ಕರ್ನಾಟಕದಲ್ಲಿ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ 14 ವರ್ಷದೊಳಗಿನ 10.12 ಲಕ್ಷ ಮಕ್ಕಳನ್ನು ವಾಪಸ್‌ ಕರೆತರುವ ನಿಟ್ಟಿನಲ್ಲಿ ಹೈಕೋರ್ಟ್‌ ರಚಿಸಿರುವ ಉನ್ನತಾಧಿಕಾರ ಸಮಿತಿ ಜುಲೈ 16 ರಂದು ಸಭೆ ನಡೆಸಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಲು ಹೈಕೋರ್ಟ್‌ ನಿರ್ದೇಶಿಸಿದೆ.

10 Lakh Children Out Of School In Karnataka Survey Report Submitted To High Court gvd

ಬೆಂಗಳೂರು (ಜು.07): ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ 14 ವರ್ಷದೊಳಗಿನ 10.12 ಲಕ್ಷ ಮಕ್ಕಳನ್ನು ವಾಪಸ್‌ ಕರೆತರುವ ನಿಟ್ಟಿನಲ್ಲಿ ಹೈಕೋರ್ಟ್‌ ರಚಿಸಿರುವ ಉನ್ನತಾಧಿಕಾರ ಸಮಿತಿ ಜುಲೈ 16 ರಂದು ಸಭೆ ನಡೆಸಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಲು ಹೈಕೋರ್ಟ್‌ ನಿರ್ದೇಶಿಸಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ವಿಚಾರವಾಗಿ 2013ರಲ್ಲಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಲೋಕ್‌ ಆರಾಧೆ ಹಾಗೂ ನ್ಯಾ. ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯದಲ್ಲಿ 14 ವರ್ಷದೊಳಗಿನ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗುಳಿದಿದ್ದಾರೆ ಎಂಬುದಾಗಿ ಅಮೈಕಸ್‌ ಕ್ಯೂರಿ(ಪ್ರಕರಣದಲ್ಲಿ ನೆರವುಗಾರ) ವರದಿ ಸಲ್ಲಿಸಿದರು. ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವಾಪಸ್‌ ಕರೆತರುವುದಕ್ಕೆ ಇರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಶಿಕ್ಷಕನ ವಿರುದ್ಧ 14 ಲೈಂಗಿಕ ಕಿರುಕುಳ ಕೇಸ್‌ ವಜಾಕ್ಕೆ ಹೈಕೋರ್ಟ್‌ ನಕಾರ

ವರದಿಯ ಪ್ರಮುಖ ಅಂಶಗಳು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಭಾಗದಲ್ಲಿ ಒಟ್ಟಾರೆ 6-14 ವರ್ಷದ 15,338 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದೇ ವಯೋಮಾನದ 10 ಸಾವಿರ ಮಕ್ಕಳು ಶಾಲೆಗಳಲ್ಲಿ ಪ್ರವೇಶವನ್ನೇ ಪಡೆದಿಲ್ಲ. 3 ವರ್ಷದೊಳಗಿನ 4.54 ಲಕ್ಷ ಮಕ್ಕಳು ಹಾಗೂ 4ರಿಂದ 6 ವರ್ಷದ 5.33 ಲಕ್ಷ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿಲ್ಲ. ಒಟ್ಟಾರೆ 10.12 ಲಕ್ಷ ಮಕ್ಕಳು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಂದ ಹೊರಗುಳಿದಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ನಗರ ಪ್ರದೇಶ: ಒಟ್ಟು 33.42 ಲಕ್ಷ ಕುಟುಂಬಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿ 25.88 ಲಕ್ಷ ಮನೆಗಳಲ್ಲಿ ಪಡಿತರ ಚೀಟಿ ಹೊಂದಿದ್ದಾರೆ. ಇನ್ನುಳಿದ 7.55 ಲಕ್ಷ ಕುಟುಂಬಗಳಲ್ಲಿ ಪಡಿತರ ಚೀಟಿ ಇಲ್ಲ. ಈ ಕುಟುಂಬಗಳ ಪೈಕಿ 18 ವರ್ಷದೊಳಗಿನ 13.73 ಲಕ್ಷ ಮಕ್ಕಳಿದ್ದು, ಮೂರು ವರ್ಷದೊಳಗಿನ 87,921 ಮಕ್ಕಳು ಅಂಗನವಾಡಿಗಳಲ್ಲಿ ನೋಂದಣಿ ಮಾಡಿಕೊಂಡಿಲ್ಲ. 4 ರಿಂದ 6 ವರ್ಷದೊಳಗಿನ ಸುಮಾರು 1.23 ಲಕ್ಷ ಮಕ್ಕಳು ನೋಂದಾಯಿಸಿಕೊಂಡಿಲ್ಲ. 6-18 ವರ್ಷದೊಳಗಿನ 10.62 ಲಕ್ಷ ಮಕ್ಕಳು ಶಾಲೆಗೆ ದಾಖಲಾಗಿದ್ದು, 2,798 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 3,225 ಮಕ್ಕಳು ಶಾಲೆಯಲ್ಲಿ ದಾಖಲಾತಿಯೇ ಆಗಿಲ್ಲ.

