ಬಿಡದಿ ಟೌನ್‌ಶಿಪ್ ಯೋಜನೆಗೂ ಹೆಚ್‌ಡಿ ಕುಮಾರಸ್ವಾಮಿಗೂ ಯಾವುದೇ ಸಂಬಂಧ ಇಲ್ಲ. ಅವರು ಕ್ಷೇತ್ರ ಬಿಟ್ಟಿದ್ದಾರೆ ಅವರೊಂದಿಗೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾನು ಕರೆದಾಗ ಅವರು ಬರಲಿಲ್ಲ. ಈಗ ಅವರು ಕರೆದಾಗ ನಾನು ಹೋಗುವುದು ಸರೀನಾ ಎಂದು ಸಿಎಂ ಟಾಂಗ್..
ರಾಮನಗರ (ಜು.2): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಕ್ಷೇತ್ರ ಬಿಟ್ಟಿದ್ದಾಯಿತು. ಅವರಿಗೂ ಆ ಕ್ಷೇತ್ರಕ್ಕೂ ಸಂಬಂಧ ಇಲ್ಲ. ಆದರೂ ಬಿಡದಿ ಟೌನ್‌ಶಿಪ್ ಯೋಜನೆ(Bidadi township project) ಸಂಬಂಧ ಮಾಧ್ಯಮಗಳ (ಟಿವಿ) ಎದುರು ಚರ್ಚೆಗೆ ಕರೆದಾಗಲು ಬರಲಿಲ್ಲ. ವಿಧಾನಸೌಧಕ್ಕೆ ಆಹ್ವಾನಿಸಿದರೂ ಅವರಿಗೆ ಬರಲು ಆಗಲಿಲ್ಲ. ಇನ್ನು ಅವರೊಂದಿಗೆ ಚರ್ಚೆ ಅವಶ್ಯಕತೆ ಇಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್(DK Shivakumar) ತಿರುಗೇಟು ನೀಡಿದರು.
ಬಿಡದಿ ಟೌನ್‌ಶಿಪ್‌ಗೂ ಕುಮಾರಸ್ವಾಮಿಗೂ ಸಂಬಂಧ ಇಲ್ಲ:
ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್, ಬಿಡದಿ ಟೌನ್‌ಶಿಪ್‌ಗೂ ಕುಮಾರಸ್ವಾಮಿಗೂ ಸಂಬಂಧ ಇಲ್ಲ. ಕುಮಾರಸ್ವಾಮಿ ಅವರು ಆ ಕ್ಷೇತ್ರ ಬಿಟ್ಟಿದ್ದಾಯಿತು. ಅವರಿಗೂ ಕ್ಷೇತ್ರಕ್ಕೂ ಸಂಬಂಧ ಇಲ್ಲ. ಅವರೇ ಸಿಎಂ ಆಗಿದ್ದಾಗ ಡಿ ನೋಟಿಫೈ ಮಾಡಬಹುದಾಗಿತ್ತು. ಏಕೆ ಮಾಡಲಿಲ್ಲ. ಈಗ ಏನೇನೊ ಹುಡುಕುತ್ತಿದ್ದಾರೆ, ಹುಡುಕಲಿ ಎಂದರು. ನಾನು ಕರೆದಾಗ ಅವರು ಬರಲಿಲ್ಲ, ಅವರು ಕರೆದರೆ ನಾನು ಅಲ್ಲಿಗೆ (ಬೈರಮಂಗಲ ವೃತ್ತ) ಬರಬೇಕಂತೆ. ನಾನು ಅಲ್ಲಿಗೆ ಬರುವುದು ಸರಿನಾ. ಅವರೊಂದಿಗೆ ಚರ್ಚೆ ಅವಶ್ಯಕತೆ ಇಲ್ಲ ಎಂದರು.
ಬಿಡದಿ ಕೈಗಾರಿಕಾ ಪ್ರದೇಶ ಯಾರ ಕಾಲದಲ್ಲಿ ಆಯ್ತು?
ಬಿಡದಿ ಕೈಗಾರಿಕಾ ಪ್ರದೇಶ ಯಾರ ಕಾಲದಲ್ಲಿ ಆಯಿತು. ಬಿಡದಿ ಟೌನ್ ಶಿಪ್ ಘೋಷಣೆ ಮಾಡಿದವರು ಯಾರು. ಇದೆಲ್ಲ ಅವರೇ ಮಾಡಿದ್ದು. ಅವಕಾಶ ಇದ್ದಾಗ ಡಿ ನೋಟಿಫೈ ಏಕೆ ಮಾಡಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು. ದೇವನಹಳ್ಳಿಯಲ್ಲಿ ಏರ್ ಪೋರ್ಟ್ ಬಂದಿದ್ದರಿಂದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ , ಹೊಸಕೋಟೆ ಅಭಿವೃದ್ಧಿಗೆ ಅನುಕೂಲವಾಯಿತು. ಅದೇ ರೀತಿ ಟೌನ್‌ಶಿಪ್ ಆಗುವುದರಿಂದ ರಾಮನಗರ, ಮಾಗಡಿ, ಚನ್ನಪಟ್ಟಣ ಹಾಗೂ ಕನಕಪುರ ತಾಲೂಕುಗಳ ಅಭಿವೃದ್ಧಿಗೆ ಒಳ್ಳೆಯದಾಗುತ್ತದೆ ಎಂದರು. ಟೌನ್‌ಶಿಪ್ ನಿರ್ಮಾಣವಾಗುವ ಭಾಗದಲ್ಲಿ ಯಾವ ಊರಿನವರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ, ಹಳ್ಳಿಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಾನು ಕರೆದಾಗ ಅವ್ರು ಬರ್ಲಿಲ್ಲ, ಅವ್ರು ಕರೆದಾಗ ನಾನು ಹೋಗೋದು ಸರೀನಾ: ಸಿಎಂ ಟಾಂಗ್


