ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು! ರಾಜು ಕಾಗೆ ತವರು ಕ್ಷೇತ್ರದಲ್ಲೇ ಇದೆಂಥ ಅವ್ಯವಸ್ಥೆ!?
ಬೆಳಗಾವಿ ಜಿಲ್ಲೆಯ ಗಡಿಭಾಗದ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತಂದ ಶಕ್ತಿ ಯೋಜನೆ. ಪ್ರತ್ಯೇಕ ಬಸ್ ಸೌಕರ್ಯ ಇಲ್ಲದೆ ಬಾಗಿಲುಬಳಿ ನಿಂತು ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು! ರಾಜು ಕಾಗೆ ತವರು ಕ್ಷೇತ್ರದಲ್ಲೇ ಇದೆಂಥ ಅವ್ಯವಸ್ಥೆ?
ಚಿಕ್ಕೋಡಿ (ಜೂ.30): ಗ್ಯಾರಂಟಿ ಯೋಜನೆಯಿಂದಾಗಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ಇಲ್ಲದೆ, ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್‌ನಲ್ಲೇ ಬಾಗಿಲ ಬಳಿ ನಿಂತು ಅಪಾಯಕಾರಿ ಪ್ರಯಾಣ ಮಾಡಬೇಕಾದ ದುಸ್ಥಿತಿ ಬೆಳಗಾವಿ ಜಿಲ್ಲೆಯ ಗಡಿಭಾಗದ ವಿದ್ಯಾರ್ಥಿಗಳಿಗೆ ಎದುರಾಗಿದ್ದು, ದಿನನಿತ್ಯ ಜೀವಭಯದಲ್ಲೇ ಪ್ರಯಾಣಿಸುವಂತಾಗಿದೆ.
ವೇಗವಾಗಿ ಚಲಿಸುವ ಬಸ್‌ನಲ್ಲಿ ಮಣಬಾರದ ಬ್ಯಾಗ್ ಹೊತ್ತು ಬಾಗಿಲಿಗೆ ಜೋತುಬಿದ್ದ ವಿದ್ಯಾರ್ಥಿಗಳನ್ನು ನೋಡಿದರೆ ಮೈ ಜುಮ್ ಎನಿಸುತ್ತೆ. ಆಯಾತಪ್ಪಿ ಕೆಳಗೆ ಬಿದ್ದರೆ ಗತಿಯೇನು? ಈಗಾಗಲೇ ಇಂತಹ ಪ್ರಕರಣಗಳು ನಡೆದಿವೆ. ವಿದ್ಯಾರ್ಥಿಗಳು ಮೃತರಾಗಿದ್ದಾರೆ. ಇಷ್ಟಾಗಿಯೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಗಳಿಲ್ಲ. ಶಕ್ತಿ ಯೋಜನೆ ಜಾರಿ ಬಳಿಕ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೇ ತುಂಬಿರುತ್ತಾರೆ ಇದರಿಂದ ವಿದ್ಯಾರ್ಥಿಗಳು ಒಳಹೋಗಲು ಸಹ ಸ್ಥಳವಿಲ್ಲದಷ್ಟೂ ರಶ್ ಆಗಿರುವುದರಿಂದ ಬಾಗಿಲುಬಳಿ ನಿಂತು ಪ್ರಯಾಣಿಸುವುದು ಅನಿವಾರ್ಯವಾಗಿದೆ. ಇನ್ನು ಖಾಸಗಿ ವಾಹನಗಳಲ್ಲಿ ಪ್ರಯಾಣ ದುಬಾರಿಯಾಗಿರುವುದರಿಂದ ಬಡ ವಿದ್ಯಾರ್ಥಿಗಳು ತುಂಬಿ ತುಳುಕುವ ಬಸ್‌ನಲ್ಲೇ ಬಾಗಿಲಿಗೆ ಜೋತುಬಿದ್ದು ಪ್ರಯಾಣಿಸುತ್ತಿದ್ದಾರೆ.
ವರವಾಗುವ ಬದಲು ವಿದ್ಯಾರ್ಥಿಗಳಿಗೆ ಶಾಪವಾದ ಶಕ್ತಿ ಯೋಜನೆ! ಬಸ್‌ನಲ್ಲಿ ಅಪಾಯಕಾರಿ ಪ್ರಯಾಣ ವೈರಲ್!
ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲೂಕಿನ ಬಹುತೇಕ ಗ್ರಾಮಗಳ ಪರಿಸ್ಥಿತಿಯೂ ಇದೇ ಆಗಿದೆ. ಅದರಲ್ಲೂ ಅಬ್ಬಿಹಾಳ, ಶಿವನೂರು, ಜಂಬಗಿ, ಶಿರೂರ, ಖಿಳೇಗಾಂವ ಗ್ರಾಮದ ವಿದ್ಯಾರ್ಥಿಗಳ ಪರಿಸ್ಥಿತಿಯಂತೂ ದೇವರಿಗೆ ಪ್ರೀತಿ ಎಂಬಂತಾಗಿದೆ.
ವಾಯುವ್ಯ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿರುವ ರಾಜು ಕಾಗೆ ತವರು ಕ್ಷೇತ್ರದಲ್ಲೇ ವಿದ್ಯಾರ್ಥಿಗಳಿಗೆ ಇಂತಹ ದುಸ್ಥಿತಿ ಎದುರಾಗಿದೆ. ಹೆಚ್ಚುವರಿ ಬಸ್ ಕಲ್ಪಿಸುವಂತೆ ಡಿಪೋ ಮ್ಯಾನೇಜರ್‌ಗೆ ವಿದ್ಯಾರ್ಥಿಗಳು ಪೋಷಕರು ಮನವಿ ಮಾಡಿದರೂ ಡೋಂಟ್ ಕೇರ್ ಎನ್ನುತ್ತಿರುವ ಅಧಿಕಾರಿಗಳು. ಇತ್ತ ರಾಜು ಕಾಗೆ ಗಮನಹರಿಸುತ್ತಿಲ್ಲ ಇದರಿಂದ ಮುಂದೆ ಅನಾಹುತಗಳಾದಲ್ಲಿ ಅದಕ್ಕೆ ಯಾರು ಹೊಣೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.