ಬೆಂಗಳೂರು (ಮೇ.11):  ಪ್ರಸಕ್ತ ಕೋವಿಡ್‌ ಎರಡನೇ ಅಲೆ ಸೇರಿದಂತೆ ಸಂಭವನೀಯ ಮೂರನೇ ಅಲೆಯನ್ನೂ ಎದುರಿಸಲು ಗ್ರಾಮೀಣ ಭಾಗದಲ್ಲೂ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ತಾಲೂಕು ಆಸ್ಪತ್ರೆಗಳೂ ಸೇರಿ ಹಳ್ಳಿಯ ವಿವಿಧ ಹಂತಗಳಲ್ಲೇ 8,105 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಜತೆ ಚರ್ಚಿಸಿದ ನಂತರ ಮಾತನಾಡಿದ ಅವರು, ರಾಜ್ಯದ 146 ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ತಲಾ 4-6 ಐಸಿಯು ಹಾಸಿಗೆಗಳಿವೆ. ಇವುಗಳನ್ನು 20ಕ್ಕೆ ಹೆಚ್ಚಿಸಲಾಗುವುದು. ಈ ಮೂಲಕ ಒಟ್ಟು 1,925 ಐಸಿಯು ಹಾಸಿಗೆಗಳು ಲಭ್ಯವಾಗುತ್ತವೆ. ಇದಲ್ಲದೇ, ರಾಜ್ಯದ 206 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈಗ 30 ಸಾಮಾನ್ಯ ಹಾಸಿಗೆಗಳಿವೆ. ಅವೆಲ್ಲವನ್ನೂ ಆಮ್ಲಜನಕ ಹಾಸಿಗೆಗಳನ್ನಾಗಿ ಪರಿವರ್ತಿಸಲಾಗುವುದು. ಆಗ ಒಟ್ಟು 6,180 ಅಮ್ಲಜನಕ ಹಾಸಿಗೆಗಳು ಸಿಗುತ್ತವೆ. ಪ್ರತಿ ಸಮುದಾಯ ಕೇಂದ್ರದ 30 ಹಾಸಿಗೆಗಳ ಪೈಕಿ ಐದು ಹಾಸಿಗೆಗಳನ್ನು ಅಧಿಕ ಆಮ್ಲಜನಕ ಸಾಂದ್ರತೆ (ಹೈಡೆನ್ಸಿಟಿ ಆಕ್ಸಿಜನ್‌) ಹಾಸಿಗೆಗಳನ್ನಾಗಿ ಮಾಡಲಾಗುವುದು. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ 50 ಐಸಿಯು ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ಹಳ್ಳಿಗಳಲ್ಲಿ ಇನ್ನು ಮನೆಮನೆಗೂ ತೆರಳಿ ಕೋವಿಡ್‌ ಟೆಸ್ಟ್‌: ಸರ್ಕಾರದ ಹೊಸ ಕ್ರಮ!

ಆಕ್ಸಿಜನ್‌ ಸಾಂದ್ರಕ ಖರೀದಿ

ಈಗಾಗಲೇ 3,000 ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್‌ ಕಾನ್ಸಂಟ್ರೇಟರ್‌) ಖರೀದಿಗೆ ಆದೇಶ ಕೊಡಲಾಗಿದೆ. ಇನ್ನು 10,000 ಖರೀದಿಗೆ ಬೇಡಿಕೆ ಸಲ್ಲಿಸುವಂತೆ ಸೂಚಿಸಿದ್ದೇನೆ. ಈಗ ಪ್ರತಿ ದಿನ 40,000 ರ್ಯಾಪಿಡ್ ಆಂಟಿಜನ್‌ ಕಿಟ್‌ ದಿನಕ್ಕೆ ಪೂರೈಕೆ ಯಾಗುತ್ತಿದೆ. ಇನ್ನೂ ಹೆಚ್ಚು ಖರೀದಿಗೆ ಟೆಂಡರ್‌ ಕರೆಯಲಾಗುತ್ತಿದೆ.ಐದು ಲಕ್ಷ ಡೋಸ್‌ ರೆಮ್‌ ಡಿಸಿವರ್‌ ಖರೀದಿಗೆ ಗ್ಲೋಬಲ್‌ ಟೆಂಡರ್‌ ಕರೆಯಲಾಗಿದೆ ಎಂದು ತಿಳಿಸಿದರು.

ಹಳ್ಳಿಗಳ ಬಗ್ಗೆ ಎಚ್ಚರ : ಸೋಂಕು ಹರಡಲು ಬಿಡಬೇಡಿ ..

ಲ್ಯಾಬ್‌ಗಳಿಗೆ ಸ್ಯಾಂಪಲ್ಸ್‌ ಕೊಡಬೇಕಾದರೆ 500ಕ್ಕೂ ಸ್ಯಾಂಪಲ್ಸ್‌ಗೆ ಒಂದೇ ಮೊಬೈಲ್‌ ಸಂಖ್ಯೆ ಕೊಟ್ಟಿರುವ ಅಂಶ ಬೆಳಕಿಗೆ ಬಂದಿದೆ. ಇನ್ನು ಮುಂದೆ ಹಾಗೆ ಮಾಡಬಾರದು. ‘ಸಾಸ್ಟ್‌’ ಪೋರ್ಟಲ್‌ನಲ್ಲಿಯೇ ಐದು ಜನಕ್ಕಿಂತ ಹೆಚ್ಚು ಜನರ ಸ್ಯಾಂಪಲ್‌ ಒಂದು ಮೊಬೈಲ್‌ ಸಂಖ್ಯೆಗೆ ಲಿಂಕ್‌ ಆಗದಂತೆ ಬದಲಾವಣೆ ಮಾಡಲಾಗುತ್ತದೆ. ಇನ್ನು, ಟೆಲಿಫೋನಿಕ್‌ ಟ್ರಾಯಾಜಿಕ್‌ ಮಾಡಬಹುದು ಅಂತ ಕೆಲವರು ಹೇಳುತ್ತಿದ್ದಾರೆ. ಅದು ಬೇಡವೆಂದು ತಿಳಿಸಿದ್ದೇನೆ. ಭೌತಿಕ ಪರೀಕ್ಷೆಯೇ ಮಾಡಬೇಕು ಎಂದು ಸೂಚಿಸಿದರು.

ತಕ್ಷಣವೇ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ 50 ವೆಂಟಿಲೇಟರ್‌ ಕೊಡುವಂತೆ ಸೂಚನೆ ಕೊಟ್ಟಿದ್ದೇನೆ. . ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್‌ ಒತ್ತಡ ಕಡಿಮೆ ಮಾಡಲು ಈ ಕೈಗೊಳ್ಳಲಾಗಿದೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona