ಭ್ರೂಣಲಿಂಗ ಪತ್ತೆ ಕೇಂದ್ರಗಳ ಮೇಲೆ ದಾಳಿಗೆ ಹೈಕೋರ್ಟ್ ಆದೇಶ
ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ಮಾಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಮೈಸೂರು ಮತ್ತು ಮಂಡ್ಯ ಜಿಲ್ಲೆ ಮೂರು ಪಾಲಿ ಕ್ಲಿನಿಕ್‌ಗಳು ಮತ್ತು ಡಯೋಗ್ನೋಸ್ಟಿಕ್ ಕೇಂದ್ರಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು (ಅ.31): ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ಮಾಡುವ ಪಾಲಿಕ್ಲಿನಿಕ್‌ಗಳು ಅಥವಾ ಡಯೋಗ್ನೋಸ್ಟಿಕ್ ಕೇಂದ್ರಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಅವುಗಳ ವಿರುದ್ಧ ಕ್ಷಿಪ್ರ ಕ್ರಮ ಜರುಗಿಸಲು, ತಪಾಸಣೆ ಮತ್ತು ಮೇಲ್ವಿಚಾರಣೆ ನಡೆಸುವುದಕ್ಕೆ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆ ನಿಷೇಧ)-1994 ಕಾಯ್ದೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಕ್ಷಮ ಪ್ರಾಧಿಕಾರ ಹಾಗೂ ಸಲಹಾ ಸಮಿತಿಗಳನ್ನು ನೇಮಿಸಿ ಅಗತ್ಯ ಅಧಿಕಾರ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ಮಾಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಮೈಸೂರು ಮತ್ತು ಮಂಡ್ಯ ಜಿಲ್ಲೆ ಮೂರು ಪಾಲಿ ಕ್ಲಿನಿಕ್‌ಗಳು ಮತ್ತು ಡಯೋಗ್ನೋಸ್ಟಿಕ್ ಕೇಂದ್ರಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
11 ಲಕ್ಷಕ್ಕೆ ಒಪ್ಪದ ವಿಮಾ ಕಂಪನಿ ಈಗ 44 ಲಕ್ಷ ಕೊಡಬೇಕು: ಹೈಕೋರ್ಟ್ ಆದೇಶ
ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತವು ಅತ್ಯಂತ ಅಸಹ್ಯಕರ ಕೃತ್ಯ. ಈ ಸಮಸ್ಯೆ ಸದ್ಯ ಜ್ವಲಂತವಾಗಿದೆ. ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ಮಾಡುವ ಪಾಲಿಕ್ಲಿನಿಕ್‌ಗಳು ಅಥವಾ ಡಯೋಗ್ನೋಸ್ಟಿಕ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಇವು ಮಹಾನಗರವಲ್ಲದೆ ನಗರ ಪ್ರದೇಶಗಳಿಗೂ ವ್ಯಾಪಿಸಿದ್ದು, ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆ ನಿಷೇಧ)-1994 ಕಾಯ್ದೆಯ ನಿಯಮಗಳಿಗೆ ವಿರುದ್ಧವಾದ ಕೃತ್ಯದಲ್ಲಿ ತೊಡಗಿವೆ. ಅವುಗಳ ವಿರುದ್ಧ ಯಾವುದೇ ವಿಳಂಬವಿಲ್ಲದೆ ಸರ್ಕಾರ ಕ್ಷಿಪ್ತ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ಆರೋಪ ಸಂಬಂಧ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ದೂರು ದಾಖಲಿಸಿಲ್ಲ. ಕೇಂದ್ರಗಳ ಶೋಧನೆ ಮತ್ತು ಜಪ್ತಿ ಮಾಡಿಲ್ಲ ಎಂಬ ತಾಂತ್ರಿಕ ಕಾರಣ ನೀಡಿ ತಮ್ಮ ವಿರುದ್ಧ ದೂರುಗಳನ್ನು ರದ್ದುಪಡಿಸುವಂತೆ ಈ ಅಕ್ರಮದಲ್ಲಿ ಪಾಲ್ಗೊಂಡಿರುವ ಕ್ಲಿನಿಕ್ ಹಾಗೂ ಡಯೋಗ್ನೋಸ್ಟಿಕ್‌ಗಳು ನ್ಯಾಯಾಲಯವನ್ನು ಕೋರುತ್ತಿವೆ. ಆದರೆ, ತಾಂತ್ರಿಕ ಕಾರಣಗಳಿಂದ ಆರೋಪಿಗಳು ಕಾನೂನು ಕ್ರಮದಿಂದ ಮುಕ್ತವಾಗುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಕ್ಲಿನಿಕ್ ಮತ್ತು ಡಯೋಗ್ನೋಸ್ಟಿಕ್‌ಗಳನ್ನು ಶೋಧನೆ ನಡೆಸಲು, ಜಪ್ತಿ ಮಾಡಲು ಮತ್ತು ಕ್ರಿಮಿನಲ್ ದೂರು ದಾಖಲಿಸಲು ಅಧಿಕಾರ ನೀಡುವ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯ ಸಕ್ಷಮ ಪ್ರಾಧಿಕಾರ, ರಾಜ್ಯ ಸಲಹಾ ಸಮಿತಿ ಮತ್ತು ರಾಜ್ಯ ತಪಸಾಣಾ ಹಾಗೂ ಮೇಲ್ವಿಚಾರಣಾ ಸಮಿತಿಗಳನ್ನು ಅಧಿಸೂಚಿಸಿ ನೋಟಿಫಿಕೇಷನ್ ಹೊರಡಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು?: ಅರ್ಜಿದಾರ ಕ್ಲಿನಿಕ್ ಮತ್ತು ಡಯೋಗ್ನೋಸ್ಟಿಕ್‌ಗಳ ವಿರುದ್ಧ 2021ರ ಅಕ್ಟೋಬರ್‌ನಲ್ಲಿ ದೂರು ಬಂದಿದ್ದವು. ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆ ನಿಷೇಧ) -1994 ಕಾಯ್ದೆಯಡಿಯ ರಾಜ್ಯ ಸಕ್ಷಮ ಪ್ರಾಧಿಕಾರದ ನೋಡೆಲ್ ಅಧಿಕಾರಿಯು ಈ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ್ದರು. ಆ ವೇಳೆ ಹಲವು ಗರ್ಭಪಾತ ಪ್ರಕರಣಗಳು ನಡೆದಿರುವುದನ್ನು ಗಮನಿಸಿ ದೂರು ದಾಖಲಿಸಿದ್ದರು. ಸ್ಥಳೀಯ ಮ್ಯಾಜಿಸ್ಪ್ರೇಟ್ ಕೋರ್ಟ್‌ಗಳು ಕಾಗ್ನಿಜೆನ್ಸ್ ತೆಗೆದುಕೊಂಡಿದ್ದವು. ಇದರಿಂದ ತಮ್ಮ ವಿರುದ್ಧದ ದೂರುಗಳನ್ನು ರದ್ದುಪಡಿಸುವಂತೆ ಕೋರಿ ಕ್ಲಿನಿಕ್‌ಗಳು ಹಾಗೂ ಅವುಗಳ ಮಾಲೀಕರು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಅಪಘಾತದಲ್ಲಿ ಸಾಕು ಪ್ರಾಣಿ ಸಾವು ಐಪಿಸಿ ಅಪರಾಧವಲ್ಲ: ಹೈಕೋರ್ಟ್
ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್, ದೂರಿನ ಆರೋಪಗಳು ಬಹಳ ಗಂಭೀರವಾಗಿವೆ. ಹೆಣ್ಣು ಮಗು ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸಿರುವುದು ತುಂಬಾ ಅಸಹ್ಯಕರ ಎನಿಸುತ್ತದೆ. ಇದು ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತವನ್ನು ತಡೆಯಲು ಉದ್ದೇಶಿಸಿ ಜಾರಿಗೊಳಿಸಿರುವ ಕಾಯ್ದೆಯ ಧ್ಯೇಯೋದ್ದೇಶವನ್ನೇ ವಿಫಲಗೊಳಿಸುವಂತಿದೆ. ಕಾಯ್ದೆಯ ನಿಯಮ ಉಲ್ಲಂಘಿಸಿದವರ ವಿರುದ್ಧ ಹಲವು ನ್ಯಾಯಾಲಯಗಳು ಈಗಾಗಲೇ ಕಠಿಣ ನಿಲುವು ಕೈಗೊಂಡಿವೆ. ದೂರುದಾರರು ಸಕ್ಷಮ ಪ್ರಾಧಿಕಾರ ಅಧಿಕಾರಿಯಲ್ಲ ಎಂಬ ಕಾರಣಕ್ಕೆ ದೂರು ಅಮಾನ್ಯವಾಗುತ್ತದೆ ಎಂಬ ವಾದ ಒಪ್ಪಲಾಗದು ಎಂದು ಅಭಿಪ್ರಾಯಪಟ್ಟಿದೆ.