ಬೆಂಗಳೂರು (ಮೇ.11):  ವೈದ್ಯರ ತಪಾಸಣೆ (ಟ್ರಯಾಜಿಂಗ್‌) ನಂತರ ಕೊರೋನಾ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಹಾಗೂ ರೆಮ್‌ಡಿಸಿವರ್‌ ಔಷಧ ನೀಡಲಾಗುವುದು, ಇದರಿಂದ ಅರ್ಹರಿಗೆ ಹಾಸಿಗೆ ಸಿಗಲಿದೆ ಎಂದು ಕೊರೋನಾ ಕಾರ್ಯಪಡೆ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

ಸೋಮವಾರ ಆರೋಗ್ಯ ಸೌಧದಲ್ಲಿನ ರಾಜ್ಯ ಕೊರೋನಾ ವಾರ್‌ ರೂಂ ಪರಿಶೀಲಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗ ದಿನಕ್ಕೆ 950 ಹಾಸಿಗೆ ಮಾತ್ರ ಖಾಲಿಯಾಗುತ್ತಿದೆ. ಆದರೆ ಏಳೆಂಟು ಸಾವಿರ ಹಾಸಿಗೆಗಳಿಗೆ ಬೇಡಿಕೆ ಬರುತ್ತಿದೆ. ಈ ಪೈಕಿ ವೈದ್ಯರ ಪರಿಶೀಲನೆ ಆದ ಮೇಲೆ ಆಸ್ಪತ್ರೆಗೆ ಸೇರಬೇಕಾದವರೇ 2000ಕ್ಕೂ ಹೆಚ್ಚು ಜನ ಇದ್ದಾರೆ. ಹಾಗಾಗಿ ಅರ್ಹರಿಗೆ ಹಾಸಿಗೆ ಸಿಗಲು ಸರಿಯಾಗಿ ವೈದ್ಯರ ಪರಿಶೀಲನೆ ಮಾಡಲಾಗುವುದು, ಬೆಂಗಳೂರಿನಲ್ಲಿ ಎಲ್ಲ ವಾರ್ಡ್‌ ಮಟ್ಟದಲ್ಲಿ ವೈದ್ಯರ ಪರಿಶೀಲನೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದರು.

ಹಳ್ಳಿಗಳಲ್ಲಿ 3 ನೇ ಅಲೆ ತಡೆಗೆ ಸರ್ಕಾರದಿಂದ ಸಿದ್ಧತೆ ...

ಪೋರ್ಟಲ್‌ನಲ್ಲಿ ಸಮಗ್ರ ಮಾಹಿತಿ: ಹಾಸಿಗೆಗಳ ಮಾಹಿತಿ, ಆಕ್ಸಿಜನ್‌, ರೆಮ್‌ಡೆಸಿವಿರ್‌ ಲಭ್ಯತೆ ಬಗ್ಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪೋರ್ಟಲ್‌ನಲ್ಲಿ ಮಾಹಿತಿ ಸಿಗುವ ಹಾಗೆ ಮಾಡಲಾಗುವುದು. ಇನ್ನು ಎರಡು-ಮೂರು ದಿನಗಳಲ್ಲೇ ಸಾಸ್ಟ್‌ ಪೋರ್ಟ್‌ಲ್‌ಗೆ  ಮೇಲೆ ತಿಳಿಸಿದ ಎಲ್ಲವನ್ನೂ ಲಿಂಕ್‌ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ತಿಳಿಸಿದರು.

ಈ ಮೂಲಕ ಅಗತ್ಯವಿರುವವರಿಗೆ ಸೂಕ್ತ ಹಾಸಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸರಕಾರಿ ಕೋಟಾದ ಹಾಸಿಗೆ ಮಾಹಿತಿಯನ್ನು ಕೂಡ ಈ ಪೋರ್ಟಲ್‌ ನಲ್ಲಿ ಹಾಕಲಾಗುವುದು. ಇದರಿಂದ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಬರುತ್ತದೆ.

ಭಾರತದ ರೂಪಾಂತರಿ ವೈರಸ್‌ ವಿಶ್ವಕ್ಕೇ ತೀವ್ರ ಅಪಾಯಕಾರಿ! .

ಗಂಭೀರ ಸೋಂಕಿತರಲ್ಲದವರಿಗೆ ಚಿಕಿತ್ಸೆ ನೀಡಲು ಸ್ಟೆಪ್‌ಡೌನ್‌ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಟೆಪ್‌ಡೌನ್‌ ಆಸ್ಪತ್ರೆ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಸಹ ವೈದ್ಯರ ತಪಾಸಣೆ ವ್ಯವಸ್ಥೆ, ಆಕ್ಸಿಜನ್‌ ಉಳ್ಳ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ಆದೇಶದಿಂದ ರಾಜ್ಯಕ್ಕೆ 1200 ಮೆ.ಟನ್‌ ಆಮ್ಲಜನಕ ಹಂಚಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಆಕ್ಸಿಜನ್‌ ಸೌಲಭ್ಯ ಇರುವ 4000 ಬೆಡ್‌ಗಳೂ ಸೇರಿದಂತೆ ರಾಜ್ಯಾದ್ಯಂತ 20,000 ಹಾಸಿಗೆ ಹೆಚ್ಚಿಸಲು ನಿರ್ಧರಿಸಿದೆ ಎಂದರು

24 ಗಂಟೆ ಒಳಗೇ ರಿಸಲ್ಟ್‌ ಬಿಯು ನಂಬರ್‌:  ಬೆಂಗಳೂರಿನಲ್ಲಿ ಈಗ ಪರೀಕ್ಷೆಯಾದ 24 ಗಂಟೆ ಒಳಗೇ ಫಲಿತಾಂಶ ಬಂದು ಬಿಯು ನಂಬರ್‌ ಲಭ್ಯವಾಗುತ್ತದೆ. ಇದೇ ಮಾದರಿ ರಾಜ್ಯದ ಎಲ್ಲ ಕಡೆ ಆಗಬೇಕು, ಆದರೆ ರಾಜ್ಯದ ಸರಾಸರಿ ಪರಿಸ್ಥಿತಿ ನೋಡಿದರೆ ಪರೀಕ್ಷಾ ಫಲಿತಾಂಶ ಬರಲು ಎರಡರಿಂದ ನಾಲ್ಕೂವರೆ ದಿನವಾಗುತ್ತದೆ. ಫಲಿತಾಂಶ ವಿಳಂಬದಿಂದ ಸೋಂಕು ಉಲ್ಬಣಿಸಿ ಹೆಚ್ಚು ಪ್ರಾಣನಷ್ಟಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ಅಧಿಕಾರಿಗಳಾದ ಪೊನ್ನುರಾಜ್‌, ಎಂ. ಮೌದ್ಗಿಲ್‌, ಪ್ರದೀಪ್‌, ಅರುಂಧತಿ ಚಂದ್ರಶೇಖರ್‌, ಸಾಸ್ಟ್‌ ಕಾರ್ಯನಿರ್ವಾಹಕ ನಿರ್ದೇಶಕಿ ಎನ್‌.ಟಿ. ಅಬ್ರು ಸೇರಿ ಹಲವರು ಹಾಜರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona