ರಾಜ್ಯಾದ್ಯಂತ ಎರಡೇ ದಿನದಲ್ಲಿ ₹417 ಕೋಟಿ ಮದ್ಯ ಬಿಕರಿ!
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೇ ಪಾನಪ್ರಿಯರು ‘ಕಿಕ್’ ಕೊಟ್ಟಂತಾಗಿದೆ. ಡಿ.30ರಂದು 43.41 ಕೋಟಿ ರು. ಮೊತ್ತದ 1.95 ಲಕ್ಷ ಕೇಸ್ ಬಿಯರ್ ಮಾರಾಟವಾಗಿದ್ದರೆ, 179.72 ಕೋಟಿ ರು. ಮೌಲ್ಯದ ಐಎಂಎಲ್ ಬ್ರಾಂಡಿ, ವಿಸ್ಕಿ, ರಮ್ ಮತ್ತಿತರ 3.08 ಲಕ್ಷ ಕೇಸ್ ಮದ್ಯ ಬಿಕರಿಯಾಗಿದೆ.
ಬೆಂಗಳೂರು (ಜ.2) : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೇ ಪಾನಪ್ರಿಯರು ‘ಕಿಕ್’ ಕೊಟ್ಟಂತಾಗಿದೆ.
ಡಿ.30ರಂದು 43.41 ಕೋಟಿ ರು. ಮೊತ್ತದ 1.95 ಲಕ್ಷ ಕೇಸ್ ಬಿಯರ್ ಮಾರಾಟವಾಗಿದ್ದರೆ, 179.72 ಕೋಟಿ ರು. ಮೌಲ್ಯದ ಐಎಂಎಲ್ ಬ್ರಾಂಡಿ, ವಿಸ್ಕಿ, ರಮ್ ಮತ್ತಿತರ 3.08 ಲಕ್ಷ ಕೇಸ್ ಮದ್ಯ ಬಿಕರಿಯಾಗಿದೆ. ಹೊಸ ವರ್ಷದ ಹಿಂದಿನ ದಿನವಾದ ಭಾನುವಾರ 36.88 ಕೋಟಿ ರು. ಮೌಲ್ಯದ 2.22 ಲಕ್ಷ ಕೇಸ್ ಬಿಯರ್ ಹಾಗೂ 156.66 ಕೋಟಿ ರು. ಮೊತ್ತದ 3.32 ಲಕ್ಷ ಕೇಸ್ ಮದ್ಯ ಮಾರಾಟವಾಗಿದೆ. ಒಟ್ಟು ಎರಡು ದಿನದಲ್ಲಿ 416.67 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿದೆ.
ರಾಜ್ಯದಲ್ಲಿ 'ಬೀರ್'ಬಲ್ಲರ ಸಂಖ್ಯೆ ಹೆಚ್ಚಳ; ವರ್ಷದಲ್ಲೇ ದ್ವಿಗುಣವಾದ ಬೀಯರ್ ಮಾರಾಟ!
ಮಾಮೂಲಿ ದಿನಗಳಲ್ಲಿ 80ರಿಂದ 90 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗುತ್ತಿತ್ತು. ಆದರೆ ಈ ಬಾರಿ ಹೊಸ ವರ್ಷಾಚರಣೆ ಭಾನುವಾರ ಬಂದಿದ್ದರಿಂದ ವಾರಾಂತ್ಯದ ಶನಿವಾರ ಹೆಚ್ಚಿನ ಮೊತ್ತದ ಮದ್ಯ ಖರೀದಿಸಿ ‘ಸ್ಟಾಕ್’ ಮಾಡಿಟ್ಟುಕೊಳ್ಳಲಾಗಿದೆ. ಆದ್ದರಿಂದಲೇ ಭಾನುವಾರ ಶನಿವಾರಕ್ಕಿಂತ ಕಡಿಮೆ ಮೊತ್ತದ ಮದ್ಯ ಮಾರಾಟವಾಗಿದೆ ಎಂದು ತಿಳಿದುಬಂದಿದೆ.
ತಿಂಗಳಿಗೆ 3 ಸಾವಿರ ಕೋಟಿ ಆದಾಯ:
ಇದಿಷ್ಟೇ ದಾಖಲೆಯಾಗಿಲ್ಲ. ಪ್ರಸಕ್ತ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ಯಥೇಚ್ಛವಾಗಿ ಮದ್ಯ ಮಾರಾಟವಾಗಿದ್ದು, ಈ ತಿಂಗಳೊಂದರಲ್ಲೇ ಬೊಕ್ಕಸಕ್ಕೆ ಬರೋಬ್ಬರಿ 3 ಸಾವಿರ ಕೋಟಿ ರು. ಆದಾಯ ಹರಿದುಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ಮದ್ಯ ಮಾರಾಟದಿಂದ 2611 ಕೋಟಿ ರು. ಆದಾಯ ಬಂದಿತ್ತು.
ಡಿಸೆಂಬರ್ ಕೊನೆಯ ವಾರದಲ್ಲಂತೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಡಿ.23ರಿಂದ 31 ರವರೆಗೂ 900 ಕೋಟಿ ರು. ಮೊತ್ತದ 22.2 ಲಕ್ಷ ಕೇಸ್ ಐಎಂಎಲ್ ಮದ್ಯ ಹಾಗೂ 170 ಕೋಟಿ ಮೊತ್ತದ 14.07 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ಇದರಿಂದಾಗಿ ವಾರದಲ್ಲೇ ಸುಮಾರು 800 ಕೋಟಿ ರು. ಆದಾಯ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಎಂಎಸ್‌ಐಎಲ್‌ನಿಂದ ₹19 ಕೋಟಿ ಮದ್ಯ ಮಾರಾಟ
ರಾಜ್ಯದ 1031 ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ ಡಿ.31ರಂದು 18.85 ಕೋಟಿ ರು. ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ. ಮಾಮೂಲಿಯಾಗಿ 8 ಕೋಟಿ ರು.ಯಷ್ಟು ವಹಿವಾಟು ನಡೆಯುತ್ತಿತ್ತು ಎಂದು ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು 4.34 ಕೋಟಿ ರು. ಹೆಚ್ಚಳವಾಗಿದೆ. 2022ರ ಡಿ.31ರಂದು 14.51 ಕೋಟಿ ರು. ಮದ್ಯ ಮಾರಾಟವಾಗಿತ್ತು. ರಾಯಚೂರು ರೈಲ್ವೆ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಅತ್ಯಂತ ಹೆಚ್ಚು, ಅಂದರೆ 11.66 ಲಕ್ಷ ರು. ಮೊತ್ತದ ಮದ್ಯ ಮಾರಾಟವಾಗಿದ್ದರೆ, ರಾಯಚೂರಿನ ಗಂಝ್ ರಸ್ತೆಯ ಮಳಿಗೆಯಲ್ಲಿ 9.96 ಲಕ್ಷದ ರು. ಮೌಲ್ಯದ ಮದ್ಯ ಬಿಕರಿಯಾಗಿ ಎರಡನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂದು 'ಮದ್ಯಪಾನ ಪ್ರಿಯರ ದಿನ': ಮದ್ಯಪ್ರಿಯರ ಸಂಘದಿಂದ ಕೇಕ್ ಕತ್ತರಿಸಿ ಸಂಭ್ರಮಾಚರಣೆ! ವಿಡಿಯೋ ವೈರಲ್
ಜಿಲ್ಲಾವಾರು ಮಾರಾಟದಲ್ಲಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ, ಅಂದರೆ 1.82 ಕೋಟಿ ರು. ಮೊತ್ತದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಇದೇ ದಿನ ಈ ಜಿಲ್ಲೆಯಲ್ಲಿ 1.35 ಕೋಟಿ ರು. ಮದ್ಯ ಮಾರಾಟವಾಗಿತ್ತು.