ಭಾರತದ ರೂಪಾಂತರಿ ವೈರಸ್ ವಿಶ್ವಕ್ಕೇ ತೀವ್ರ ಅಪಾಯಕಾರಿ!
* ಭಾರತದ ರೂಪಾಂತರಿ ವೈರಸ್ ವಿಶ್ವಕ್ಕೇ ತೀವ್ರ ಅಪಾಯಕಾರಿ!
* ವಿಶ್ವ ಆರೋಗ್ಯ ಸಂಸ್ಥೆಯಿಂದ ಘೋಷಣೆ
* ಮೂಲ ವೈರಸ್‌ಗಿಂತ ಸುಲಭವಾಗಿ ಇದು ಹರಡುತ್ತೆ
ನ್ಯೂಯಾರ್ಕ್(ಮೇ.11): ಭಾರತದಲ್ಲಿ ಕೊರೋನಾ 2ನೇ ಅಲೆಯ ಭಾರೀ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಡಬಲ್ ಮ್ಯುಟೆಂಟ್ (ಬಿ.1.617) ಕೊರೋನಾ ತಳಿಯು ಇದೀಗ ವಿಶ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಭಾರತದಲ್ಲಿ ಪತ್ತೆಯಾದ ಈ ಡಬಲ್ ಮ್ಯುಟೆಂಟ್ ತಳಿಯನ್ನು ಇದುವರೆಗೆ ‘ವೇರಿಯಂಟ್ ಆಫ್ ಇಂಟ್ರೆಸ್ಟ್’ ಎಂದು ವರ್ಗೀಕರಿಸಲಾಗಿತ್ತು. ಆದರೆ ಇದೀಗ ಅದರ ತೀವ್ರತೆಯನ್ನು ಪರಿಗಣಿಸಿ, ‘ವೇರಿಯಂಟ್ ಆಫ್ ಕನ್ಸ್‌ರ್ನ್’ ಎಂದು ವರ್ಗೀಕರಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಭಾರತದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವ ವಹಿಸಿರುವ ಮಾರಿಯಾ ವ್ಯಾನ್ ಕೆರ್ಕೋವ್ ‘ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಈ ಡಬಲ್ ಮ್ಯುಟೆಂಟ್ ವೈರಸ್, ಮೂಲ ವೈರಸ್‌ಗಿಂತ ಹೆಚ್ಚು ಸುಲಭವಾಗಿ ಹಬ್ಬುತ್ತಿದೆ. ಜೊತೆಗೆ ಲಸಿಕೆಯ ರಕ್ಷಣೆಯನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಂತಿದೆ. ಇತ್ತೀಚಿನ ವರದಿಗಳು ಇದನ್ನು ಸಾಬೀತುಪಡಿಸಿವೆ. ಹೀಗಾಗಿಯೇ ಈ ಡಬಲ್ ಮ್ಯುಟೆಂಟ್ ವೈರಸ್ ಅನ್ನು ನಾವು ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ವೈರಸ್ ಎಂದು ವರ್ಗೀಕರಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣಾ ಆಫ್ರಿಕಾ ಮಾದರಿಯ ವೈರಸ್ ತಳಿಯನ್ನು ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ಎಂದು ಘೋಷಿಸಲಾಗಿತ್ತು. ಈ ಎಲ್ಲಾ ವೈರಸ್‌ಗಳೂ, ಹೆಚ್ಚು ಪ್ರಸರಣದ ಶಕ್ತಿ ಹೊಂದಿರುವ, ತುಂಬಾ ಅಪಾಯಕಾರಿಯಾಗಿರುವ ಮತ್ತು ಲಸಿಕೆಯ ಭದ್ರತಾ ಕೋಟೆಯನ್ನು ಭೇದಿಸಬಲ್ಲ ಶಕ್ತಿ ಹೊಂದಿವೆ ಎಂದು ಘೋಷಿಸಲ್ಪಟ್ಟಿವೆ.
"
ಡಬಲ್ ಮ್ಯುಟೆಂಟ್ ಎಂದರೇನು?
ರೂಪಾಂತರವಾಗಿರುವ ಎರಡು ವೈರಸ್‌ಗಳು ಒಂದುಗೂಡಿರುವುದನ್ನು ಡಬಲ್ ಮ್ಯುಟೆಂಟ್ ಎನ್ನಲಾಗುತ್ತಿದೆ. ಇವು ಸಾಮಾನ್ಯ ವೈರಸ್‌ಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇವು ಲಸಿಕೆಯಿಂದಲೂ ರಕ್ಷಣೆ ಸಿಗದಂತೆ ಮಾಡಬಲ್ಲವು. ಜೊತೆಗೆ ಮೂಲ ವೈರಸ್‌ಗಿಂತ ಸುಲಭವಾಗಿ ಹರಡಬಲ್ಲವು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona