Asianet Suvarna News Asianet Suvarna News

ಪ್ರವಾಸೋದ್ಯಮಕ್ಕೆ ಹೊಸ ನೀತಿ, ಉದ್ದಿಮೆಗಳನ್ನು ಜಿಎಸ್‌ಟಿ ಕೊಲ್ಲುತ್ತಿದೆ: ಡಿಕೆಶಿ

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಉದ್ಯಮ ಸ್ಥಾಪನೆಯಾಗುವ ಭೂಮಿಗೆ 10 ವರ್ಷಗಳವರೆಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಚರ್ಚಿಸಲಾಗುವುದು. ಮುಂಬರುವ ದಿನಗಳಲ್ಲಿ ಹೂಡಿಕೆದಾರರಿಗೆ ಪೂರಕವಾದ ಹೊಸ ಪ್ರವಾಸೋದ್ಯಮ ನೀತಿ ತರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. 

New policy for tourism GST is killing businesses Says DK Shivakumar gvd
Author
First Published Jun 16, 2024, 4:26 AM IST

ಬೆಂಗಳೂರು (ಜೂ.16): ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಉದ್ಯಮ ಸ್ಥಾಪನೆಯಾಗುವ ಭೂಮಿಗೆ 10 ವರ್ಷಗಳವರೆಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಚರ್ಚಿಸಲಾಗುವುದು. ಮುಂಬರುವ ದಿನಗಳಲ್ಲಿ ಹೂಡಿಕೆದಾರರಿಗೆ ಪೂರಕವಾದ ಹೊಸ ಪ್ರವಾಸೋದ್ಯಮ ನೀತಿ ತರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಎಫ್‌ಕೆಸಿಸಿಐ ಆಯೋಜಿಸಿರುವ 2 ದಿನಗಳ ‘ದಕ್ಷಿಣ ಭಾರತ ಉತ್ಸವ-2024’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಜಿಎಸ್‌ಟಿ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ. 

ಶೇ.18ರಷ್ಟು ಜಿಎಸ್ಟಿ, ಶೇ.13ರಿಂದ 14ರಷ್ಟು ಬ್ಯಾಂಕ್ ಸಾಲಕ್ಕೆ ಬಡ್ಡಿ ಸೇರಿ ಸುಮಾರು ಶೇ.40ರಷ್ಟು ದುಡ್ಡು ಹಾಗೆಯೇ ಹೋಗಿ ಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮದಲ್ಲಿ ಹೂಡಿಕೆ, ಉದ್ಯಮ ಬೆಳೆಯಲು ಹೇಗೆ ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಸಮೀಪದಲ್ಲಿ, ಸಮುದ್ರ ತೀರದಲ್ಲಿ ಅಭಿವೃದ್ಧಿ ಬೇಡ ಎನ್ನುವ ನಿಯಮಗಳಿವೆ. ಹೀಗೆ ಅಭಿವೃದ್ಧಿಗೆ ಅವಕಾಶ ಇರುವ ಕಡೆಗಳಲ್ಲಿ ನಿಯಂತ್ರಣ ಹೇರಿದರೆ ಯಾವ ಉದ್ಯಮ ಸ್ಥಾಪನೆಯಾಗುತ್ತವೆ? ಅರಣ್ಯ, ಪರಿಸರ, ಕರಾವಳಿ ಸಂಬಂಧಿಸಿದಂತೆ ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ. 