ಗ್ರಾಮೀಣ ಪ್ರದೇಶ: ಗ್ರಾಮೀಣ ಭಾಗಗಳಲ್ಲಿ 84.02 ಲಕ್ಷ ಕುಟುಂಬಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 18 ವರ್ಷದೊಳಗಿನೆ 35.24 ಲಕ್ಷ ಮಕ್ಕಳನ್ನು ಗುರುತಿಸಲಾಗಿದೆ. ಈ ಪೈಕಿ 3 ವರ್ಷದೊಳಗಿನ 93 ಸಾವಿರ ಮಕ್ಕಳು ಅಂಗನವಾಡಿಗೆ ನೋಂದಣಿ ಮಾಡಿಕೊಂಡಿಲ್ಲ. 4-6 ವರ್ಷದೊಳಗಿನ 1.07 ಲಕ್ಷ ಮಕ್ಕಳು ನೋಂದಣಿ ಮಾಡಿಕೊಂಡಿಲ್ಲ. 6-18 ವರ್ಷದೊಳಗಿನ 27.11 ಲಕ್ಷ ಮಕ್ಕಳಿದ್ದು, ಅವರುಗಳಲ್ಲಿ 10,378 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 5,248 ಮಕ್ಕಳು ದಾಖಲಾತಿ ಪಡೆದಿಲ್ಲ.

ಉಗ್ರ ಸಂಘಟನೆ ಸದಸ್ಯನಲ್ಲದಿದ್ದರೂ ಭಯೋತ್ಪಾದಕ ಕೃತ್ಯಕ್ಕಾಗಿ ವ್ಯಕ್ತಿ ವಿಚಾರಣೆ ಮಾಡಬಹುದು : ಹೈಕೋರ್ಟ್‌

ಬಿಬಿಎಂಪಿ: ಬಿಬಿಎಂಪಿ ವ್ಯಾಪ್ತಿಯ 26.57 ಲಕ್ಷ ಕುಟುಂಬಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇವುಗಳ ಪೈಕಿ 2.28 ಲಕ್ಷ ಕುಟುಂಬಗಳು ಮಾತ್ರ ಪಡಿತರ ಚೀಟಿ ಹೊಂದಿದ್ದು, 24.28 ಲಕ್ಷ ಕುಟುಂಬಗಳಲ್ಲಿ ಪಡಿತರ ಚೀಟಿಯೇ ಇಲ್ಲ. 18 ವರ್ಷದೊಳಗಿನ 17.70 ಮಕ್ಕಳಿದ್ದಾರೆ. ಇವರಲ್ಲಿ 2.73 ಲಕ್ಷ ಮಕ್ಕಳು ಮೂರು ವರ್ಷದೊಳಗಿನವರು ಅಂಗನವಾಡಿಗಳಲ್ಲಿ ನೋಂದಣಿ ಮಾಡಿಕೊಂಡಿಲ್ಲ. 4-6 ವರ್ಷದ 3.02 ಲಕ್ಷ ಮಕ್ಕಳು ಅಂಗನವಾಡಿಗಳಲ್ಲಿ ನೋಂದಣಿಯಾಗಿಲ್ಲ. ಅಲ್ಲದೆ, 6-18 ವರ್ಷದ 11.83 ಲಕ್ಷ ಮಕ್ಕಳು ದಾಖಲಾತಿ ಪಡೆದಿಲ್ಲ. 6-14 ವರ್ಷದೊಳಗಿನ 2,162 ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದು, 1,545 ಮಕ್ಕಳು ದಾಖಲಾತಿ ಪಡೆದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios