Asianet Suvarna News Asianet Suvarna News

ಗೃಹ ಮಂಡಳಿಯಿಂದ ಇನ್ನು ಲೇ ಔಟ್‌ ಇಲ್ಲ, ರೈತರ ಭೂಸ್ವಾದೀನ ಇಲ್ಲ

  • ಗೃಹ ಮಂಡಳಿಯಿಂದ ಇನ್ನು ಲೇ ಔಟ್‌ ಇಲ್ಲ
  •  ಭೂಸ್ವಾಧೀನ, ಮನೆ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಮಾಡಲ್ಲ
  • ಭೂಸ್ವಾಧೀನ ಸಮಸ್ಯೆ ಹಿನ್ನೆಲೆಯಲ್ಲಿ ನಿರ್ಧಾರ: ಸೋಮಣ್ಣ
No  land acquisition for KBH purpose  says Minister V Somanna gow
Author
Bengaluru, First Published Jul 8, 2022, 6:18 AM IST

ಬೆಂಗಳೂರು (ಜು.8): ರಾಜ್ಯ ಸರ್ಕಾರವು ಇನ್ನು ಮುಂದೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ಕರ್ನಾಟಕ ಗೃಹ ಮಂಡಳಿಯಿಂದ ಭೂಸ್ವಾಧೀನ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡುವುದಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಇದೇ ವೇಳೆ ಪ್ರಸ್ತುತ ಕೊನೆಯ ಹಂತದಲ್ಲಿರುವ ಬಡಾವಣೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಿ 6 ಸಾವಿರಕ್ಕೂ ಹೆಚ್ಚು ಜನರಿಗೆ ನಿವೇಶನ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ನಿವೇಶನ ಹಾಗೂ ಮನೆ ನೀಡಲು ಗೃಹ ಮಂಡಳಿಯ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಸದಿರಲು ತೀರ್ಮಾನಿಸಲಾಗಿದೆ. ಭೂಸ್ವಾಧೀನ ಕಾರ್ಯದಲ್ಲಿ ಉಂಟಾಗುತ್ತಿರುವ ವಿಳಂಬ ಮತ್ತು ಕಿರಿಕಿರಿಯನ್ನು ಭರಿಸಿಕೊಳ್ಳುವುದು ಕಷ್ಟ. ಭೂ ಸ್ವಾಧೀನ ಸಮಸ್ಯೆಯಿಂದ 6 ರಿಂದ 20 ವರ್ಷವಾದರೂ ಯೋಜನೆಗಳು ನ್ಯಾಯಾಲಯದಲ್ಲೇ ಕೊಳೆಯುವಂತಾಗಿದೆ. ಹೀಗಾಗಿ ಜನರಿಗೆ ನಿವೇಶನ ಹಂಚಿಕೆ ಮಾಡಲು, ಮನೆ ನಿರ್ಮಿಸಿಕೊಡಲು ಸರ್ಕಾರ ತಯಾರಿಲ್ಲ ಎಂದು ತಿಳಿಸಿದರು.

ಮತ್ತೆ ಕೊರೋನಾ ಸ್ಫೋಟ, ಭಾರತದಲ್ಲಿ 18 ಸಾವಿರ ಕೇಸ್, 35 ಸಾವು!

ಇದೇ ಕಾರಣದಿಂದ ಕಳೆದ ಹಲವು ಕಾಲದಿಂದ ಜನರಿಗೆ ಮನೆ, ನಿವೇಶನ ನೀಡುವ ಕೆಲಸವಾಗಿರಲಿಲ್ಲ. ಹೀಗಿದ್ದರೂ ನಾನು ಅಧಿಕಾರಕ್ಕೆ ಬಂದ ಮೇಲೆ 65 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ರೈತರನ್ನು ವಿಶ್ವಾಸಕ್ಕೆ ಪಡೆದು ಯೋಜನೆ ಪೂರ್ಣಗೊಳಿಸುತ್ತಿದ್ದೇವೆ. ಇದರಡಿ ಜನರಿಗೆ ಅಂತಿಮ ಕಂತಿನಲ್ಲಿ ಆರು ಸಾವಿರ ಮನೆಗಳನ್ನು ಒದಗಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಮೈಸೂರಿನ ಕೆ.ಆರ್‌.ಎಸ್‌. ನಿಸರ್ಗ ಬಡಾವಣೆಯಲ್ಲಿ 523 ನಿವೇಶನಗಳನ್ನು ನಿರ್ಮಿಸಲಾಗಿದ್ದು, ಇದೇ ರೀತಿ ಬಳ್ಳಾರಿ, ಹರಿಹರ, ವಿಜಯಪುರ, ಗದಗ, ಹುನಗುಂದ ಸೇರಿದಂತೆ ರಾಜ್ಯದ ವಿವಿಧೆಡೆ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಒಟ್ಟು 6015 ನಿವೇಶನ ಮತ್ತು 20 ಮನೆಗಳನ್ನು ಜನರಿಗೆ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ

ರೈತರೇ ಮುಂದೆ ಬಂದು ಜಾಗ ನೀಡಿದರೆ ಲೇಔಟ್‌: ರೈತರು ಸಹಭಾಗಿತ್ವ ನೀಡಿ 50ಕ್ಕೂ ಹೆಚ್ಚು ಎಕರೆ ಭೂಮಿ ಒದಗಿಸಲು ಸಜ್ಜಾಗಿದ್ದರೆ ಅಂತಹವರ ಜತೆ ಒಪ್ಪಂದ ಮಾಡಿಕೊಂಡು ನಿವೇಶನಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು. ಜಿಲ್ಲಾ ಮಟ್ಟದಲ್ಲಿ ಈ ಸಹಭಾಗಿತ್ವದಡಿ ಸರ್ಕಾರಕ್ಕೆ ಶೇಕಡಾ ಐವತ್ತರಷ್ಟುಪಾಲು ನೀಡಬೇಕು, ಉಳಿದ ಐವತ್ತರಷ್ಟುಭೂಮಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ಕೊಡುತ್ತೇವೆ. ತಾಲ್ಲೂಕು ಮಟ್ಟದಲ್ಲಿ ಶೇ.60ರಷ್ಟುಅಭಿವೃದ್ಧಿಪಡಿಸಿದ ಜಾಗವನ್ನು ಗೃಹ ಮಂಡಳಿ ಹಾಗೂ ಶೇ.40ರಷ್ಟುಭೂಮಿಯನ್ನು ರೈತರಿಗೆ ನೀಡಲಾಗುವುದು ಎಂದು ನುಡಿದರು.

ಬಡವರ ವಸತಿ ಯೋಜನೆಗಳಿಗೆ ಸಮಸ್ಯೆಯಿಲ್ಲ: ಸರ್ಕಾರದ ಈ ನಿರ್ಧಾರದಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸರ್ಕಾರದಿಂದ ವಸತಿ ನಿರ್ಮಾಣ ಮಾಡಿಕೊಡುವ ಪ್ರಧಾನಮಂತ್ರಿ ಆವಾಸ್‌ ಯೋಜನೆ, ಡಾ.ಬಿ.ಆರ್‌. ಅಂಬೇಡ್ಕರ್‌ ನಿವಾಸ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ದೇವರಾಜ್‌ ಅರಸು ವಸತಿ ಯೋಜನೆಗಳಿಗೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ವಿ.ಸೋಮಣ್ಣ ಹೇಳಿದ್ದಾರೆ.

ಏಕೆಂದರೆ ಈ ಯೋಜನೆಗಳ ಸ್ವರೂಪದ ಪ್ರಕಾರ, ನಗರ ಭಾಗದಲ್ಲಿ ಹಾಲಿ ನಿವೇಶನ ಹೊಂದಿರುವವರಿಗೆ ಮಾತ್ರ ಮನೆ ನಿರ್ಮಿಸಿಕೊಡುತ್ತೇವೆ ಅಥವಾ ಹಣ (ಘಟಕ ವೆಚ್ಚ) ನೀಡುತ್ತೇವೆ. ಗ್ರಾಮೀಣ ಭಾಗದಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ನೀಡುತ್ತೇವೆಯಾದರೂ ಇದಕ್ಕೆ ನಮ್ಮ ಬಳಿ 5 ಸಾವಿರ ಎಕರೆ ಜಮೀನು ಲಭ್ಯವಿದೆ. ಇನ್ನು ಮುಂದೆಯೂ ಸರ್ಕಾರಿ ಜಾಗ, ಗೋಮಾಳದಂತಹ ಜಾಗವನ್ನು ಬಳಸಿಕೊಂಡು ಮನೆಗಳನ್ನು ನಿರ್ಮಿಸಿಕೊಡಬಹುದು. ಹೀಗಾಗಿ ಭೂಮಿಯ ಕೊರತೆ ಉಂಟಾಗುವುದಿಲ್ಲ ಎಂದು ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದರು.

Follow Us:
Download App:
  • android
  • ios