ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿರುವುದು ಮೋದಿ ಸರ್ಕಾರ ಕೊಟ್ಟಿದೆ’ ಎಂದು ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಶ್ರೀರಂಗಪಟ್ಟಣ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿವೆ.
ಬೆಂಗಳೂರು(ಡಿ.29): ಮುಸ್ಲಿಂ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಸಂಬಂಧ ಪ್ರಕರಣ ಎದುರಿಸುತ್ತಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬಲವಂತದ ಕ್ರಮ ಬೇಡವೆಂದು ಹೈಕೋರ್ಟ್ ಗುರುವಾರ ಆದೇಶಿಸಿದೆ.
ಪ್ರಕರಣ ರದ್ದು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ನ್ಯಾ.ರಾಜೇಶ್ ರೈ ಅವರಿದ್ದ ರಜಾ ಕಾಲದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಲಯ, ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸರ್ಕಾರದ ಪರ ಎಸ್‌ಪಿಪಿಗೆ ಸೂಚನೆ ನೀಡಿತು. ಜೊತೆಗೆ ಪ್ರತಿವಾದಿ ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಬಿಜೆಪಿ, ಸಂಘಪರಿವಾರದವರಿಗೆ ಯಾಕಿಷ್ಟು ತಲೆಬಿಸಿ: ಮುನೀರ್ ಕಾಟಿಪಳ್ಳ ಕಿಡಿ
ಕಲ್ಲಡ್ಕ ಭಟ್ ಪರ ವಾದಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್ ಹಾಕಿರುವುದಕ್ಕೆ ರಾಜಕೀಯ ಪ್ರೇರಿತ ಕಾರಣವಿದೆ. ಅವರು ಯಾವುದೇ ಪ್ರಚೋದನಾಕಾರಿ ಅಥವಾ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ವಾಸ್ತವ ಅಂಶಗಳ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.
‘ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿರುವುದು ಮೋದಿ ಸರ್ಕಾರ ಕೊಟ್ಟಿದೆ’ ಎಂದು ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಶ್ರೀರಂಗಪಟ್ಟಣ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿವೆ. ಇದರ ಬೆನ್ನಲ್ಲೇ ಕಲ್ಲಡ್ಕ ಪ್ರಭಾಕರ್ ಭಟ್ ಅವರು ತಮ್ಮ ವಿರುದ್ಧ ದಾಖಲಾದ ಮೊಕದ್ದಮೆ ರದ್ದತಿ ಕೋರಿ ಅರ್ಜಿ ಸಲ್ಲಿಸಿದ್ದರು.
'ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ' ಹೇಳಿಕೆಗೆ ಕಲ್ಲಡ್ಕ ಪ್ರಭಾಕರ್ ವಿರುದ್ಧ ಎಫ್‌ಐಆರ್!
ಕಲ್ಲಡ್ಕ ಪ್ರಭಾಕರ್ ಭಟ್‌ಗೆ ನಿರೀಕ್ಷಣಾ ಜಾಮೀನು
ಶ್ರೀರಂಗಪಟ್ಟಣ: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ಸಂಬಂಧ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಂಗಪಟ್ಟಣ ನ್ಯಾಯಾಲಯ ಗುರುವಾರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಶ್ರೀರಂಗಪಟ್ಟಣದಲ್ಲಿ ಡಿ.24 ರಂದು ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಲ್ಲಡ್ಕ ಭಟ್, ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಇರಲಿಲ್ಲ, ತ್ರಿವಳಿ ತಲಾಖ್ ರದ್ದುಗೊಳಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ ಅವರು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿ, ನಜ್ಮಾ ನಜೀರ್ ಎಂಬುವವರು ಶ್ರೀರಂಗಪಟ್ಟಣದಲ್ಲಿ ದೂರು ದಾಖಲಿಸಿದ್ದರು.
ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಮುಸ್ಲಿಂ ಮಹಿಳೆಯರ ಕುರಿತು ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಹೋರಾಟಗಾರ್ತಿ ನಜ್ಮಾ ನಜೀರ್ ಅವರು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಭಾಕರ್ ಭಟ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದ್ದಾರೆ.
