಿಕೆ ತೊಡಗಿಸಿಕೊಳ್ಳಲು ಬಾಲಕಿಗೆ 18 ವರ್ಷ ಆಗಿರಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ಜಾಮೀನಿಗೆ ಅರ್ಹ:

ಅಲ್ಲದೆ, ಹೀಗಿದ್ದರೂ ಪ್ರಕರಣದ ಸಂತ್ರಸ್ತೆಗೆ 17 ವರ್ಷವಾಗಿದ್ದು, ವಿವಾಹ ವಿಚಾರವನ್ನು ಅರ್ಥಮಾಡಿಕೊಳ್ಳಲು ಸಮರ್ಥಳಾಗಿದ್ದಾಳೆ. ಮದುವೆಗೆ ಆಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ಸಾಕ್ಷ್ಯವಿಲ್ಲ. ಅರ್ಜಿದಾರ ಈಗಾಗಲೇ ಸಂತ್ರಸ್ತೆಯ ಗಂಡ ಆಗಿದ್ದಾನೆ. ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಆತನೇ ವಿಚಾರಣಾ ನ್ಯಾಯಾಲಯಕ್ಕೆ ನೀಡಿದ್ದಾನೆ. ಹಾಗಾಗಿ, ಯಾವುದೇ ಸಾಕ್ಷ್ಯ ನಾಶಪಡಿಸುವಂತಹ ಸನ್ನಿವೇಶ ಉದ್ಭವಿಸುವುದಿಲ್ಲ. ಈಗಾಗಲೇ ಮದುವೆಯಾಗಿರುವುದರಿಂದ ಅರ್ಜಿದಾರನನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಯಾವುದೇ ಅಡಚಣೆ ಇಲ್ಲ. ಸಂತ್ರಸ್ತೆಯು ಗರ್ಭಿಣಿಯಾಗಿದ್ದು, ಆಕೆಯನ್ನು ಅರ್ಜಿದಾರ ಆರೈಕೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿದೆ.

ಅರ್ಜಿದಾರ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಒದಗಿಸಬೇಕು. ಅಷ್ಟು ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯ ನಾಶ ಪಡಿಸಬಾರದು. ಪೂರ್ವಾನುಮತಿಯಿಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಬಿಟ್ಟು ತೆರಳಬಾರದು. ಪ್ರಕರಣದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಆದೇಶಿಸಿದೆ.

16ರ ಬಾಲೆ ಮೇಲೆ ಅತ್ಯಾಚಾರ: ಆರೋಪಿಗೆ ಜಾಮೀನು ನಕಾರ

ಬೆಂಗಳೂರು: ಮುಸ್ಲಿಂ ಸಮುದಾಯದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯೊಬ್ಬನಿಗೆ ಹೈಕೋರ್ಟ್‌ ಇದೇ ವೇಳೆ ಜಾಮೀನು ನಿರಾಕರಿಸಿದ್ದು, ವೈಯಕ್ತಿಕ ಕಾನೂನಿನ ಸೋಗಿನಲ್ಲಿ ಜಾಮೀನು ಕೇಳಲು ಸಾಧ್ಯವಿಲ್ಲ ಎಂದು ನುಡಿದಿದೆ.

ಭ್ರೂಣಲಿಂಗ ಪತ್ತೆ ಕೇಂದ್ರಗಳ ಮೇಲೆ ದಾಳಿಗೆ ಹೈಕೋರ್ಟ್‌ ಆದೇಶ

ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಚಿಕ್ಕಮಗಳೂರಿನ ಫರ್ದೀನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪೋಕ್ಸೋ ಮತ್ತು ಭಾರತೀಯ ದಂಡ ಸಂಹಿತೆ ವಸ್ತುನಿಷ್ಠ ಕಾಯ್ದೆಗಳಾಗಿದೆ. ವೈಯಕ್ತಿಕ ಕಾನೂನು ಮುಂದಿಟ್ಟುಕೊಂಡು ಜಾಮೀನು ಕೇಳಲಾಗದು ಎಂದು ಹೇಳಿದೆ.

ಅರ್ಜಿದಾರ ಪರ ವಕೀಲ, ಪ್ರಕರಣದ ಸಂತ್ರಸ್ತೆಗೆ 16 ವರ್ಷ ತುಂಬಿದೆ. ಮಹಮದೀಯ ಕಾನೂನಿನಲ್ಲಿ 15 ವರ್ಷವನ್ನು ಪ್ರೌಢಾವಸ್ಥೆಯಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ, ಪೋಕ್ಸೋ ಕಾಯ್ದೆ ಅನ್ವಯವಾಗುವುದಿಲ್ಲ. ಅರ್ಜಿದಾರನಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.
 

Follow Us:
Download App:
  • android
  • ios