* ಗೂಗಲ್‌ ವಿರುದ್ಧ ರೊಚ್ಚಿಗೆದ್ದಿದ್ದ ಕನ್ನಡಿಗರು* ಕನ್ನಡದ ಕುರಿತು ಅವಹೇಳನ ಮಾಡಿದ ವೆಬ್‌ಸೈಟ್‌ ತೆಗೆದು ಹಾಕಿದ ಗೂಗಲ್‌ * ಇಂತಹ ಪ್ರಕರಣ ಮತ್ತೆ ಆಗಬಾರದೆಂದು ಎಚ್ಚರಿಕೆ ನೀಡಲಾಗಿದೆ: ಲಿಂಬಾವಾಳಿ 

ಬೆಂಗಳೂರು(ಜೂ.05): ಕನ್ನಡದ ಬಗ್ಗೆ ಕೆಟ್ಟ ಮಾಹಿತಿ ಬಿಂಬಿಸಿದ ಗೂಗಲ್‌ ಸಂಸ್ಥೆ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಸಂಸ್ಥೆ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ನಿರ್ಧಾರವನ್ನು ಕೈಬಿಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಗಲ್‌ನಿಂದ ಕನ್ನಡಕ್ಕೆ ಅಪಮಾನವಾಗಿತ್ತು. ಆದ್ದರಿಂದ ಕಾನೂನು ಕ್ರಮಕ್ಕೆ ನಾವು ಮುಂದಾಗಿದ್ದೆವು. ಗುರುವಾರವೇ ಗೂಗಲ್‌ ಸಂಸ್ಥೆ ಎಚ್ಚೆತ್ತುಕೊಂಡು ಕ್ಷಮೆ ಕೇಳಿದೆ. ಅಲ್ಲದೇ ಕನ್ನಡದ ಕುರಿತು ಅವಹೇಳನ ಮಾಡಿದ ವೆಬ್‌ಸೈಟನ್ನು ಕೂಡಾ ತೆಗೆದು ಹಾಕಿದೆ. ಆದ್ದರಿಂದ ಸಂಸ್ಥೆ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ನಿರ್ಧಾರ ಕೈಬಿಟ್ಟಿದ್ದೇವೆ. ಇಂತಹ ಪ್ರಕರಣ ಮತ್ತೇ ಆಗಬಾರದೆಂದು ಎಚ್ಚರಿಕೆ ನೀಡಿರುವುದಾಗಿ ಹೇಳಿದರು.

ಕನ್ನಡಿಗರ ಕ್ಷಮೆಯಾಚಿಸಿದ ಗೂಗಲ್, ಇನ್ನುಮುಂದೆ ಹೀಗಾಗಲ್ಲ

ಭಾರತದ ಕೊಳಕು ಭಾಷೆ ಯಾವುದು ಎಂದು ಗೂಗಲ್‌ ಮಾಡಿದಾಗ ಕನ್ನಡ ಎಂಬ ಮಾಹಿತಿ ನೀಡುವ ವೆಬ್‌ಪುಟ ತೆರೆದುಕೊಳ್ಳುತ್ತಿದ್ದದ್ದು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ವಿಪರೀತ ಟ್ರೋಲ್‌ ಆಗಿತ್ತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಕನ್ನಡದ ಬಗ್ಗೆ ಕೆಟ್ಟಮಾಹಿತಿ ಬಿಂಬಿಸುತ್ತಿರುವ ಗೂಗಲ್‌ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತು. ಇದರ ಬೆನ್ನಲ್ಲೇ ಗೂಗಲ್‌ ಸಂಸ್ಥೆಯು ಕನ್ನಡ ಕೊಳಕು ಭಾಷೆ ಎಂದು ಬಿಂಬಿಸಿದ್ದ ವೆಬ್‌ಪೇಜ್‌ ತೆಗೆದುಹಾಕಿ ಕ್ಷಮೆ ಕೋರಿತ್ತು.