ಕೆರೆ ಸ್ವಚ್ಛತೆಗಾಗಿ ಬಿಬಿಎಂಪಿ ಯಂತ್ರ ಖರೀದಿ?: ತ್ಯಾಜ್ಯ ವಿಲೇವಾರಿಗೆ ಅನುಕೂಲ

ಇಂತಹ ನಿಯಂತ್ರಣಗಳನ್ನು ಸಡಿಲಿಸಿ ಉದ್ಯಮ, ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕಿದೆ ಎಂದು ಅವರು ಹೇಳಿದರು. ಪಿಪಿಪಿ ಮಾದರಿ, ಸಹಾಯಧನ, ಪ್ರೋತ್ಸಾಹಕಗಳು, ತೆರಿಗೆ ವಿನಾಯಿತಿ ಮೂಲಕ ನಮ್ಮ ಸರ್ಕಾರ ಪ್ರವಾಸೋದ್ಯಮ ಬೆಳವಣಿಗೆಗೆ ಬದ್ಧವಾಗಿದೆ. ಅದಕ್ಕಾಗಿ ಹೂಡಿಕೆದಾರರಿಗೆ ಬಲ ನೀಡುವ, ಪ್ರವಾಸೋದ್ಯಮ ಬೆಳೆಯಲು ಅನುಕೂಲಕರ ಎನಿಸುವ ಹೊಸ ನೀತಿಯನ್ನು ತರುವ ಉದ್ದೇಶವನ್ನು ಹೊಂದಲಾಗಿದೆ. ಉತ್ಸವದ ಮೂಲಕ ಸಲಹೆ, ಸೂಚನೆಗಳನ್ನು ಪಡೆದು ಸೂಕ್ತ ನೀತಿ ರೂಪಿಸಲಾಗುತ್ತದೆ ಎಂದು ಶಿವಕುಮಾರ್ ಭರವಸೆ ನೀಡಿದರು. ಐಟಿ-ಬಿಟಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಬೆಳೆದಿರುವ ಬೆಂಗಳೂರು, ಪ್ರವಾಸೋದ್ಯಮದಲ್ಲಿ ಹಿಂದೆ ಉಳಿದಿದೆ. ಕಬ್ಬನ್ ಪಾರ್ಕ್, ಲಾಲ್‌ಬಾಗ್ ಕಾಲ ಹೋಯಿತು. ಹೊಸ ತಲೆಮಾರಿನ ಜನತೆ ಹೊಸದನ್ನು ನಿರೀಕ್ಷಿಸುತ್ತಾರೆ. 

ಅದಕ್ಕಾಗಿ ‘ಸ್ಕೈ ಡೆಕ್’ ನಿರ್ಮಿಸಲು ಜಾಗ ನೋಡುತ್ತಿದ್ದೇವೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಮುಂದಿನ 15 ದಿನಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ವಾತಾವರಣ ಇದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆದಾರರು ಮುಂದೆ ಬರುತ್ತಿಲ್ಲ. ಬಂಡವಾಳ ಹೂಡಿಕೆ ಬಗ್ಗೆ ಪ್ರತಿಕ್ರಿಯೆ ಕಡಿಮೆ ಇದೆ ಎಂದು ಅವರು ಹೇಳಿದರು. ವಿಶ್ವದರ್ಜೆಯ ಸೌಕರ್ಯಕ್ಕೆ ಕ್ರಮ: ಪರಿಸರ ಪ್ರವಾಸೋದ್ಯಮ, ಕೃಷಿ, ಅರಣ್ಯ, ಸಾಹಸಿ, ಆರೋಗ್ಯ, ಸಾಂಸ್ಕೃತಿಕ, ಧಾರ್ಮಿಕ ಪ್ರವಾಸೋದ್ಯಮ ಹೀಗೆ ವಿವಿಧ ಮಾದರಿಯ ಪ್ರವಾಸೋದ್ಯಮಗಳನ್ನು ಬೆಳೆಸಲು ರಾಜ್ಯದಲ್ಲಿ ವಿಪುಲ ಅವಕಾಶ ಇವೆ. 

ಅದಕ್ಕೆ ಪೂರಕವಾಗಿ ಎರಡ್ಮೂರು ತಿಂಗಳಲ್ಲಿ ಬಂಡವಾಳದಾರರ ಪರವಾದ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸಂಪರ್ಕ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ವಿಶ್ವದರ್ಜೆಯ ಸೌಲಭ್ಯ ಒದಗಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು. ರಾಜ್ಯದ 320 ಕಿ.ಮೀ. ಕರಾವಳಿ ತೀರದಲ್ಲಿ 40 ಸ್ಥಳಗಳಲ್ಲಿ ಹೋಟೆಲ್, ರೆಸಾರ್ಟ್ ಸೇರಿದಂತೆ ಇನ್ನಿತರ ಆತಿಥ್ಯ ಕೇಂದ್ರಗಳನ್ನು ಖಾಸಗಿಯವರು ಸ್ಥಾಪಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪಿಪಿಪಿ ಮಾದರಿ ಅನುಸರಿಸಲಾಗುವುದು. ಬಂಡವಾಳದಾರರು ಮುಂದೆ ಬರಬೇಕು ಎಂದು ಎಚ್.ಕೆ.ಪಾಟೀಲ್ ಕರೆ ನೀಡಿದರು. ದಕ್ಷಿಣ ಭಾರತ ಉತ್ಸವದ ಸಲಹೆಗಾರ ಶಿವಷಣ್ಮುಗಂ ಮಾತನಾಡಿ, ಯುವ ಸಬಲೀಕರಣ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿಯಿಂದ ಜನರ ಜೀವನಮಟ್ಟ ಸುಧಾರಣೆಯಾಗುತ್ತದೆ. 

ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮ ಪಾಲು ಶೇ.30ರ ಆಸು-ಪಾಸು ಇದೆ. ಅದನ್ನು ಹೆಚ್ಚಿಸಲು ಸಾಕಷ್ಟು ಅವಕಾಶ ಇದ್ದು, ತಾಣಗಳನ್ನು ಶೋಕೇಸ್ ಮಾಡಬೇಕು ಎಂದರು. ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮಾತನಾಡಿ, ಲಕ್ಷದ್ವೀಪ ಮತ್ತು ದಕ್ಷಿಣದ ಎಲ್ಲಾ ರಾಜ್ಯಗಳು ಉತ್ಸವದಲ್ಲಿ ಭಾಗವಹಿಸಿವೆ. ಆತಿಥ್ಯ ವಲಯಕ್ಕೆ ಸಂಬಂಧಿಸಿದ ರೆಸಾರ್ಟ್, ಹೋಟೆಲ್‌ಗಳು ಸೇರಿ 50 ಸಂಸ್ಥೆಗಳು ಪಾಲ್ಗೊಂಡಿವೆ. ಪ್ರವಾಸೋದ್ಯಮಿಗಳಿಗೆ ಉದ್ಯಮ ಆರಂಭಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಶೇಷ ಸೌಲಭ್ಯ ಆರೋಪ ಹಿನ್ನೆಲೆ: ನಟ ದರ್ಶನ್‌ ಇರುವ ಠಾಣೆ ಸಿಸಿಟೀವಿ ದೃಶ್ಯ ಕೋರಿ ಆರ್‌ಟಿಐ ಅರ್ಜಿ!

ದಕ್ಷಿಣ ಭಾರತ ಉತ್ಸವದಿಂದ ರಾಜ್ಯಕ್ಕೆ ₹3,750 ಕೋಟಿ ಬಂಡವಾಳ: ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ದಕ್ಷಿಣ ಭಾರತ ಉತ್ಸವದಿಂದ ರಾಜ್ಯಕ್ಕೆ 3,750 ಕೋಟಿ ರು. ಬಂಡವಾಳ ಹರಿದು ಬಂದಿದೆ. ರಾಜ್ಯದಲ್ಲಿ 25,000ಕ್ಕೂ ಹೆಚ್ಚು ಮಹತ್ವದ ಸ್ಮಾರಕ, ತಾಣಗಳಿವೆ. ಅದರಲ್ಲಿ ಕೇವಲ 5,000 ತಾಣಗಳನ್ನು ಮಾತ್ರ ನಾವು ಸಂರಕ್ಷಿಸುತ್ತಿದ್ದೇವೆ. ಉಳಿದ ತಾಣಗಳ ಸಂರಕ್ಷಣೆಗೆ ಸ್ಮಾರಕ ದತ್ತು ಯೋಜನೆ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು. 

Latest Videos
Follow Us:
Download App:
  • android
  • ios